ಸಂಜಯ್ ರಾವತ್ ಮತ್ತು ಏಕನಾಥ್ ಶಿಂಧೆ 
ದೇಶ

ಇದು ಟ್ರೇಲರ್ ಅಷ್ಟೇ ಎಂಬ ಹೇಳಿಕೆ: ಹಣ, ಅಧಿಕಾರ ಇರೋವರೆಗೆ ಅಷ್ಟೇ ಅವರಿಗೆ ಗೌರವ: ಏಕನಾಥ್ ಶಿಂಧೆಗೆ ಸಂಜಯ್ ರಾವತ್ ತಿರುಗೇಟು | Sanjay Raut

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಸಂಸದರನ್ನು ತಮ್ಮತ್ತ ಸೆಳೆದಿದ್ದನ್ನು ಸಮರ್ಥಿಸಿಕೊಂಡು ಇದು ಜಸ್ಟ್ ಟ್ರೇಲರ್, ಸಿನಿಮಾ ಬಾಕಿಯಿದೆ ಎಂಬ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಹೇಳಿಕೆಗೆ ಶನಿವಾರ(ಜೂ. 20) ಪ್ರತಿಕ್ರಿಯೆ ನೀಡಿರುವ ಶಿವಸೇನಾ ನಾಯಕ ಸಂಜಯ್ ರಾವತ್ (Sanjay Raut) ಹಣ, ಅಧಿಕಾರ ಇರೋವರೆಗೆ ಅಷ್ಟೇ ಅವರಿಗೆ ಗೌರವ, ಆಮೇಲೆ ಅವರ ಮೈಮೇಲೆ ಬಟ್ಟೆ ಇರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಿವಸೇನಾ ಸಂಸ್ಥಾಪನ ದಿನವಾದ ಶುಕ್ರವಾರ ತಮ್ಮ ಬಣದ ವತಿಯಿಂದ ನಡೆಸಲಾದ ಸಭೆಯಲ್ಲಿ ಮಾತನಾಡಿದ್ದ ಡಿಸಿಎಂ ಏಕನಾಥ್ ಶಿಂಧೆ, ಶಿವಸೇನೆ (ಯುಬಿಟಿ) ಸಂಸದರ ಪಕ್ಷಾಂತರ ವಿವಾದದ ಕುರಿತು ಪ್ರತಿಕ್ರಿಯಿಸುತ್ತಾ, ಇದು ಕೇವಲ ಟ್ರೇಲರ್; ಚಿತ್ರ ಇನ್ನೂ ಬರಬೇಕಿದೆ ಎಂದು ಹೇಳಿದ್ದರು.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿರುವ ಸಂಜಯ್ ರಾವತ್, ಏಕನಾಥ್ ಶಿಂಧೆ ಅವರನ್ನು ನೀವು ಅಷ್ಟೊಂದು ಗಂಭೀರವಾಗಿ ಪರಿಗಣಿಸುತ್ತೀರಾ? ಅವರನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದನ್ನು ನಿಲ್ಲಿಸಿ. ಅವರು ಶಿವಸೇನೆಯಿಂದ ಬೇರ್ಪಟ್ಟ ಅಪ್ರಾಮಾಣಿಕ ನಾಯಕ. ಸುವೇಂದು ಅಧಿಕಾರಿಯನ್ನೂ ಗಂಭೀರವಾಗಿ ಪರಿಗಣಿಸುತ್ತೀರಾ? ಇವರೆಲ್ಲರೂ ಅಪ್ರಾಮಾಣಿಕರು. ತಮಗೆ ಎಲ್ಲವನ್ನೂ ನೀಡಿದ ಪಕ್ಷಕ್ಕೇ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ದ್ರೋಹ ಬಗೆದವರು ಯಾರೇ ಆಗಿರಲಿ, ಅವರ ಕೈಯಲ್ಲಿ ಅಧಿಕಾರ ಮತ್ತು ಹಣ ಇರುವವರೆಗೆ, ಅವರು ಇಂತಹ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಈ ಎಲ್ಲಾ ಅಧಿಕಾರವನ್ನು ಕಳೆದುಕೊಂಡ ದಿನ, ಸಾರ್ವಜನಿಕರು ಅವರ ದೇಹದ ಮೇಲಿನ ಬಟ್ಟೆಗಳನ್ನು ಸಹ ಬಿಡುವುದಿಲ್ಲ... ನೀವು ನೋಡುತ್ತೀರಿ ಎಂದು ಹೇಳಿದ್ದಾರೆ.
ಶಿವಸೇನೆಯ (ಯುಬಿಟಿ) ಒಂಬತ್ತು ಲೋಕಸಭಾ ಸಂಸದರಲ್ಲಿ ಆರು ಮಂದಿ 'ಆಪರೇಷನ್ ಟೈಗರ್' ಅಡಿಯಲ್ಲಿ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಮತ್ತು ಅವರೆಲ್ಲರೂ ಪಕ್ಷದ ಸಭೆಗೆ ಆಗಮಿಸದೇ ಜೈಪುರದಲ್ಲಿ ಠಿಕಾಣಿ ಹೂಡಿದ್ದಾರೆ ಎನ್ನಲಾಗಿದೆ.
2022 ಜೂನ್​ನಲ್ಲಿ ಏಕನಾಥ್ ಶಿಂಧೆ ಅಂದು ಸಿಎಂ ಆಗಿದ್ದ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು, ಶಿವಸೇನೆಯನ್ನು ವಿಭಜಿಸಿದರು. ಮತ್ತು ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಪತನಗೊಳಿಸಿದರು. ಬಳಿಕ ಬಿಜೆಪಿ ಜೊತೆ ಸೇರಿ ತಾವೂ ಸಿಎಂ ಆಗಿ ಆಡಳಿತ ನಡೆಸಿದರು. ಬಳಿಕ ಶಿಂಧೆ ಬಣವನ್ನು ಚುನಾವಣಾ ಆಯೋಗವು ಅಧಿಕೃತ ಶಿವಸೇನೆ ಎಂದು ಗುರುತಿಸಿತು. ಈ ಬಗ್ಗೆ ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ ನಡೆದಿದ್ದು, ಅಂತಿಮ ತೀರ್ಪು ಬರಬೇಕಿದೆ (ಏಜೆನ್ಸೀಸ್).