- ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ಕ್ಯಾಪ್ಟನ್ ರೆಕಾರ್ಡ್
- ಶರವೇಗದ ಶತಕ ಸಿಡಿಸಿ ಹೊಸ ದಾಖಲೆ ಯುವ ಬ್ಯಾಟರ್
- ಸಕಿಬುಲ್ ಗನಿ ಉರಾಮಸ್ ಯಶಸ್ಸಿನ ಹಿಂದಿದೆ ತಾಯಿಯ ತ್ಯಾಗ
- ಇಷ್ಟಾದರೂ ಐಪಿಎಲ್‌ನಲ್ಲಿ ಸಿಕ್ಕಿಲ್ಲ ಇನ್ನೂ ಅವಕಾಶ
ನವದೆಹಲಿ: ಪ್ರಸಕ್ತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕಗಳ ಆರ್ಭಟ ಜೋರಾಗಿದೆ. ಆಯಾ ತಂಡಗಳಲ್ಲಿ ಆಡುತ್ತಿರುವ ಯುವ ಬ್ಯಾಟ್ಸ್‌ಮನ್‌ಗಳು ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಸ್ಫೋಟಕ ಇನ್ನಿಂಗ್ಸ್ ನೀಡುತ್ತಿರುವುದು ಕ್ರಿಕೆಟ್ ಪ್ರಿಯರ ಕುತೂಹಲ ಕೆರಳಿಸಿದೆ. ಅತ್ತ ಯುವ ಬ್ಯಾಟರ್ಗಳು ಶತಕಗಳ ಮೂಲಕ ಹೊಸ ದಾಖಲೆ ಬರೆಯುತ್ತಿದ್ದರೆ, ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಕೂಡ ಶತಕದಾಟ ಪ್ರದರ್ಶಿಸಿದ್ದಾರೆ. ಇದು ಟೂರ್ನಿಯನ್ನು ಇನ್ನಷ್ಟು ರೋಚಕವಾಗಿಸಿದೆ.
ಶರವೇಗದ ಶತಕ ಸಿಡಿಸಿ ದಾಖಲೆ
ಈ ಮಧ್ಯೆ, ಇಂದು ಅರುಣಾಚಲ ಪ್ರದೇಶ ಮತ್ತು ಬಿಹಾರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಿಹಾರ ಪರ ಯುವ ಬ್ಯಾಟರ್ಗಳು ಮಿಂಚಿನ ಸೆಂಚುರಿ ಸಿಡಿಸಿದ್ದಾರೆ. ತಂಡದ ಕ್ಯಾಪ್ಟನ್ ಆಗಿ ಐದನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಸಕಿಬುಲ್ ಗನಿ ಉರಾಮಸ್, ಕೇವಲ 32 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿದರು. 40 ಎಸೆತಗಳಲ್ಲಿ 128 ರನ್ ಗಳಿಸಿ ಅಜೇಯರಾಗಿ ಪಂದ್ಯದಲ್ಲಿ ಉಳಿದರು. ಈ ಮೂಲಕ ವೈಭವ್ ಸೂರ್ಯವಂಶಿ ಹಾಗೂ ಇಶಾನ್ ಕಿಶನ್ ಅವರ ಹಿಂದಿನ ದಾಖಲೆಗಳನ್ನು ಬ್ರೇಕ್ ಮಾಡಿ, ತಮ್ಮದೇ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಐಪಿಎಲ್‌ನಲ್ಲಿ ಸಿಕ್ಕಿಲ್ಲ ಇನ್ನೂ ಅವಕಾಶ
ವಿಜಯ್ ಹಜಾರೆ ಟ್ರೋಫಿಯಲ್ಲಿ ಇಡೀ ಭಾರತೀಯ ಕ್ರಿಕೆಟ್ ಜಗತ್ತನ್ನು ತಮ್ಮತ್ತ ಸೆಳೆದ ಸಕಿಬುಲ್ ಗನಿ, ಈ ಟೂರ್ನಿಯ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ವೇಗದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟಕ್ಕೂ, ಸಕಿಬುಲ್ ಅವರ ಹೆಸರು ಸುದ್ದಿಯಲ್ಲಿರುತ್ತಿರುವುದು ಇದೇ ಮೊದಲಲ್ಲ. ಗಣಿ ಈ ಹಿಂದೆಯೂ ರೆಕಾರ್ಡ್ ಸೃಷ್ಟಿಸಿದ್ದಾರೆ. ದಾಖಲೆಯ ಹೊರತಾಗಿಯೂ, ಗನಿಗೆ ಇನ್ನೂ ಐಪಿಎಲ್‌ನಲ್ಲಿ ಅವಕಾಶ ಸಿಕ್ಕಿಲ್ಲ ಎಂಬುದು ಹಲವರ ಬೇಸರ. ಬುಧವಾರ ಅರುಣಾಚಲ ಪ್ರದೇಶ ವಿರುದ್ಧ ಕೇವಲ 40 ಎಸೆತಗಳಲ್ಲಿ ಗನಿ ಅಜೇಯ 128 ರನ್ ( 10 ಬೌಂಡರಿ, 12 ಸಿಕ್ಸರ್) ಬಾರಿಸಿದ್ದು, ಅದ್ಭುತ ಇನ್ನಿಂಗ್ಸ್‌ಗೆ ಸಾಕ್ಷಿಯಾಯಿತು.
