ಸಂಪಾದಕೀಯ: ಎಐ ಚಾಟ್ಬಾಟ್ ಗ್ರೋಕ್ನಂಥವುಗಳ ಮೂಲಕ ಅಸಭ್ಯ ಮತ್ತು ಲೈಂಗಿಕ ಕಂಟೆಂಟ್ಗಳನ್ನು ಸೃಷ್ಟಿಸಿ ಹಂಚಿಕೊಳ್ಳಲಾಗುತ್ತಿದೆ ಎಂಬ ಸಂಗತಿ ಈಗ ವ್ಯಾಪಕ ಕಳವಳಕ್ಕೆ ಕಾರಣವಾಗಿದೆ. ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವಾಲಯವು ಈ ಬಗ್ಗೆ ಎಕ್ಸ್ ಸಾಮಾಜಿಕ ಮಾಧ್ಯಮ ವೇದಿಕೆಗೆ ಕೆಲ ಸೂಚನೆಗಳನ್ನು ನೀಡಿತ್ತು. ವಿಶೇಷವಾಗಿ ಗ್ರೋಕ್ ಮುಖಾಂತರ ಸೃಷ್ಟಿಸಲಾದ ಅಶ್ಲೀಲ, ಕಾನೂನುಬಾಹಿರ ಅಂಶಗಳನ್ನು ತೆಗೆದುಹಾಕುವಂತೆ ಎಲಾನ್ ಮಸ್ಕ್ ಒಡೆತನದ ಎಕ್ಸ್ಗೆ ಸಚಿವಾಲಯ ನಿರ್ದೇಶನ ನೀಡಿತ್ತು. ಇದರನ್ವಯ, ಭಾನುವಾರದ ಹೊತ್ತಿಗೆ 3,500 ಕ್ಕೂ ಅಧಿಕ ಕಂಟೆಂಟ್ಗಳನ್ನು ಬ್ಲಾಕ್ ಮಾಡಿ, 600ಕ್ಕಿಂತ ಹೆಚ್ಚು ಖಾತೆಗಳನ್ನು ಡಿಲೀಟ್ ಮಾಡಿರುವುದಾಗಿ ಕಂಪನಿ ತಿಳಿಸಿದೆ. ನಕಲಿ ಪ್ರೊಫೈಲ್ಗಳ ಸೃಷ್ಟಿ ಮಾತ್ರವಲ್ಲದೆ, ಚಿತ್ರ ಅಥವಾ ವಿಡಿಯೋಗಳಲ್ಲಿ ಕಂಡುಬಂದ ಮಹಿಳೆಯರನ್ನು ಗುರಿಯಾಗಿಸಿ ಕಿರುಕುಳ ನೀಡಲು ಸಹ ಗ್ರೋಕ್ ಎಐ ವೇದಿಕೆಯನ್ನು ಬಳಸಲಾಗುತ್ತಿದೆಯೆಂಬ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವಾಲಯವು ಎಕ್ಸ್ಗೆ ನೀಡಿದ ನೋಟಿಸಿನಲ್ಲಿ ಪ್ರಸ್ತಾಪಿಸಿತ್ತು.
ಅಸಭ್ಯ ಕಂಟೆಂಟ್ಗಳನ್ನು ತೆಗೆದುಹಾಕದಿದ್ದರೆ ಮಾಹಿತಿ ತಂತ್ರಜ್ಞಾನ ಕಾನೂನು ಹಾಗೂ ಇತರ ನಿಯಮಗಳನ್ವಯ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿತ್ತು. ಈ ಎಚ್ಚರಿಕೆ ಕೆಲ ಮಟ್ಟಿಗೆ ಕೆಲಸ ಮಾಡಿದಂತಿದೆ. ಯಾರೋ ಅನಾಮಿಕರು ಎಲ್ಲೋ ಕೂತು ಮಾಡುವ ಇಂಥ ಕಿತಾಪತಿಗಳಿಗೆ ಅಮಾಯಕರು ಸಂಕಷ್ಟ ಅನುಭವಿಸುವಂತಾಗುವುದು ಬಹಳ ಗಂಭೀರ ಹಾಗೂ ಆತಂಕದ ಸಂಗತಿ. ಈಚಿನ ದಿನಗಳಲ್ಲಂತೂ ಡಿಜಿಟಲ್ ವೇದಿಕೆಯ ಮೂಲಕ ಮಾಡುವ ಅವಾಂತರಗಳು ಮಿತಿಮೀರುತ್ತಿದ್ದು, ಜನರು ನಾನಾ ಬಗೆಯ ಕಿರುಕುಳಕ್ಕೆ ಒಳಗಾಗುವಂತಾಗಿದೆ. ಪೊಲೀಸ್ ವ್ಯವಸ್ಥೆಯಲ್ಲಿ ಸೈಬರ್ ಅಪರಾಧಗಳ ನಿರ್ವಹಣೆಗೆ ಪ್ರತ್ಯೇಕ ವಿಭಾಗ ಸ್ಥಾಪಿಸಲಾಗಿದೆಯಾದರೂ, ವರದಿಯಾಗುತ್ತಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಅಪರಾಧಿಗಳನ್ನು ಕಾನೂನು ವ್ಯಾಪ್ತಿಯಲ್ಲಿ ತರುವುದು ದೊಡ್ಡ ಸವಾಲಾಗಿದೆ. ಡಿಜಿಟಲ್ ವೇದಿಕೆಗೆ ದೇಶಗಳ ಗಡಿ ಇರದಿರುವುದು ಮತ್ತೊಂದು ಸವಾಲು. ಭಾರತದ ಕಾನೂನಿಗೆ ಅನುಗುಣವಾಗಿ ಕಾರ್ಯನಿರ್ವಹಣೆ ಮಾಡುವುದಾಗಿ ಎಕ್ಸ್ ಕಂಪನಿ ಭರವಸೆ ನೀಡಿದೆ.
ಈ ನಿಟ್ಟಿನಲ್ಲಿ ತನ್ನ ಕಂಟೆಂಟ್ ಬದಲಾವಣೆ ಪ್ರಕ್ರಿಯೆಯನ್ನು ಬಲಪಡಿಸುವುದಾಗಿಯೂ ಅದು ಹೇಳಿದೆ. ಆದರೆ ಈ ಮಾತನ್ನು ನಿರಂತರವಾಗಿ ನಡೆಸಿಕೊಂಡು ಹೋಗಬೇಕಾದುದು ಮುಖ್ಯ. ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಂದಾಗ ಅಥವಾ ಸರ್ಕಾರಗಳು ಸೂಚನೆ ನೀಡಿದಾಗ ಮಾತ್ರ ನಿಯಮ ಪಾಲನೆ ಮಾಡುವಂತಾಗಬಾರದು. ಏಕೆಂದರೆ ಇಂಥ ಕೃತ್ಯಗಳು ನಿತ್ಯವೂ ನಡೆಯುತ್ತಿರುತ್ತವೆ.
ಹೀಗಾಗಿ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ನಿರಂತರ ಕಣ್ಗಾವಲು ವ್ಯವಸ್ಥೆಯನ್ನು ರೂಪಿಸಿಕೊಂಡು ಅದಕ್ಕನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ. ಈ ವೇದಿಕೆಗಳಲ್ಲಿ ಯಾರು, ಏನನ್ನು ಪೋಸ್ಟ್ ಮಾಡುತ್ತಾರೆ ಎಂಬ ಬಗ್ಗೆ ಸರಿಯಾದ ಶೋಧಕ ವ್ಯವಸ್ಥೆ ಇರದಿರುವುದು ಸಮಸ್ಯೆಗೆ ಕಾರಣ. ಎಐ ಸಂಬಂಧಿತ ಗ್ರೋಕ್ ಮಾತ್ರವಲ್ಲ, ಎಲ್ಲ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೂ ಒಂದು ಮಟ್ಟಿನ ನಿಯಂತ್ರಣ ಅನಿವಾರ್ಯ. ಈ ಸಾಮಾಜಿಕ ಮಾಧ್ಯಮಗಳು ಜನರಿಗೆ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಿವೆ ಎಂಬುದು ಖರೆ. ಅದೇ ಹೊತ್ತಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅವು ನಿಯಂತ್ರಣ ಕ್ರಮಗಳನ್ನು ಕೂಡ ತೆಗೆದುಕೊಳ್ಳಬೇಕಾದುದು ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಅಪೇಕ್ಷಣೀಯ ಮತ್ತು ಅನಿವಾರ್ಯ. ಜನರು ಕೂಡ ಇವುಗಳನ್ನು ವಿವೇಚನೆಯಿಂದ, ಸ್ವನಿಯಂತ್ರಣದೊಂದಿಗೆ ಬಳಸಿದರೆ ದುರುಪಯೋಗಕ್ಕೆ ಸ್ವಲ್ಪ ಕಡಿವಾಣ ಬೀಳಬಹುದು.