ಸಂಪಾಕೀಯ: ಶ್ಲಾಘನೀಯ ಹೆಜ್ಜೆ 
ದೇಶ

ಸಂಪಾದಕೀಯ: ಶ್ಲಾಘನೀಯ ಹೆಜ್ಜೆ

ವಿಶ್ವಾಸ್​ ಎನ್​ ಜೋಳದಾಳು

‘ಆನ್​ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ 2025’ರಡಿ ಕೇಂದ್ರ ಸರ್ಕಾರ ಬುಧವಾರ ಹೊಸ ನಿಯಮಗಳನ್ನು ಅಧಿಸೂಚಿಸಿದೆ. ಹೊಸ ನಿಯಮಗಳು ಬಳಕೆದಾರರ ಸುರಕ್ಷತೆಗೆ ಆದ್ಯತೆ ನೀಡಿದ್ದು, ಮನಿ ಗೇಮ್‌ಗಳನ್ನು ನಿಷೇಧಿಸಲಾಗಿದೆ. ಮೊದಲ ಬಾರಿಗೆ ಆನ್​ಲೈನ್ ಗೇಮಿಂಗ್ ಪ್ರಾಧಿಕಾರ ರಚಿಸಲಾಗಿದ್ದು, ಈ ಕ್ಷೇತ್ರದಲ್ಲಿ ಸುಧಾರಣೆ ತರಲು ಪೂರಕವಾಗಿದೆ. ಹೊಸ ನಿಯಮಗಳು ಇದೇ ಮೇ 1ರಿಂದ ಜಾರಿಗೆ ಬರಲಿವೆ.

ರಿಯಲ್ ಮನಿ ಗೇಮಿಂಗ್ (ಹಣ ಕಟ್ಟಿ ಆಡುವ ಆಟಗಳು), ಬೆಟ್ಟಿಂಗ್ ಮತ್ತು ಜೂಜಾಟದಂತಹ ಆನ್​ಲೈನ್ ಆಟಗಳನ್ನು ಈ ಕಾಯ್ದೆಯಡಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮನಿ ಗೇಮಿಂಗ್ ಮತ್ತು ಬೆಟ್ಟಿಂಗ್​ನಲ್ಲಿ ಹಣ, ನೆಮ್ಮದಿ ಎರಡನ್ನೂ ಕಳೆದುಕೊಂಡ ಯುವಪೀಳಿಗೆ ಭಾರಿ ಸಮಸ್ಯೆಗೆ ಸಿಲುಕಿತ್ತು. ಬೆಟ್ಟಿಂಗ್​ನಲ್ಲಿ ಹಣ ಕಳೆದುಕೊಂಡ ಹಲವು ಯುವಕರು ಆತ್ಮಹತ್ಯೆಯ ದಾರಿ ತುಳಿದ ದಾರುಣ ಘಟನೆಗಳು ದೇಶದ ಹಲವು ರಾಜ್ಯಗಳಿಂದ ವರದಿಯಾಗುತ್ತಲೇ ಇವೆ. ಈ ನಿಟ್ಟಿನಲ್ಲಿ ಪ್ರಬಲ ಕ್ರಮದ ಅಗತ್ಯವಿತ್ತು. ಇಂಥ ಅಪಾಯಕಾರಿ ಆಟಗಳು ನಿಂತರೆ ಅದೆಷ್ಟೋ ಜೀವಗಳು ಉಳಿಯುತ್ತವೆ ಮತ್ತು ಯುವಕರು ಅಡ್ಡದಾರಿ ಹಿಡಿಯುವುದನ್ನು ಸಹ ತಪ್ಪಿಸಬಹುದಾಗಿದೆ.

