Tirupati Laddu Record | ಕೇವಲ 30 ದಿನದಲ್ಲಿ 1.26 ಕೋಟಿ ತಿರುಪತಿ ಲಡ್ಡು ಮಾರಾಟ!...ಕಳೆದ 300 ವರ್ಷಗಳ ದಾಖಲೆ ಬ್ರೇಕ್
ತಿರುಪತಿ: ಕಲಿಯುಗದ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನದ ಬಳಿಕ ಭಕ್ತರು ಅತ್ಯಂತ ಭಕ್ತಿಭಾವದಿಂದ ಸ್ವೀಕರಿಸುವ ಪವಿತ್ರ ಶ್ರೀವಾರಿ ಲಡ್ಡು ಪ್ರಸಾದದ ಮಾರಾಟವು ಜೂನ್ ತಿಂಗಳಿನಲ್ಲಿ ಸಾರ್ವಕಾಲಿಕ ದಾಖಲೆ (Tirupati Laddu Record) ಬರೆದಿದೆ. ತಿರುಮಲಕ್ಕೆ ಹರಿದು ಬರುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿರುವುದನ್ನು ಮನಗಂಡಿರುವ ತಿರುಮಲ ತಿರುಪತಿ ದೇವಸ್ಥಾನಂ (TTD), ಲಡ್ಡು ಉತ್ಪಾದನೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಯಾವುದೇ ಕೊರತೆಯಿಲ್ಲದೆ ನಿರಂತರ ವಿತರಣೆಯನ್ನು ಖಚಿತಪಡಿಸಿದೆ.
ಕಳೆದ ಮೂರು ತಿಂಗಳುಗಳ ಮಾರಾಟದ ಗ್ರಾಫ್ ನೋಡಿದರೆ ಲಡ್ಡು ಪ್ರಸಾದಕ್ಕೆ ಭಕ್ತರು ಹೇಗೆ ಮುಗಿಬಿದ್ದಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಕಳೆದ ಏಪ್ರಿಲ್‌ನಲ್ಲಿ ಒಟ್ಟು 1,11,96,170 ಲಡ್ಡುಗಳು ಮಾರಾಟವಾಗಿದ್ದರೆ, ಮೇ ತಿಂಗಳಿನಲ್ಲಿ ಈ ಸಂಖ್ಯೆ 1,21,35,528 ಕ್ಕೆ ಏರಿಕೆಯಾಗಿತ್ತು. ಇನ್ನು ಜೂನ್ ತಿಂಗಳಿನಲ್ಲಿ ಬರೋಬ್ಬರಿ 1,26,81,805 ಲಡ್ಡುಗಳು ಮಾರಾಟವಾಗುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ.
ಕಳೆದ ವರ್ಷಗಳ ದಾಖಲೆ ಉಡೀಸ್!
ಹಿಂದಿನ ವರ್ಷಗಳ ಜೂನ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಈ ಬಾರಿಯ ಬೆಳವಣಿಗೆ ಅದ್ಭುತವಾಗಿದೆ. 2024ರ ಜೂನ್‌ನಲ್ಲಿ 1,02,64,364 ಲಡ್ಡುಗಳು ಹಾಗೂ 2025ರ ಜೂನ್‌ನಲ್ಲಿ 1,19,21,353 ಲಡ್ಡುಗಳು ಮಾರಾಟವಾಗಿದ್ದವು. ಆದರೆ, ಈ ವರ್ಷದ ಜೂನ್ ಮಾರಾಟವು ಕಳೆದ ವರ್ಷಕ್ಕಿಂತ 7,59,452 ಹೆಚ್ಚು ಲಡ್ಡುಗಳ ಮಾರಾಟದೊಂದಿಗೆ ಶೇ. 6.37 ರಷ್ಟು ಪ್ರಗತಿ ಸಾಧಿಸಿದೆ. ಅದೇ ರೀತಿ, 2024ರ ಜೂನ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಬರೋಬ್ಬರಿ 24,17,441 ಲಡ್ಡುಗಳ ಅಧಿಕ ಮಾರಾಟದೊಂದಿಗೆ ಶೇ. 23.55 ರಷ್ಟು ಬಂಪರ್ ಪ್ರಗತಿ ದಾಖಲಿಸಿದೆ.
