ಭಾರತದಲ್ಲಿ ಸ್ಮಾರ್ಟ್ಪೋನ್ ಬಳಕೆದಾರರ ಸಂಖ್ಯೆ 2025ರ ಅಕ್ಟೋಬರ್ವರೆಗೆ 120 ಕೋಟಿಗೆ ತಲುಪಿದೆ. ಜಗತ್ತಿನ ಅತಿ ದೊಡ್ಡ ಸ್ಮಾರ್ಟ್ಪೋನ್ ಮಾರುಕಟ್ಟೆ ಭಾರತ. ಆದರೆ, ನಕಲಿ ಐಎಮ್ಇಐ ನಂಬರ್ ಮುಖೇನ ಸೈಬರ್ ಅಪರಾಧ ಮತ್ತು ಸೈಬರ್ ವಂಚನೆಯ ಪ್ರಕರಣಗಳು ಗಮನಾರ್ಹವಾಗಿ ಏರಿಕೆ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ (ಐಎಮ್ಇಐ 15 ಡಿಜಿಟ್ನ ಯೂನಿಕ್ ಕೋಡ್. ಇದು ಪೋನ್ನ್ನು ಪತ್ತೆ ಮಾಡುತ್ತದೆ). ವಂಚಕರು ದೂರದ ದೇಶದಲ್ಲೋ, ದೂರದ ಪ್ರದೇಶದಲ್ಲೋ ಕುಳಿತುಕೊಂಡು ಸೈಬರ್ ವಂಚನೆ, ಡಿಜಿಟಲ್ ಬಂಧನದಂಥ ಕೃತ್ಯಗಳನ್ನು ಎಸಗುತ್ತಿದ್ದಾರೆ.
ವಂಚಕರು ಕಳ್ಳತನ ಮಾಡಿದ ಸ್ಮಾರ್ಟ್ಪೋನ್ಗಳನ್ನು ಕ್ಲೋನ್ ಮಾಡಿ, ಟ್ಯ್ರಾಕ್ನಿಂದ ತಪ್ಪಿಸಿಕೊಳ್ಳುತ್ತಾರೆ. ಇಂಥ ಪೋನ್ಗಳನ್ನು ವಂಚಕರು ಸ್ಯ್ಕಾಮ್ ಮಾಡಲು ಬಳಸುತ್ತಾರೆ ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಆದ್ದರಿಂದ, ಸ್ಮಾರ್ಟ್ಪೋನ್ನಲ್ಲೇ ಸೈಬರ್ ಸುರೆಯ ಪ್ರಬಲ ಸಾಧನವಿರಬೇಕು ಎಂದು ಸರ್ಕಾರದ ಒಡೆತನದಲ್ಲಿ "ಸಂಚಾರ್ ಸಾಥಿ' ಆ್ಯಪ್ನ್ನು ಅಭಿವೃದ್ಧಿಗೊಳಿಸಲಾಗಿದೆ. ಮತ್ತು ವಂಚನೆ ತಡೆಯಲು ಹಾಗೂ ಕಳುವಾದ ಸ್ಮಾರ್ಟ್ಪೋನ್ಗಳನ್ನು ಪತ್ತೆ ಹಚ್ಚಲು ಇದು ಪರಿಣಾಮಕಾರಿ ಸಾಧನವಾಗಿ ಸಾಬೀತಾಗಿದೆ.
ಪೊಲೀಸರಿಗೆ ಡಿವೈಸ್ ಪತ್ತೆ ಹಚ್ಚಲು ಇದು ನೆರವು ನೀಡುತ್ತದೆ. ಇಷ್ಟು ದಿನಗಳವರೆಗೆ ಸಂಚಾರ್ ಸಾಥಿ ಆ್ಯಪ್ನ್ನು ಬಳಕೆದಾರರು ಸ್ವಂತ ಇಚ್ಛೆ/ಆಸಕ್ತಿಯ ಮೂಲಕ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದರು. ಸ್ಮಾರ್ಟ್ಪೋನ್ ತಯಾರಿಕಾ ಸಂಸ್ಥೆಗಳು ಇನ್ಮುಂದೆ ಪ್ರಿ ಇನ್ಸ್ಟಾಲ್ ಆಗಿ ಈ ಆ್ಯಪ್ನ್ನು ಅಳವಡಿಸಬೇಕು ಎಂದು ಕೇಂದ್ರ ದೂರಸಂಪರ್ಕ ಸಚಿವಾಲಯ ಸೂಚಿಸುತ್ತಿದ್ದಂತೆ, ಇಡೀ ಪ್ರಕರಣ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ.
ಆ್ಯಪಲ್ ವಿರೋಧ
ಆ್ಯಪಲ್ ಕಂಪನಿಯ ಆಂತರಿಕ ನೀತಿಯು, ಯಾವುದೇ ಸರ್ಕಾರಿ ಅಥವಾ ಥರ್ಡ್ ಪಾರ್ಟಿ ಆ್ಯಪ್ನ್ನು ಪೋನ್ ಮಾರಾಟಕ್ಕೆ ಮುಂಚೆ ಪ್ರಿ ಇನ್ಸ್ಟಾಲ್ ಮಾಡಲು ಅನುಮತಿಸುವುದಿಲ್ಲ. ಇದಕ್ಕೂ ಮುನ್ನ ಆ್ಯಂಟಿ ಸ್ಪ್ಯಾಮ್ ಆ್ಯಪ್ಗೆ ಸಂಬಂಧಿಸಿ ಆ್ಯಪಲ್ ಮತ್ತು ಟ್ರಾಯ್ ನಡುವೆ ವಿವಾದ ಏರ್ಪಟ್ಟಿತ್ತು. "ಸಂಚಾರ್ ಸಾಥಿ' ಆ್ಯಪ್ನ್ನು ಪ್ರಿ ಇನ್ಸ್ಟಾಲ್ ಮಾಡಲು ಸಾಧ್ಯವಿಲ್ಲ ಎಂದು ಆ್ಯಪಲ್ ಸಂಸ್ಥೆ ಪ್ರತಿಕ್ರಿಯಿಸಿದೆ. ಆದರೆ, ಐ ಪೋನ್ಗಳಲ್ಲಿ ಬಳಕೆದಾರರಿಗೆ ಸ್ವಯಂಸ್ಫೂರ್ತಿಯಿಂದ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಆ್ಯಪಲ್ ಸಂಸ್ಥೆ ಸೂಚಿಸುವ ಆಯ್ಕೆ ಮುಕ್ತವಾಗಿದ್ದು, ಇದರಿಂದ ವಿವಾದದಿಂದಲೂ ಪಾರಾಗಬಹುದು ಎನ್ನುತ್ತಾರೆ ದೂರಸಂಪರ್ಕ ಕ್ಷೇತ್ರದ ತಜ್ಞರು.
ಸರ್ಕಾರದ ಉದ್ದೇಶವೇನು?
ಸೈಬರ್ ವಂಚನೆ, ಸೈಬರ್ ಅಪರಾಧ ಮತ್ತು ಡಿಜಿಟಲ್ ಅರೆಸ್ಟ್ನ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರುಮುಖವಾಗಿದ್ದು, ಇದನ್ನು ತಡೆಯಲು ಸರ್ಕಾರ ನಾನಾ ಉಪಾಯ ಮಾಡುತ್ತಿದೆ. ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ತನಿಖೆಯನ್ನು ಸಿಬಿಐಗೆ ವಹಿಸಲು ಸೂಚಿಸಿದೆ. ಹಾಗಾಗಿ, ವಂಚನೆಗಳನ್ನು ತಡೆಗಟ್ಟಿ, ಸ್ಮಾರ್ಟ್ಪೋನ್ ಬಳಕೆದಾರರನ್ನು ಸುರತವಾಗಿಸಲು ಎಲ್ಲ ಪ್ರಮುಖ ಸ್ಮಾರ್ಟ್ಪೋನ್ ಬ್ರ್ಯಾಡ್ಗಳಲ್ಲಿ "ಸಂಚಾರ್ ಸಾಥಿ' ಆ್ಯಪ್ ಇನಸ್ಟಾಲ್ ಮಾಡುವ ಉದ್ದೇಶ ಸರ್ಕಾರದ್ದು. ನಕಲಿ ಐಎಂಇಐ ಸಂಖ್ಯೆ ಬಳಸಿ ವಂಚಿಸುವ ಪ್ರಯತ್ನಗಳನ್ನು ವಿಫಲಗೊಳಿಸಲು ಮತ್ತು ಸೈಬರ್ ಅಪರಾಧ ತಡೆಯಲು ಇದು ಪರಿಣಾಮಕಾರಿ ಅಸ್ತ್ರ ಎಂದು ಸರ್ಕಾರ ಭಾವಿಸಿದೆ. ಹೊಸದಾಗಿ ತಯಾರಾಗುವ ಸ್ಮಾರ್ಟ್ಪೋನ್ಗಳಲ್ಲಿ ಈ ಆ್ಯಪ್ ಅನ್ನು ಪ್ರಿ ಇನ್ಸ್ಟಾಲ್ ಮಾಡಿದರೆ, ಬಳಕೆದಾರರಿಗೆ ಅನುಕೂಲ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.
