ರಷ್ಯಾ ತೈಲಕ್ಕೆ ತಿಲಾಂಜಲಿ..; ಅಮೆರಿಕದ ಮಾರುಕಟ್ಟೆ ಹಿಡಿಯಲು ದಶಕಗಳ ಸ್ನೇಹವನ್ನು ಪಣಕ್ಕಿಟ್ಟಿತೇ ಭಾರತ..?  
ದೇಶ

ರಷ್ಯಾ ತೈಲಕ್ಕೆ ತಿಲಾಂಜಲಿ..; ಅಮೆರಿಕದ ಮಾರುಕಟ್ಟೆ ಹಿಡಿಯಲು ದಶಕಗಳ ಸ್ನೇಹವನ್ನು ಪಣಕ್ಕಿಟ್ಟಿತೇ ಭಾರತ..? Russia Oil

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಶೇ.18ರಷ್ಟು ಸುಂಕದ ಒಪ್ಪಂದವು ಜಾಗತಿಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಇದು ಕೇವಲ ವ್ಯಾಪಾರಕ್ಕೆ ಸೀಮಿತವಾಗಿಲ್ಲ. ಬದಲಾಗಿ ಈ ಒಪ್ಪಂದದ ಹಿಂದೆ ಅಡಗಿರುವ ರಷ್ಯಾ(Russia Oil) ತೈಲ ಖರೀದಿ ನಿಲುಗಡೆ ಎಂಬ ಷರತ್ತು ಭಾರತದ ದಶಕಗಳ ಕಾಲದ ಆಪ್ತ ಮಿತ್ರ ರಷ್ಯಾದೊಂದಿಗೆ ಇರುವ ಸಂಬಂಧವನ್ನು ಪರೀಕ್ಷೆಗೆ ಒಡ್ಡಿದೆ.

ಟ್ರಂಪ್ ಇಂಧನ ರಾಜತಾಂತ್ರಿಕತೆ: ರಷ್ಯಾಕ್ಕೆ ಚೇಕ್-ಮೇಟ್..?

ಅಮೆರಿಕವು ಭಾರತದ ಮೇಲಿದ್ದ ಶೇ.50ವರೆಗಿನ ದಂಡನಾತ್ಮಕ ಸುಂಕವನ್ನು ಶೇ.18 ಕ್ಕೆ ಇಳಿಸಿದೆ. ಆದರೆ, ಇದಕ್ಕೆ ಪ್ರತಿಯಾಗಿ ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಆರ್ಥಿಕ ಪೆಟ್ಟು: ಯುಕ್ರೇನ್ ಯುದ್ಧಕ್ಕೆ ರಷ್ಯಾ ಬಳಸುತ್ತಿರುವ ಹಣದ ಪ್ರಮುಖ ಮೂಲ ಭಾರತದ ತೈಲ ಖರೀದಿಯಾಗಿದೆ. ಈಗ ಅದು ನಿಂತರೆ ಪುಟಿನ್ ಅವರ ಆರ್ಥಿಕ ಶಕ್ತಿ ಕುಸಿಯಲಿದೆ.
ಪರ್ಯಾಯ ಮೂಲ: ಭಾರತವು ರಷ್ಯಾದ ಬದಲಿಗೆ ಅಮೆರಿಕ ಮತ್ತು ವೆನೆಜುವೆಲಾದಿಂದ $500 ಬಿಲಿಯನ್ ಡಾಲರ್ ಮೊತ್ತದ ಇಂಧನ ಮತ್ತು ತಂತ್ರಜ್ಞಾನ ಖರೀದಿಸಲು ಮುಂದಾಗಿದೆ. ಇದು ಅಮೆರಿಕದ ಆರ್ಥಿಕತೆಗೆ ಭಾರಿ ಲಾಭ ತರಲಿದೆ.

ರಷ್ಯಾ ಮೇಲಾಗುವ ಪರಿಣಾಮಗಳು..?

ರಷ್ಯಾ ಮತ್ತು ಭಾರತದ ನಡುವಿನ ಸಂಬಂಧವು ದಶಕಗಳಷ್ಟು ಹಳೆಯಾದಗಿದೆ. ರಕ್ಷಣಾ ಕ್ಷೇತ್ರದಿಂದ ಇಂಧನ ಕ್ಷೇತ್ರದವರೆಗೆ ರಷ್ಯಾ ಭಾರತಕ್ಕೆ ಬೆನ್ನೆಲುಬಾಗಿ ನಿಂತಿದೆ.

ರಷ್ಯಾದ ವಾರ್ ಮಷಿನ್​ಗೆ ಹಣದ ಕೊರತೆ

ರಷ್ಯಾ ತನ್ನ ಯುದ್ಧ ವೆಚ್ಚದ ಬಹುಭಾಗವನ್ನು ಇಂಧನ ರಫ್ತಿನಿಂದ ಬರುವ ಹಣದಿಂದಲೇ ಭರಿಸುತ್ತಿದೆ. 2024-25ರಲ್ಲಿ ಭಾರತವು ರಷ್ಯಾದ ಕಚ್ಚಾ ತೈಲದ ಎರಡನೇ ಅತಿದೊಡ್ಡ ಖರೀದಿದಾರನಾಗಿತ್ತು. ಈಗ ಈ ಆದಾಯ ಸ್ಥಗಿತಗೊಂಡರೆ, ಯುಕ್ರೇನ್ ವಿರುದ್ಧದ ಯುದ್ಧವನ್ನು ಮುಂದುವರಿಸಲು ರಷ್ಯಾಕ್ಕೆ ಹಣಕಾಸಿನ ಸಂಕಷ್ಟ ಎದುರಾಗಲಿದೆ.