311 ವರ್ಷಗಳ ಐತಿಹಾಸಿಕ ಲಡ್ಡು ಪ್ರಸಾದ
ಆಂಧ್ರಪ್ರದೇಶದ ತಿರುಮಲ ಬೆಟ್ಟಕ್ಕೆ ಭೇಟಿ ನೀಡುವ ಕೋಟ್ಯಂತರ ಭಕ್ತರಿಗೆ ಶ್ರೀವಾರಿ ಲಡ್ಡು ಕೇವಲ ಸಿಹಿಯಲ್ಲ, ಅದು ಸಾಕ್ಷಾತ್ ಶ್ರೀನಿವಾಸನ ಆಶೀರ್ವಾದದ ಸಂಕೇತ. ತಿರುಮಲ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ನೀಡುವ ಈ ಪವಿತ್ರ ಸಂಪ್ರದಾಯವು 1715 ರಿಂದ, ಅಂದರೆ ಸುಮಾರು 300 ಕ್ಕೂ ಹೆಚ್ಚು ವರ್ಷಗಳಿಂದ (311 ವರ್ಷಗಳು) ನಿರಂತರವಾಗಿ ನಡೆದುಕೊಂಡು ಬಂದಿದೆ. ದೇವಸ್ಥಾನದ ಒಳಗಿರುವ ಪ್ರಸಿದ್ಧ ಲಡ್ಡು ಪೋಟು (ವಿಶೇಷ ಅಡುಗೆ ಮನೆ) ನಲ್ಲಿ ಪ್ರಕೃತಿ ದತ್ತವಾದ ಶುದ್ಧ ತುಪ್ಪ, ಕಡಲೆ ಹಿಟ್ಟು, ಸಕ್ಕರೆ, ಗೋಡಂಬಿ, ಒಣದ್ರಾಕ್ಷಿ ಮತ್ತು ಏಲಕ್ಕಿ ಬಳಸಿ ಪವಿತ್ರವಾಗಿ ಈ ಲಡ್ಡುಗಳನ್ನು ತಯಾರಿಸಲಾಗುತ್ತದೆ. ಪ್ರತಿ ಲಡ್ಡುವನ್ನು ಮೊದಲು ದೇವರಿಗೆ ನೈವೇದ್ಯ ಮಾಡಿದ ಬಳಿಕವೇ ಭಕ್ತರಿಗೆ ವಿತರಿಸಲಾಗುತ್ತದೆ.
ಮೊದಲ ಜಿಐ (GI) ಟ್ಯಾಗ್ ಪಡೆದ ಪ್ರಸಾದ
ವಿಶೇಷವೆಂದರೆ, 2009 ರಲ್ಲಿ ತಿರುಪತಿ ಲಡ್ಡು ತನ್ನ ವಿಶಿಷ್ಟ ಗುರುತು ಮತ್ತು ಗುಣಮಟ್ಟಕ್ಕಾಗಿ ಭಾರತದ ಅತ್ಯಂತ ಮೊದಲ ಭೌಗೋಳಿಕ ಸೂಚನೆ (Geographical Indication - GI Tag) ಪಡೆದ ದೇವಾಲಯದ ಪ್ರಸಾದ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಸದ್ಯ ಸ್ವಾಮಿಯ ದರ್ಶನ ಪಡೆದ ಪ್ರತಿ ಭಕ್ತನಿಗೂ ಒಂದು ಲಡ್ಡುವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಹೆಚ್ಚುವರಿ ಲಡ್ಡುಗಳು ತಲಾ 50 ರೂಪಾಯಿ ದರದಲ್ಲಿ ಲಭ್ಯವಿವೆ(ಏಜೆನ್ಸೀಸ್).