ವಂಚನೆ ತಡೆಗೆ ಸಹಕಾರಿ
"ಸಂಚಾರ್ ಸಾಥಿ' ವೆಬ್ಪೋರ್ಟಲ್ನ್ನು 2023ರ ಮೇ 16ರಂದು ಬಿಡುಗಡೆ ಮಾಡಲಾಯಿತು. ವೆಬ್ ಪೋರ್ಟಲ್ನ ಪರಿಷ್ಕೃತ ರೂಪವಾಗಿ ಸಂಚಾರ್ ಸಾಥಿ ಆ್ಯಪ್ನ್ನು ದೂರಸಂಪರ್ಕ ಇಲಾಖೆಯು 2025ರ ಜನವರಿಯಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಬಿಡುಗಡೆ ಮಾಡಿತು.
- ಮೊಬೈಲ್ ಪೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಬಳಕೆದಾರರು ಯಾವುದೇ ನೆಟ್ವರ್ಕ್ ಇದ್ದರೂ ಮೊಬೈಲ್ ಪೋನ್ನ್ನು ಈ ಆ್ಯಪ್ ಮುಖೇನ ಬ್ಲಾಕ್ ಮಾಡಬಹುದು. ಬ್ಲಾಕ್ ಆದ ಬಳಿಕ ದೇಶದ ಯಾವುದೇ ಭಾಗದಲ್ಲಿ ಆ ಮೊಬೈಲ್ ಪೋನ್ ಬಳಕೆಯಾದರೂ, ಕಾನೂನು ಜಾರಿ ಸಂಸ್ಥೆಗಳಿಗೆ ಮಾಹಿತಿ ಲಭ್ಯವಾಗುತ್ತದೆ. ಅಲ್ಲದೆ, ಪೋನ್ ದೊರೆತ ಬಳಿಕ ಅಂದರೆ ಬಳಕೆದಾರರ ಕೈಗೆ ಸೇರಿದ ಬಳಿಕ ಅನ್ ಬ್ಲಾಕ್ ಮಾಡುವ ಅವಕಾಶವನ್ನು ಈ ಆ್ಯಪ್ ದೇಶಾದ್ಯಂತ ವಿಸ್ತರಿಸಿದೆ.
- ಬಳಸಿದ ಪೋನ್ ಖರೀದಿಸುವ ಮೊದಲು (ಸೆಕೆಂಡ್ ಹ್ಯಾಂಡ್ ಖರೀದಿ) ಅದರ ಅಸಲಿತನವನ್ನು ಪರೀಸಬಹುದು.
- ಸೈಬರ್ ವಂಚನೆಗಳು ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿವೆ. ಇದನ್ನು ತಡೆಯಲು ಆ್ಯಪ್ನಲ್ಲಿ "ಚಕ್ಷು' ಸೌಲಭ್ಯವಿದ್ದು, ವಂಚನೆಯ ಕರೆ, ಮೇಸೇಜ್, ಒಟಿಪಿ ಎಂದು ಬಳಕೆದಾರರಿಗೆ ತಿಳಿದು ಬಂದರೆ ಅಥವಾ ದಟ್ಟವಾದ ಅನುಮಾನ ಬಂದರೆ ಕರೆ, ಸಾಮಾನ್ಯ ಸಂದೇಶ ಹಾಗೂ ವಾಟ್ಸ್ಆ್ಯಪ್ ಸಂದೇಶವನ್ನು ಬ್ಲಾಕ್ ಮಾಡಬಹುದು. ಮತ್ತು ರಿಪೋರ್ಟ್ ಮಾಡುವ ಆಯ್ಕೆ ಇದ್ದು, ವಂಚಕರಿಂದ ಇತರರು ಕರೆ, ಸಂದೇಶ ಸ್ವೀಕರಿಸುವುದನ್ನು ತಪ್ಪಿಸಬಹುದು. ಸೈಬರ್ ವಂಚನೆ ತಡೆಯ ನಿಟ್ಟಿನಲ್ಲಿ ಇದು ಬಹು ಪರಿಣಾಮಕಾರಿ.
