ಪ್ರಧಾನಿ ನರೇಂದ್ರ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ 
ದೇಶ

ರಾಹುಲ್ ಗಾಂಧಿ ಕುರಿತು ವ್ಯಂಗ್ಯ: ಇತರರನ್ನು ಕೆಣಕಿ, ಅಪಹಾಸ್ಯ ಮಾಡುವುದೇ ನಿಮ್ಮ ಕೆಲಸ: ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ | PM Modi

ನವದೆಹಲಿ: 56 ವರ್ಷದ ಯುವಕ ಎಂದು ರಾಹುಲ್ ಗಾಂಧಿಯವರನ್ನುದ್ದೇಶಿಸಿ ಪ್ರಧಾನಿ ಮೋದಿ(PM Modi) ನೀಡಿದ ಹೇಳಿಕೆಗೆ ಪ್ರತ್ರಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶಕ್ಕೆ ನಿಮ್ಮ ಕೊಡುಗೆ ಏನು? ಇತರರನ್ನು ಕೆಣಕಿ, ಅಪಹಾಸ್ಯ ಮಾಡುವುದೇ ನಿಮ್ಮ ಏಕೈಕ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂಸತ್​ ಭವನ ಮುಂದೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಧಾನಿ ಮೋದಿ ವಿರುದ್ಧ ತೀಕ್ಷ್ಣ  ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ಮೋದಿಯವರ ಏಕೈಕ ಕೆಲಸ ಇತರರನ್ನು ಕೆಣಕುವುದು ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು. ಮೊದಲು, ನಿಮ್ಮ ಸ್ವಂತ ವಿಶ್ವಾಸಾರ್ಹತೆಯನ್ನು ಜನರಿಗೆ ಸಾಬೀತುಪಡಿಸಿ. ನಿಮ್ಮ ಆ 56 ಇಂಚಿನ ಎದೆ ಎಲ್ಲಿಗೆ ಹೋಯಿತು? ಎಂದು ಕಿಡಿಕಾರಿದ್ದಾರೆ.
ನೀವು ಇಂದು ಇತರರನ್ನು ಟೀಕಿಸುತ್ತೀರಿ, ಆದರೆ ನಾನು ಕೇಳುತ್ತೇನೆ, ನೀವು ನಿಜವಾಗಿಯೂ ದೇಶಕ್ಕಾಗಿ ಏನು ಮಾಡಿದ್ದೀರಿ? ನಿಮ್ಮ ಅನುಯಾಯಿಗಳು ಕಳ್ಳತನದಲ್ಲಿ ತೊಡಗಿಸಿಕೊಳ್ಳಲು ರಾಮ ಮಂದಿರ ಟ್ರಸ್ಟ್ ಅನ್ನು ರಚಿಸಿದ್ದೀರಿ. ಈಗ ಅವರು ವಿಪರೀತವಾಗಿ ಕಳ್ಳತನ ಮಾಡಿದ್ದಾರೆ. ನೀವೇ ಆ ರಾಮ ಮಂದಿರ ಟ್ರಸ್ಟ್‌ಗೆ ಜನರನ್ನು ನಾಮನಿರ್ದೇಶನ ಮಾಡಿದ್ದೀರಿ ಮತ್ತು ನಿಮ್ಮ ಸ್ವಂತ ಜನರೇ ಆ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಬ್ಬ ಪ್ರಧಾನಿಯೂ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಮಾತನಾಡುತ್ತಾರೆ. ಅಪಹಾಸ್ಯಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡುವುದಿಲ್ಲ. ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಪ್ರಧಾನಿಯವರು ಭವಿಷ್ಯದಲ್ಲಿ ಇಂತಹ ಹೇಳಿಕೆ ನೀಡುವುದನ್ನು ತಡೆಯಬೇಕು ಎಂದಿದ್ದಾರೆ.
ಇದೇ ವೇಳೆ ಪರೀಕ್ಷಾ ಅಕ್ರಮಗಳ ಆರೋಪದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ಅವರ ಜೀವನವನ್ನು ನಾಶಮಾಡಲು ಯಾರು ಹೊಣೆ? ಮೋದಿ ಸರ್ಕಾರ ಮತ್ತು ಪ್ರಧಾನಿ ಮೋದಿ ಸ್ವತಃ. ಅವರು ತಮ್ಮ ಸ್ವಂತ ದೌರ್ಬಲ್ಯಗಳನ್ನು ಮರೆಮಾಡಲು ಈ ಕೆಲಸಗಳನ್ನು ಮಾಡುತ್ತಾರೆ. ಅವರು ಇರುವವರೆಗೆ ದೇಶ ಸಮೃದ್ಧಿಯನ್ನು ಕಾಣುವುದಿಲ್ಲ. ಅವರು ಹೋದ ನಂತರವೇ ಸಮೃದ್ಧಿ ಬರುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಪ್ರಧಾನಿ ಮೋದಿ ಹೇಳಿದ್ದೇನು? 

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಇತ್ತೀಚಿನ ಸಾಧನೆಗಳನ್ನು ಶ್ಲಾಘಿಸುತ್ತಾ ಪ್ರಧಾನಿ ಮೋದಿ, ಪರೋಕ್ಷವಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಟಾಂಗ್ ನೀಡಿದ್ದಾರೆ. ಸ್ಕೈರೂಟ್ ಏರೋಸ್ಪೇಸ್‌ನ ಹಿಂದಿನ ತಂಡದ ಸಾಧನೆಯನ್ನು ಉಲ್ಲೇಖಿಸುತ್ತಾ, ಈ ಸ್ಕೈರೂಟ್ ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡುತ್ತಿರುವ ಯುವಕರು ಮತ್ತು ಅವರ ಇಡೀ ತಂಡದ ಸರಾಸರಿ ವಯಸ್ಸು ಕೇವಲ 28 ವರ್ಷಗಳು ಎಂದು ನನಗೆ ಹೇಳಲಾಗಿದೆ. ಅಂತಹ ಯುವಕರು ಈ ಕೆಲಸವನ್ನು ಸಾಧಿಸಿದ್ದಾರೆ. ನಾನು 56 ವರ್ಷ ವಯಸ್ಸಿನ ಯಾವುದೇ ಯುವಕನ ಬಗ್ಗೆ ಮಾತನಾಡುತ್ತಿಲ್ಲ ಎಂದಿದ್ದರು (ಏಜೆನ್ಸೀಸ್).