ಸಂಪಾಕೀಯ: ಜನಾದೇಶಕ್ಕೆ ಅಗೌರವ 
ದೇಶ

ಸಂಪಾಕೀಯ: ಜನಾದೇಶಕ್ಕೆ ಅಗೌರವ

ಸಂಪಾಕೀಯ: ರಾಜಕೀಯ ಆರೋಪ-ಪ್ರತ್ಯಾರೋಪ ಚುನಾವಣೆಯ ಸಮಯದಲ್ಲಿ ಸಾಮಾನ್ಯ. ಆದರೆ, ಚುನಾವಣೆಯ ಬಳಿಕ ಜನಾದೇಶವನ್ನು ವಿನಮ್ರವಾಗಿ ಒಪ್ಪಿಕೊಳ್ಳಬೇಕು. ಜನತಾ ಜನಾರ್ದನ ನೀಡಿದ ತೀರ್ಪನ್ನು ಎಲ್ಲ ರಾಜಕೀಯ ಪಕ್ಷಗಳು ಮತ್ತು ನಾಯಕರು ಗೌರವಿಸಬೇಕು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಪಾರದರ್ಶಕ ಹಾಗೂ ಪರಿಣಾಮಕಾರಿ ಚುನಾವಣೆ ವ್ಯವಸ್ಥೆಯನ್ನು ಜಗತ್ತಿನ ಹಲವು ದೇಶಗಳು ಮುಕ್ತಕಂಠದಿಂದ ಪ್ರಶಂಸಿಸಿವೆ. ಇಲ್ಲಿ ನಡೆಯುವ ಚುನಾವಣೆ ಪ್ರಕ್ರಿಯೆ ವೀಕ್ಷಿಸಲು ವಿದೇಶಗಳ ಪ್ರತಿನಿಧಿಗಳು ಆಗಮಿಸಿದ್ದಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಸೋಲಿನ ತೀವ್ರ ಹತಾಶೆಯಲ್ಲಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ‘ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಟಿಎಂಸಿಯನ್ನು ಸೋಲಿಸಿದ್ದು ಜನರಲ್ಲ, ಚುನಾವಣಾ ಆಯೋಗ’ ಎಂಬ ಅವಿವೇಕದ ಮಾತುಗಳನ್ನಾಡಿರುವುದು ಖಂಡನೀಯ. ಇದು ಕೆಟ್ಟ ವ್ಯವಸ್ಥೆಗೆ ನಾಂದಿಯಾಗಬಹುದು. ಇನ್ಮುಂದೆ ಚುನಾವಣೆಯಲ್ಲಿ ಸೋತವರೆಲ್ಲ ಯಾವುದೋ ನೆಪ ಹೇಳಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅನುಮಾನಿಸುವ, ಅವಮಾನಿಸುವ ಚಾಳಿ ಬೆಳೆಯಬಾರದು.
ಮಮತಾ ಬ್ಯಾನರ್ಜಿ ಹಿರಿಯ ರಾಜಕಾರಣಿ. ಹದಿನೈದು ವರ್ಷಗಳ ಕಾಲ ಅಂದರೆ ಸತತವಾಗಿ ಮೂರು ಅವಧಿಗೆ ಪಶ್ಚಿಮ ಬಂಗಾಳವನ್ನು ಮುಖ್ಯಮಂತ್ರಿಯಾಗಿ ಆಳಿದವರು. ಹೀಗಾಗಿ ಮಮತಾ ಕಡೆಯಿಂದ ಇಂಥ ನಡೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇಂಥ ರಾಜಕಾರಣಿಗಳಿಗೆ ತಾವು ಗೆದ್ದಾಗ ಚುನಾವಣಾ ಆಯೋಗ ಮತ್ತು ಸಂಬಂಧಪಟ್ಟ ವ್ಯವಸ್ಥೆ ಎಲ್ಲವೂ ಚೆನ್ನಾಗಿರುತ್ತದೆ, ಸೋತಾಗ ಮಾತ್ರ ಸಾಂವಿಧಾನಿಕ ಸಂಸ್ಥೆ ಚುನಾವಣಾ ಆಯೋಗವನ್ನು ದೂರುವುದು, ಇವಿಎಂಗಳ ಮೇಲೆ ಅಪವಾದ ಹೊರಿಸುವುದು ತೀವ್ರ ಬಾಲಿಶತನ ಎನಿಸುತ್ತದೆ. ಆಡಳಿತ ಪಕ್ಷದಷ್ಟೇ, ನಮ್ಮಲ್ಲಿ ಪ್ರತಿಪಕ್ಷಕ್ಕೂ ಪ್ರಾಮುಖ್ಯವಿದೆ ಮತ್ತು ಮಹತ್ತರ ಜವಾಬ್ದಾರಿ ಇದೆ. ಹೀಗಾಗಿ, ಆಡಳಿತವನ್ನು ಕಳೆದುಕೊಂಡು ಪ್ರತಿಪಕ್ಷದಲ್ಲಿ ಕೂರುವ ಸಂದರ್ಭ ಬಂದಾಗ, ಆ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಬೇಕೇ ಹೊರತು, ಅನುಚಿತವಾಗಿ ನಡೆದುಕೊಳ್ಳಬಾರದು.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಲೋಕಸಭೆಯಲ್ಲಿ ವಿಶ್ವಾಸಮತ ಮಂಡನೆಯ ವೇಳೆ ಕೇವಲ ಒಂದೇ ಮತದ ಅಂತರದಿಂದ ಸೋಲು ಕಂಡಿತು. ಆದರೆ, ಹಿರಿಯ ರಾಜಕಾರಣಿ, ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಹುದ್ದೆಯನ್ನು ತೊರೆಯಲು ಹಿಂದೆ-ಮುಂದೆ ನೋಡಲಿಲ್ಲ. ಅಲ್ಲದೆ, ‘ಪ್ರತಿಪಕ್ಷದಲ್ಲಿ ಕುಳಿತು ಜನರ ಸೇವೆ ಮಾಡುತ್ತೇವೆ’ ಎಂದು ದೇಶಕ್ಕೆ ಆಶ್ವಾಸನೆ ನೀಡಿದರು. ಆದರೆ, ಮಮತಾ ಬ್ಯಾನರ್ಜಿ ವರ್ತನೆ ಇದಕ್ಕೆ ತದ್ವಿರುದ್ಧವಾಗಿದೆ. ಕೇವಲ ಪ್ರಚಾರಕ್ಕಾಗಿ ವಿವಾದಾಸ್ಪದ ಹೇಳಿಕೆ ನೀಡುವ ಸಂಜಯ್ ರಾವುತ್ ಅಂತಹ ರಾಜಕಾರಣಿಗಳು ಮಮತಾ ಹೇಳಿಕೆಯನ್ನು ಬೆಂಬಲಿಸಿರುವುದು ವಿಪರ್ಯಾಸ.
ಮುಖ್ಯಮಂತ್ರಿ ಸ್ಥಾನಕ್ಕೆ ಮಮತಾ ರಾಜೀನಾಮೆ ನೀಡದಿದ್ದರೂ, ಹೊಸ ಸರ್ಕಾರ ರಚಿಸಲು ಅವಕಾಶ ಮಾಡಿಕೊಡುವ ಸಾಂವಿಧಾನಿಕ ಅಧಿಕಾರವನ್ನು ರಾಜ್ಯಪಾಲರು ಹೊಂದಿದ್ದಾರೆ ಮತ್ತು ಇಂಥ ಬಿಕ್ಕಟ್ಟಿನ ಸಮಯದಲ್ಲಿ ರಾಜ್ಯಪಾಲರು ತಮ್ಮ ಆ ಅಧಿಕಾರವನ್ನು ಚಲಾಯಿಸುತ್ತಾರೆ. ಅದರಂತೆ ಬಹುಮತ ಪಡೆದ ಪಕ್ಷವು ಸರ್ಕಾರ ರಚಿಸುತ್ತದೆ. ಆದರೆ, ಜನಾದೇಶವನ್ನು ಒಪ್ಪಿಕೊಳ್ಳದೆ, ಸಾಂವಿಧಾನಿಕ ನಿಯಮಗಳನ್ನು ಪಾಲಿಸದೆ ಧೂರ್ತತನ ಪ್ರದರ್ಶಿಸುವುದು ಸರಿಯಲ್ಲ. ಇಂಥ ಕೆಟ್ಟ ಪರಂಪರೆಯನ್ನು ಆರಂಭದಲ್ಲೇ ತಡೆಯಬೇಕಿದೆ. ಮಮತಾ ತಪ್ಪನ್ನು ಅರ್ಥ ಮಾಡಿಕೊಂಡು ವಿವೇಕದ ನಡೆ ಪ್ರದರ್ಶಿಸಬೇಕಿದೆ.