ಭಾರತೀಯ ಆನ್​ಲೈನ್ ಗೇಮಿಂಗ್ ಪ್ರಾಧಿಕಾರ ಎಂಬ ಸ್ವತಂತ್ರ ಸಂಸ್ಥೆಯು ಆಟಗಳ ವರ್ಗೀಕರಣ, ನೋಂದಣಿ ಮತ್ತು ಕುಂದುಕೊರತೆಗಳ ಉಸ್ತುವಾರಿ ವಹಿಸುತ್ತದೆ ಎಂಬುದು ಗಮನಾರ್ಹ. ಆನ್​ಲೈನ್ ಆಟಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಇ-ಸ್ಪೋರ್ಟ್ಸ್‌ಗಳಿಗೆ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಆಟಗಳಿಗೆ ನೋಂದಣಿ ಐಚ್ಛಿಕವಾಗಿದೆ. ಹಣದ ಆಟಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಬಳಕೆದಾರರನ್ನು, ವಿಶೇಷವಾಗಿ ಯುವಕರನ್ನು ಮತ್ತು ಮಕ್ಕಳನ್ನು ರಕ್ಷಿಸಲು ಹೊಸ ನಿಯಮಗಳು ಪೂರಕವಾಗಿವೆ. ಅಪ್ರಾಪ್ತ ವಯಸ್ಕರು ಹಾನಿಕಾರಕ ಆಟಗಳನ್ನು ಆಡುವುದನ್ನು ತಡೆಯಲು ಕಟ್ಟುನಿಟ್ಟಾದ ವಯಸ್ಸಿನ ದೃಢೀಕರಣ ವ್ಯವಸ್ಥೆ ಇದೆ. ಬಳಕೆದಾರರು ಗೇಮಿಂಗ್​ನಲ್ಲಿ ಕಳೆಯುವ ಸಮಯ ಮತ್ತು ಅದಕ್ಕೆ ಮಾಡುವ ವೆಚ್ಚದ ಮೇಲೆ ಮಿತಿ ಹೇರುವ ಆಯ್ಕೆ ಇರಲಿದೆ. ಪ್ರತಿಯೊಂದು ಗೇಮಿಂಗ್ ಕಂಪನಿಯು ದೂರುಗಳನ್ನು ಸ್ವೀಕರಿಸಲು ದ್ವಿಸ್ತರದ ವ್ಯವಸ್ಥೆ ಹೊಂದಲಿದೆ. ಕಂಪನಿ ಮಟ್ಟದಲ್ಲಿ ಪರಿಹಾರ ಸಿಗದಿದ್ದರೆ ಬಳಕೆದಾರರು 30 ದಿನಗಳೊಳಗೆ ಒಜಿಎಐಗೆ ಮೇಲ್ಮನವಿ ಸಲ್ಲಿಸಬಹುದು. ಇಷ್ಟಾಗಿಯೂ ರಂಗೋಲಿ ಕೆಳಗೆ ನುಸುಳುವವರು ಇರುತ್ತಾರೆ. ಅಂಥವರ ಬಗ್ಗೆಯೂ ನಿಗಾ ಇಡುವುದು ಅಗತ್ಯ.

ಸುಳ್ಳು ಭರವಸೆಗಳನ್ನು ನೀಡಿ ಯುವಕರನ್ನು ವ್ಯಸನಕ್ಕೆ ದೂಡುವ ಮತ್ತು ಆರ್ಥಿಕ ಸಂಕಷ್ಟಕ್ಕೀಡುಮಾಡುವ ವೇದಿಕೆಗಳಿಗೆ ಈ ಮೂಲಕ ತಡೆ ಬೀಳಲಿದೆ. ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡಲು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಳ್ಳುವುದನ್ನು ಈ ನಿಯಮಗಳು ತಡೆಯುತ್ತವೆ. ಅಲ್ಲದೆ, ಭಾರತವನ್ನು ಜಾಗತಿಕ ಗೇಮಿಂಗ್ ಹಬ್ ಆಗಿ ರೂಪಿಸಲು ಕೇವಲ ಕೌಶಲ ಮತ್ತು ಸ್ಪರ್ಧಾತ್ಮಕ ಆಟಗಳಿಗೆ ಸರ್ಕಾರ ಪ್ರೋತ್ಸಾಹ ನೀಡಲಿದೆ. ನಿಯಮ ಉಲ್ಲಂಘಿಸುವ ಕಂಪನಿಗಳಿಗೆ 1 ಕೋಟಿ ರೂ.ವರೆಗೆ ದಂಡ ಮತ್ತು 3ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆಯ ನಿಬಂಧನೆ ಇದೆ. ಆದ್ದರಿಂದ, ಈ ನಿಯಮಗಳು ಆನ್​ಲೈನ್ ಜಗತ್ತನ್ನು ಕೇವಲ ಮನರಂಜನೆಯ ತಾಣವಾಗಿ ಉಳಿಸಿ, ಅದನ್ನು ಜೂಜಿನ ಅಡ್ಡೆಯಾಗದಂತೆ ತಡೆಯುವ ಸಾಮರ್ಥ್ಯ ಮತ್ತು ಗುರಿ ಹೊಂದಿವೆ.