ಆರ್ಥಿಕ ದಿಗ್ಬಂಧನದ ಯಶಸ್ಸು

ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ಹೇರಿದ್ದ ಆರ್ಥಿಕ ದಿಗ್ಬಂಧನಗಳನ್ನು ಭಾರತವು ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಮೂಲಕ ಒಂದರ್ಥದಲ್ಲಿ ವಿಫಲಗೊಳಿಸಿತ್ತು. ಈಗ ಭಾರತವೇ ಹಿಂದೆ ಸರಿದರೆ, ರಷ್ಯಾದ ತೈಲಕ್ಕೆ ಜಾಗತಿಕವಾಗಿ ಬೇಡಿಕೆ ಕುಸಿಯಲಿದೆ. ರಷ್ಯಾ ಈಗ ಚೀನಾದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಬೇಕಾದ ಅನಿವಾರ್ಯತೆ ಎದುರಾಗಬಹುದು.

ತೈಲ ಬೆಲೆ ಕುಸಿತ ಮತ್ತು ದಾಸ್ತಾನು ಸಮಸ್ಯೆ

ಭಾರತವು ತಿಂಗಳಿಗೆ ಲಕ್ಷಾಂತರ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದ್ದಕ್ಕಿದ್ದಂತೆ ಈ ದೊಡ್ಡ ಮಾರುಕಟ್ಟೆ ಇಲ್ಲವಾದರೆ, ರಷ್ಯಾಕ್ಕೆ ತನ್ನ ತೈಲವನ್ನು ಎಲ್ಲಿ ಸಂಗ್ರಹಿಸಬೇಕು ಮತ್ತು ಯಾರಿಗೆ ಮಾರಾಟ ಮಾಡಬೇಕು ಎಂಬ ಚಿಂತೆ ಎದುರಾಗಲಿದೆ. ಪರ್ಯಾಯ ಖರೀದಿದಾರರಿಲ್ಲದೆ ರಷ್ಯಾ ತನ್ನ ತೈಲವನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಸ್ಥಿತಿ ಬರಬಹುದು.

ರಷ್ಯಾದ ಪ್ರತಿಕ್ರಿಯೆ ಹೇಗಿರಬಹುದು..?

ರಷ್ಯಾ ಈ ಬೆಳವಣಿಗೆಯನ್ನು ರಾಜತಾಂತ್ರಿಕ ಹಿನ್ನಡೆ ಎಂದು ಪರಿಗಣಿಸುವ ಸಾಧ್ಯತೆಯಿದೆ. ಭಾರತದ ಈ ನಡೆಯಿಂದಾಗಿ ರಷ್ಯಾ ಮತ್ತು ಭಾರತದ ನಡುವಿನ ರಕ್ಷಣಾ ಒಪ್ಪಂದಗಳು (S-400 ಕ್ಷಿಪಣಿ ವ್ಯವಸ್ಥೆ ಇತ್ಯಾದಿ) ಮತ್ತು ಬಾಹ್ಯಾಕಾಶ ಸಹಕಾರದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಮೂಡೀಸ್ ಎಚ್ಚರಿಕೆ: ಆರ್ಥಿಕ ಅಪಾಯದ ಸಾಧ್ಯತೆ..?

ಜಾಗತಿಕ ರೇಟಿಂಗ್ ಏಜೆನ್ಸಿ ಮೂಡೀಸ್ ಈ ಬಗ್ಗೆ ಎಚ್ಚರಿಕೆ ನೀಡಿದೆ. ರಷ್ಯಾದ ಅಗ್ಗದ ತೈಲವನ್ನು ತಕ್ಷಣವೇ ನಿಲ್ಲಿಸಿದರೆ ಭಾರತದಲ್ಲಿ ಹಣದುಬ್ಬರ ಹೆಚ್ಚಾಗಬಹುದು ಮತ್ತು ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಅದು ಅಭಿಪ್ರಾಯಪಟ್ಟಿದೆ. ಅಮೆರಿಕದ ತೈಲವು ರಷ್ಯಾ ತೈಲದಷ್ಟು ಅಗ್ಗವಾಗಿರದೇ ಇರುವುದು ಭಾರತದ ಸವಾಲನ್ನು ಹೆಚ್ಚಿಸಿದೆ.
ಈ ಒಪ್ಪಂದವು ಅಮೆರಿಕದ ದೃಷ್ಟಿಯಲ್ಲಿ ಜಾಗತಿಕ ಶಾಂತಿಯತ್ತ ದೊಡ್ಡ ಹೆಜ್ಜೆಯಾಗಿದ್ದರೆ, ಭಾರತಕ್ಕೆ ಇದು ಲಾಭ ಮತ್ತು ನಷ್ಟದ ನಡುವಿನ ತೆಳುವಾದ ದಾರಿಯಾಗಿದೆ. ರಷ್ಯಾವನ್ನು ದೂರವಿಟ್ಟು ಅಮೆರಿಕದೊಂದಿಗೆ ಬೆಸೆಯುವ ಈ ನಿರ್ಧಾರವು 21ನೇ ಶತಮಾನದ ಅತ್ಯಂತ ದೊಡ್ಡ ಜಿಯೋ-ಪೊಲಿಟಿಕಲ್ ಬದಲಾವಣೆಯಾಗಲಿದೆ,(ಏಜೆನ್ಸೀಸ್​).