ಮುಂಬೈ: ಬಾಲಿವುಡ್‌ನ 'ಖಲ್‌ನಾಯಕ್' ಸಂಜಯ್ ದತ್ ಇತ್ತೀಚೆಗಷ್ಟೇ ಉದ್ಘಾಟಿಸಿದ್ದ ಐಷಾರಾಮಿ ರೆಸ್ಟೋ-ಬಾರ್ ಈಗ ತೀವ್ರ ವಿವಾದದ ಸುಳಿಯಲ್ಲಿದೆ. ಗ್ಲಾಸ್‌ನೊಳಗೆ ಜೀವಂತ ಮೀನನ್ನು ಹಾಕಿ ನೀಡಲಾಗುತ್ತಿದ್ದ ವಿಶಿಷ್ಟ ಕಾಕ್‌ಟೈಲ್(Live Fish Cocktail) ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವಿವಾದ ಮಿತಿ ಮೀರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಬಾರ್ ಆಡಳಿತ ಮಂಡಳಿ, ಈ ವಿವಾದಿತ ಪಾನೀಯವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ವಿವಾದಕ್ಕೆ ಕಾರಣವಾಗಿದ್ದು ಏನು?
ಮುಂಬೈನಲ್ಲಿ ನಟ ಸಂಜಯ್ ದತ್ ಮತ್ತು ಉದ್ಯಮಿ ಅಭಿಮನ್ಯು ಜಖರ್ ಅವರ ಪಾಲುದಾರಿಕೆಯಲ್ಲಿ 'ಅಲ್ಟಾ ಸ್ಟೆಲ್ಲಾ' (Alta Stella) ಎಂಬ ನಕ್ಷತ್ರಪುಂಜದ ಥೀಮ್ ಆಧಾರಿತ ಬಾರ್ ಆರಂಭವಾಗಿತ್ತು. ಈ ಬಾರ್‌ನಲ್ಲಿ 'ಎಬಿಸು' (Ebisu) ಎಂಬ ಹೆಸರಿನ ಕಾಕ್‌ಟೈಲ್ ಅನ್ನು ಪರಿಚಯಿಸಲಾಗಿತ್ತು. ಈ ಪಾನೀಯದ ವಿಶೇಷತೆ ಎಂದರೆ, ಕಾಕ್‌ಟೈಲ್ ಗ್ಲಾಸ್‌ನ ಕೆಳಭಾಗದಲ್ಲಿ ಜೀವಂತ 'ಬೆಟ್ಟಾ' (Betta Fish) ಮೀನನ್ನು ಬಿಡಲಾಗುತ್ತಿತ್ತು. ಅಷ್ಟೇ ಅಲ್ಲದೆ, ಗ್ಲಾಸ್‌ನ ಮೇಲ್ಭಾಗದಲ್ಲಿ ಬೆಂಕಿ ಹಚ್ಚುವ ಮೂಲಕ ಗ್ರಾಹಕರಿಗೆ ಸರ್ವ್ ಮಾಡಲಾಗುತ್ತಿತ್ತು.
ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರಾಣಿ ಪ್ರೇಮಿಗಳು ಮತ್ತು ಪ್ರಾಣಿ ಕಲ್ಯಾಣ ಸಂಸ್ಥೆಗಳು ಕೆಂಡಾಮಂಡಲವಾದವು. ಬೆಂಕಿಯ ಶಾಖ ಮತ್ತು ಆಲ್ಕೋಹಾಲ್ ಮಿಶ್ರಿತ ಪರಿಸರದಲ್ಲಿ ಮೀನುಗಳು ಅನುಭವಿಸುವ ಯಾತನೆಯ ಬಗ್ಗೆ ನೆಟ್ಟಿಗರು ಕಿಡಿಕಾರಿದರು.
ವೈರಲ್ ವಿಡಿಯೋ ನೀಡಿದ ಶಾಕ್!