- ಗ್ರಾಹಕರ (ಬಳಕೆದಾರ) ಹೆಸರಿನಲ್ಲಿ ನೋಂದಣಿಯಾಗಿರುವ ಸಂಖ್ಯೆಗಳನ್ನೂ (ಸಿಮ್ ಕಾರ್ಡ್) ಇದರಲ್ಲಿ ಒಂದೇ ಕ್ಲಿಕ್ಕಿನಲ್ಲಿ ಪರಿಶೀಲನೆ ಮಾಡಬಹುದು. ನಿಮ್ಮ ದಾಖಲೆಗಳನ್ನು (ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ, ಮತದಾರರ ಗುರುತಿನ ಚೀಟಿ, ಡೆವಿಂಗ್ ಲೈಸೆನ್ಸ್) ಅನಧಿಕೃತವಾಗಿ ಬಳಸಿಕೊಂಡು, ಯಾರಾದರೂ ಸಿಮ್ ಸಂಪರ್ಕ ಪಡೆದುಕೊಂಡಿದ್ದರೆ, ಅಂಥ ಅನಧಿಕೃತ ಸಂಪರ್ಕದ ಬಗ್ಗೆ ರಿಪೋರ್ಟ್ ಮಾಡಿ, ಆ ಸಂಪರ್ಕವನ್ನು ಸ್ಥಗಿತಗೊಳಿಸಬಹುದು.
- "ನೋ ಯುವರ್ ಮೊಬೈಲ್' ಸೌಲಭ್ಯದ ಮೂಲಕ, ಬಳಕೆದಾರರು ತಮ್ಮ ಸ್ಮಾರ್ಟ್ಪೋನ್ಗಳ ಅಧಿಕೃತತೆಯನ್ನು ಪರಿಶೀಲಿಸಬಹುದು.
ಸ್ಮಾರ್ಟ್ಪೋನ್ಗಳಲ್ಲಿ ಸಂಚಾರ್ ಸಾಥಿ ಆ್ಯಪ್ ಪ್ರಿ ಇನ್ಸ್ಟಾಲ್ ಮಾಡಿದರೆ, ಅದರಿಂದ ಖಂಡಿತವಾಗಿಯೂ ಬಳಕೆದಾರರಿಗೆ ಅನುಕೂಲವಿದೆ. ಫ್ರಾಡ್ ಕಾಲ್ ರಿಪೋರ್ಟ್ ಮಾಡಿದರೆ ಸ್ಪ್ಯಾಮ್ ಕಡಿಮೆಯಾಗಬಹುದು. ಕಳ್ಳತನ ಮಾಡಿದ ಪೋನ್ ಇದ್ದರೆ ಐಎಮ್ಇಐ ಪರಿಶೀಲಿಸಿ, ಕೂಡಲೇ ಅದನ್ನು ಬ್ಲಾಕ್ ಮಾಡಬಹುದು. ಸ್ಮಾರ್ಟ್ಪೋನ್ ಕಳೆದುಹೋದರೆ ಕೂಡಲೇ ರೀಪೋರ್ಟ್ ಮಾಡಬಹುದು. ಅಲ್ಲದೆ, ಆ್ಯಪ್ ಮುಂದಿನ ದಿನಗಳಲ್ಲಿ ಮತ್ತಷ್ಟು ಫೀಚರ್ಗಳನ್ನು ಒಳಗೊಳ್ಳಲಿದೆ. ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಫ್ರಾಡ್ ಡಿಟೆಕ್ಷನ್ ಮತ್ತು ಟ್ಯ್ರಾಕಿಂಗ್ ಸೌಲಭ್ಯ ವಿಸ್ತರಣೆಯಾದಲ್ಲಿ, ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎನ್ನುತ್ತಾರೆ ತಜ್ಞರು.
ಪ್ರಮುಖಾಂಶಗಳು
- ಸಂಚಾರ್ ಸಾಥಿ ಆ್ಯಪ್ನ್ನು ಈವರೆಗೆ 1 ಕೋಟಿಗೂ ಅಧಿಕ ಡೌನ್ಲೋಡ್ ಮಾಡಿಕೊಳ್ಳಲಾಗಿದೆ.
- ಕಳ್ಳತನವಾದ ಅಥವಾ ಕಳೆದು ಹೋದ 7 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್ಪೋನ್ಗಳನ್ನು ಪತ್ತೆ ಹಚ್ಚಲಾಗಿದೆ. 2025ರ ಅಕ್ಟೋಬರ್ ತಿಂಗಳೊಂದರಲ್ಲೇ 50 ಸಾವಿರ ಸ್ಮಾರ್ಟ್ಪೋನ್ಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ಒಪ್ಪಿಸಲಾಗಿದೆ.