ಮತ್ತೊಂದೆಡೆ, ಲಿಸ್ಟ್ ಎ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ವೇಗದ ಭಾರತೀಯ ಎಂಬ ದಾಖಲೆಯನ್ನು ಹೊಂದಿರುವ ಗನಿ, ಮೆಕ್‌ಗುರ್ಕ್ ಮತ್ತು ಡಿವಿಲಿಯರ್ಸ್ ನಂತರ ವಿಶ್ವದ ಮೂರನೇ ಆಟಗಾರನಾಗಿ ಪಟ್ಟಿಯಲ್ಲಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅಪಾರ ಯಶಸ್ಸು, ಕೀರ್ತಿ ಸಂಪಾದಿಸಿರುವ ಗಣಿ ಹಿಂದಿರುವ ಶಕ್ತಿ ಅವರ ತಾಯಿ. ಸ್ಥಳೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆರಂಭವಾದ ಗನಿ ಕ್ರಿಕೆಟ್ ಪಯಣ, ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೌಶಲ್ಯ ಹೊಂದಿದ ಬಿಹಾರ ಕ್ಯಾಪ್ಟನ್, ಅಂಡರ್ 19 ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಅಮ್ಮನ ಪ್ರೀತಿಯ ಪುತ್ರ
ರಣಜಿ ಟ್ರೋಫಿಯಲ್ಲಿಯೂ ಮಿಂಚಿರುವ ಗನಿ, ಮಿಜೋರಾಂ ವಿರುದ್ಧದ ರಣಜಿ ಚೊಚ್ಚಲ ಪಂದ್ಯದಲ್ಲಿ 341 ರನ್ ಬಾರಿಸಿ ಐತಿಹಾಸಿಕ ಇನ್ನಿಂಗ್ಸ್ ನೀಡಿದರು. ಚೊಚ್ಚಲ ಪಂದ್ಯದಲ್ಲಿಯೇ ತ್ರಿಶತಕ ಗಳಿಸುವ ಮೂಲಕ ವಿಶಿಷ್ಟ ದಾಖಲೆಯನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡರು. ಆ ಇನ್ನಿಂಗ್ಸ್‌ನಲ್ಲಿ ಅವರು 56 ಬೌಂಡರಿ, ಎರಡು ಸಿಕ್ಸರ್‌ಗಳನ್ನು ಬಾರಿಸಿ ಇಡೀ ದೇಶಕ್ಕೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಒಂದು ಕಾಲದಲ್ಲಿ ಬ್ಯಾಟ್ ಖರೀದಿಸಲು ಸಹ ಗನಿ ಹತ್ತಿರ ಹಣವಿರಲಿಲ್ಲ. ಕುಟುಂಬದ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಇಷ್ಟಾದರೂ ಕ್ರಿಕೆಟ್ ಮೇಲಿನ ಉತ್ಸಾಹ, ಸಾಧನೆಯತ್ತ ಅವರಿಗಿದ್ದ ಗುರಿ ದಿಕ್ಕು ತಪ್ಪಲಿಲ್ಲ.
ತಾಯಿ ಆಸೆ ಈಡೇರಿಸಿದ ಗನಿ
ಈ ಕಷ್ಟಕರ ಸಂದರ್ಭದಲ್ಲಿ ಅವರ ಜತೆಗೆ ನಿಂತಿದ್ದು, ಗನಿ ತಾಯಿ. ಮಗನ ಆಸೆ, ಉಜ್ವಲ ಭವಿಷ್ಯಕ್ಕಾಗಿ ಚಿನ್ನಾಭರಣಗಳನ್ನು ಅಡವಿಟ್ಟ ಅವರು, ಹೊಸ ಬ್ಯಾಟ್ ಖರೀದಿಸಿದರು. ರಣಜಿ ಟ್ರೋಫಿ ಆಡಲು ಮುಂದಾಗಿದ್ದ ಪುತ್ರನಿಗೆ, ಮೂರು ಹೊಸ ಬ್ಯಾಟ್‌ಗಳನ್ನು ಗಿಫ್ಟ್ ಆಗಿ ನೀಡಿದ ಅವರ ತಾಯಿ, "ಹೋಗು ಮಗನೇ.. ಮೂರು ಶತಕಗಳನ್ನು ಬಾರಿಸು" ಎಂದಿದ್ದರಂತೆ. ಈ ವಿಷಯವನ್ನು ಗನಿ ಸಹೋದರ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ, ಗನಿ 28 ಪ್ರಥಮ ದರ್ಜೆ ಪಂದ್ಯಗಳಲ್ಲಿ 5 ಶತಕ ಮತ್ತು ಎಂಟು ಅರ್ಧಶತಕ ಸೇರಿದಂತೆ 2,035 ರನ್ ಗಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ, ಅವರು 33 ಪಂದ್ಯಗಳಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕ ಸೇರಿ ಒಟ್ಟು 867 ರನ್ ದಾಖಲಿಸಿದ್ದಾರೆ,(ಏಜೆನ್ಸೀಸ್).