ಸಂಜಯ್ ದತ್ ಅವರೇ ಹಂಚಿಕೊಂಡಿದ್ದ ಪ್ರಚಾರದ ವಿಡಿಯೋದಲ್ಲಿ ಕಾಕ್‌ಟೈಲ್‌ನಿಂದ ಬೆಂಕಿಯ ಜ್ವಾಲೆಗಳು ಏಳುತ್ತಿದ್ದರೂ ಮೀನು ಒಳಗೆ ಈಜುತ್ತಿರುವುದು ಕಂಡುಬಂದಿತ್ತು. "ಮನರಂಜನೆ ಹೆಸರಿನಲ್ಲಿ ಮೂಕ ಪ್ರಾಣಿಗಳಿಗೆ ಚಿತ್ರಹಿಂಸೆ ನೀಡುವುದು ಎಷ್ಟರ ಮಟ್ಟಿಗೆ ಸರಿ?" ಎಂದು ನೆಟ್ಟಿಗರು ಪ್ರಶ್ನಿಸಿದ್ದರು. ಪ್ರಾಣಿ ಕಲ್ಯಾಣ ಸಂಘಟನೆಗಳು ಈ ಬಗ್ಗೆ ಧ್ವನಿ ಎತ್ತಿ, ಆಮ್ಲಜನಕದ ಕೊರತೆಯಿಂದ ಮೀನುಗಳು ನಿಧಾನವಾಗಿ ಸಾಯುತ್ತವೆ ಎಂದು ಎಚ್ಚರಿಸಿದ್ದವು.
ಬಾರ್ ಮಾಲೀಕ ಅಭಿಮನ್ಯು ಜಖರ್ ಸ್ಪಷ್ಟನೆ
ವಿವಾದದ ಬೆನ್ನಲ್ಲೇ ಜಖರ್ ಹಾಸ್ಪಿಟಾಲಿಟಿಯ ವ್ಯವಸ್ಥಾಪಕ ನಿರ್ದೇಶಕ ಅಭಿಮನ್ಯು ಜಖರ್ ಪ್ರತ್ರಿಕ್ರಿಯೆ ನೀಡಿದ್ದಾರೆ. "ನಮ್ಮ ಉದ್ದೇಶ ಯಾವುದೇ ಪ್ರಾಣಿಗೆ ಹಾನಿ ಮಾಡುವುದಾಗಿರಲಿಲ್ಲ. 'ಮೀನ ರಾಶಿ'ಯ ದ್ವಂದ್ವತೆ ಮತ್ತು ದ್ರವತೆಯನ್ನು ಬಿಂಬಿಸಲು ಸೃಜನಾತ್ಮಕವಾಗಿ ಈ ಕಾಕ್‌ಟೈಲ್ ಸಿದ್ಧಪಡಿಸಲಾಗಿತ್ತು. ಬೆಟ್ಟಾ ಮೀನುಗಳು ಮೇಲ್ಮೈಯಿಂದ ಉಸಿರಾಡುವ ಸಾಮರ್ಥ್ಯ ಹೊಂದಿರುವುದರಿಂದ ಮತ್ತು ಅವು ಏಕಾಂತವಾಗಿರಲು ಇಷ್ಟಪಡುವುದರಿಂದ ನಾವು ಅವುಗಳನ್ನು ಬಳಸಿದ್ದೆವು," ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಆದರೆ, ಸಾರ್ವಜನಿಕರ ಭಾವನೆ ಮತ್ತು ಟೀಕೆಗಳನ್ನು ಗೌರವಿಸಿ, ಕೂಡಲೇ ಜಾರಿಗೆ ಬರುವಂತೆ ಈ ಕಾಕ್‌ಟೈಲ್ ಅನ್ನು ಮೆನುವಿನಿಂದ ತೆಗೆದುಹಾಕಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಾಣಿ ಹಕ್ಕುಗಳ ಪರ ಹೋರಾಡುವ ಕಾರ್ಯಕರ್ತರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. "ಐಷಾರಾಮಿ ಜೀವನದ ಹೆಸರಿನಲ್ಲಿ ಪ್ರಾಣಿಗಳನ್ನು ಅಲಂಕಾರಿಕ ವಸ್ತುಗಳಂತೆ ಬಳಸುವುದು ಅಕ್ಷಮ್ಯ. ಸಾಮಾಜಿಕ ಜಾಲತಾಣದ ಒತ್ತಡದಿಂದ ಇಂದು ಒಂದು ಜೀವ ಉಳಿದಿದೆ," ಎಂದು ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).