ಮೂರ್ಛೆ ತಪ್ಪಿ ಬಿದ್ದ ಸಾಂತಾಕ್ಲಾಸ್ 
ದೇಶ

ದೆಹಲಿ ವಾಯುಮಾಲಿನ್ಯಕ್ಕೆ ಮೂರ್ಛೆ ತಪ್ಪಿ ಬಿದ್ದ ಸಾಂತಾಕ್ಲಾಸ್!.. ಏನಿದು ಕಥೆ..? | Delhi air Pollution

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯದ ಗುಣಮಟ್ಟದ ಕುರಿತಾಗಿ ವಾದ ವಿವಾದಗಳು ಗುರುವಾರ ನಾಟಕೀಯ ತಿರುವು ಪಡೆದುಕೊಂಡಿದ್ದು, ಆಮ್ ಆದ್ಮಿ ಪಕ್ಷ, ಸಾಂತಾಕ್ಲಾಸ್ ವೇಷ ಧರಿಸಿದ ಪುರುಷ ನಗರದ ಬೀದಿಯಲ್ಲಿ ಕುಸಿದು ಬೀಳುವುದನ್ನು ತೋರಿಸುವ ವೀಡಿಯೊ ಸ್ಕಿಟ್​ನ್ನು ಬಿಡುಗಡೆ ಮಾಡಿದೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಆಪ್​ ನಾಯಕ ಸೌರಭ್ ಭಾರದ್ವಾಜ್, ದೆಹಲಿ ಮಾಲಿನ್ಯದಲ್ಲಿ ಸಾಂತಾಕ್ಲಾಸ್ ಮೂರ್ಛೆ ಹೋದರು ಎಂಬ ಶೀರ್ಷಿಕೆಯೊಂದಿಗೆ ಈ ಕ್ಲಿಪ್ ಹಂಚಿಕೊಂಡಿದ್ದಾರೆ.
ಮಾಲಿನ್ಯ ವಿರೋಧಿ ಮುಖವಾಡಗಳನ್ನು ಧರಿಸಿ, ಸಾಂಟಾ ಕ್ಲಾಸ್ ವೇಷಭೂಷಣಗಳಲ್ಲಿ ಇಬ್ಬರು ಪುರುಷರು ಕನ್ನಾಟ್ ಪ್ಲೇಸ್ ಬೀದಿಗಳಲ್ಲಿ ಮೂರ್ಛೆ ಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಭಾರದ್ವಾಜ್ ಸೇರಿದಂತೆ ಇತರರು ಅವರಿಗೆ ಸಿಪಿಆರ್ ಮಾಡುತ್ತಿದ್ದಾರೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟದಲ್ಲಿಯೇ ಉಳಿದಿದ್ದು , ಗುರುವಾರ ವಾಯು ಗುಣಮಟ್ಟ ಸೂಚ್ಯಂಕ (AQI) 358 ರಷ್ಟಿತ್ತು. ಹೀಗಾಗಿ ಆಮ್​ ಆದ್ಮಿ ಈ ವಿಶಿಷ್ಟ ಪ್ರತಿಭಟನೆ ನಡೆಸಿದೆ. ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷದ ಎಎಪಿ ನಡುವಿನ ತೀವ್ರ ವಾಗ್ವಾದದ ನಡುವೆಯೇ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, ಒಂದು ದಶಕಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಆಪ್​, ನಗರವನ್ನು ಸಂಪೂರ್ಣವಾಗಿ ಕೈಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಮಾಲಿನ್ಯವನ್ನು ಇನ್ನಷ್ಟು ಹದಗೆಡಿಸುವ ಉದ್ದೇಶದಿಂದಲೇ ಆಪ್​, ಉದ್ದೇಶಪೂರ್ವಕವಾಗಿ ಅನೇಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಸುಡುತ್ತಿದೆ ಎಂದು ಸಿರ್ಸಾ ಆರೋಪಿಸಿದ್ದು, ಸಾರ್ವಜನಿಕ ಆರೋಗ್ಯದ ಬಗ್ಗೆ ಆಪ್​ ಬೇಜವಾಬ್ದಾರಿಯುತವಾಗಿ ವರ್ತಿಸುತ್ತದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್​​ನ ಎಎಪಿ ಕೌನ್ಸಿಲರ್ ಒಬ್ಬರು ಕ್ಷೇತ್ರದಲ್ಲಿ ಕಸ ಸುಡುವುದನ್ನು ಮತ್ತು ಅದನ್ನು ರೆಕಾರ್ಡ್ ಮಾಡುವುದನ್ನು ನೋಡಿದ್ದಾರೆ ಎಂದು ತ್ರಿಲೋಕ್‌ಪುರಿ ಶಾಸಕರು ತಮಗೆ ತಿಳಿಸಿರುವುದಾಗಿ ಹೇಳಿಕೊಂಡ ಅವರು, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.
ಕಸ ಸುಡುವ ಆರೋಪವನ್ನು ಸುಳ್ಳು ಎಂದು ಕರೆದಿರುವ ಆಮ್​ ಆದ್ಮಿ, ಸಚಿವರು ತಮ್ಮ ಬಳಿ ಪುರಾವೆಗಳಿದ್ದರೆ ಎಫ್‌ಐಆರ್ ದಾಖಲಿಸಬೇಕು ಅಥವಾ ನಕಲಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ. ದೆಹಲಿಯ ಗಾಳಿಯ ಗುಣಮಟ್ಟ ನಿರಂತರವಾಗಿ ಹದಗೆಡುತ್ತಿರುವುದನ್ನು ವಿರೋಧಿಸಿ ಭಾರದ್ವಾಜ್ ನೇತೃತ್ವದಲ್ಲಿ ಹಲವಾರು ಎಎಪಿ ನಾಯಕರು ಜನಪಥ್‌ನಲ್ಲಿ ಪ್ರತಿಭಟನೆ ನಡೆಸಿದರು. ಪ್ರದರ್ಶನದ ಸಮಯದಲ್ಲಿ, ಸಾಂತಾಕ್ಲಾಸ್‌ನಂತೆ ವೇಷ ಧರಿಸಿದ ಇಬ್ಬರು ವ್ಯಕ್ತಿಗಳು ಮುಖವಾಡಗಳನ್ನು ಧರಿಸಿ ಪ್ರತಿಭಟನಾಕಾರರ ಜೊತೆಗೆ ಹೆಜ್ಜೆ ಹಾಕಿದರು(ಏಜೆನ್ಸೀಸ್​).