- ಆ್ಯಪ್ ನೆರವಿನ ಮೂಲಕ 3 ಕೋಟಿಗೂ ಅಧಿಕ ನಕಲಿ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.
- ಕಳ್ಳತನದ ಬಳಿಕ ಉಪಯೋಗಿಸುತ್ತಿದ್ದ 37 ಲಕ್ಷ ಹ್ಯಾಂಡ್ಸೆಟ್ಗಳನ್ನು ಬ್ಲಾಕ್ ಮಾಡಲಾಗಿದೆ.
ಸ್ಮಾರ್ಟ್ಪೋನ್ಗಳಲ್ಲಿ ಸಂಚಾರ್ ಸಾಥಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಕಡ್ಡಾಯವಲ್ಲ. ಇದು ಬಳಕೆದಾರರ ವಿವೇಚನೆಗೆ ಬಿಟ್ಟಿದ್ದು. ಬಳಕೆದಾರ ತನಗೆ ಬೇಡವೆನಿಸಿದರೆ ಆ್ಯಪ್ನ್ನು ಡಿಲೀಟ್ ಮಾಡಬಹುದು. ವಂಚನೆ ತಡೆಯ ಉದ್ದೇಶದಿಂದ ಸಂಚಾರ್ ಸಾಥಿ ಆ್ಯಪ್ನ್ನು ಪ್ರತಿಯೊಬ್ಬರಿಗೂ ಪರಿಚಯಿಸುವುದು ನಮ್ಮ ಉದ್ದೇಶವಾಗಿದೆ. ಸ್ಮಾರ್ಟ್ಪೋನ್ ಬಳಕೆದಾರರು ತಮ್ಮನ್ನು ಸುರತವಾಗಿಟ್ಟುಕೊಳ್ಳಲು ಇರುವ ಆ್ಯಪ್ ಇದಾಗಿದೆ. ಮೋಸ, ವಂಚನೆ ಮತ್ತು ಸ್ಮಾರ್ಟ್ಪೋನ್ ಕಳ್ಳತನದಿಂದ ಬಳಕೆದಾರರಿಗೆ ರಕ್ಷಣೆ ನೀಡಲು ಈ ಆ್ಯಪ್ನ್ನು ಬಳಸಲು ಸೂಚಿಸಲಾಗಿದೆಯೇ ಹೊರತು ನಾವು ಬಳಕೆದಾರರ ಕಾಲ್ ಟ್ಯ್ರಾಕ್ ಮಾಡುವುದಿಲ್ಲ. ಆದರೆ, ಈ ಆ್ಯಪ್ನ ಬಳಕೆ ಕಡ್ಡಾಯವಲ್ಲ. ಸ್ಮಾರ್ಟ್ಪೋನ್ ಬಳಕೆದಾರನಿಗೆ ಆ್ಯಪ್ನ್ನು ಬಳಸುವ ಅಥವಾ ಡಿಲೀಟ್ ಮಾಡುವ ಆಯ್ಕೆ ಇದೆ.
> ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ದೂರಸಂಪರ್ಕ ಸಚಿವ
ಇದು ಜನರ ಖಾಸಗಿತನದ ಮೇಲೆ ಸರ್ಕಾರ ನಡೆಸುತ್ತಿರುವ ನೇರಾನೇರ ದಾಳಿಯಾಗಿದೆ. ಜನರ ಬೇಹುಗಾರಿಕೆ ನಡೆಸಲು ಸರ್ಕಾರ ಈ ಆ್ಯಪ್ನ್ನು ಬಳಸುತ್ತಿದೆ. ನಾಗರಿಕರ ಮೇಲೆ ನಿರಂತರ ಕಣ್ಗಾವಲು ಇಡಲು ಸರ್ಕಾರ ಪ್ರಯತ್ನಿಸುತ್ತಿದೆ. ಸೈಬರ್ ವಂಚನೆ ತಡೆಯಲು, ಇಂಥ ಪ್ರಕರಣಗಳನ್ನು ರಿಪೋರ್ಟ್ ಮಾಡಲು ಒಂದು ಸಿಸ್ಟಮ್ನ ಅಗತ್ಯವಿದೆ. ಆದರೆ, ಸರ್ಕಾರ ಈ ಆದೇಶದ ಮೂಲಕ ಜನರ ಖಾಸಗಿ ಬದುಕಿನಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದೆ.
> ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ನಾಯಕಿ