Saina Nehwal  
ದೇಶ

ಇನ್ನು ಸಾಕು, ನನ್ನಿಂದ ಸಾಧ್ಯವಿಲ್ಲ! ಬ್ಯಾಡ್ಮಿಂಟನ್ ವೃತ್ತಿಜೀವನಕ್ಕೆ ತೆರೆ ಎಳೆದ ಸೈನಾ ನೆಹ್ವಾಲ್.. Saina Nehwal

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ಲೋಕದ ದಿಗ್ಗಜ ಆಟಗಾರ್ತಿ, ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ( Saina Nehwal ) ಅವರು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದ ಅವರು, ಇನ್ನು ಮುಂದೆ ವೃತ್ತಿಪರ ಆಟ ಮುಂದುವರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚಿನ ಪಾಡ್‌ಕಾಸ್ಟ್ ಸಂದರ್ಶನವೊಂದರಲ್ಲಿ ಮಾತನಾಡಿದ 35 ವರ್ಷದ ಸೈನಾ, ತಮ್ಮ ನಿವೃತ್ತಿಯ ನಿರ್ಧಾರದ ಹಿಂದಿನ ನೋವಿನ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ನನ್ನ ಮೊಣಕಾಲಿನ ಕಾರ್ಟಿಲೆಜ್ ಸಂಪೂರ್ಣವಾಗಿ ಹಾನಿಯಾಗಿದೆ ಮತ್ತು ನಾನು ಸಂಧಿವಾತದಿಂದ ಬಳಲುತ್ತಿದ್ದೇನೆ. ಇದು ನನ್ನ ತಂದೆ-ತಾಯಿ ಮತ್ತು ಕೋಚ್‌ಗಳಿಗೆ ತಿಳಿಯಬೇಕಾದ ವಿಷಯವಾಗಿತ್ತು. ವಿಶ್ವದ ಅತ್ಯುತ್ತಮ ಆಟಗಾರ್ತಿಯಾಗಲು ದಿನಕ್ಕೆ 8-9 ಗಂಟೆಗಳ ಕಾಲ ತರಬೇತಿ ಪಡೆಯಬೇಕಾಗುತ್ತದೆ. ಆದರೆ ಈಗ ನನ್ನ ಮೊಣಕಾಲು ಕೇವಲ 1-2 ಗಂಟೆಗಳಲ್ಲಿ ಊದಿಕೊಳ್ಳುತ್ತಿದೆ. ಇನ್ನು ಮುಂದೆ ದೇಹವನ್ನು ದಂಡಿಸಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸೈನಾ ಅವರು ಕೊನೆಯದಾಗಿ 2023ರ ಸಿಂಗಾಪುರ್ ಓಪನ್‌ನಲ್ಲಿ ಆಡಿದ್ದರು. ಆ ಬಳಿಕ ಅವರು ಯಾವುದೇ ಟೂರ್ನಿಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, "ನಾನು ಎರಡು ವರ್ಷಗಳ ಹಿಂದೆಯೇ ಆಡುವುದನ್ನು ನಿಲ್ಲಿಸಿದ್ದೆ. ನಾನು ನನ್ನದೇ ಆದ ಶೈಲಿಯಲ್ಲಿ ಕ್ರೀಡೆಗೆ ಬಂದೆ ಮತ್ತು ನನ್ನದೇ ಆದ ರೀತಿಯಲ್ಲಿ ನಿರ್ಗಮಿಸುತ್ತಿದ್ದೇನೆ. ಇದಕ್ಕೊಂದು ದೊಡ್ಡ ಅಧಿಕೃತ ಘೋಷಣೆಯ ಅಗತ್ಯವಿಲ್ಲ ಎಂದು ನನಗೆ ಅನಿಸಿತು ಎಂದಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ. ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರಿದ ಏಕೈಕ ಭಾರತೀಯ ಮಹಿಳೆ (2015).
ಅರ್ಜುನ ಪ್ರಶಸ್ತಿ (2009), ಪದ್ಮಶ್ರೀ (2010), ರಾಜೀವ್ ಗಾಂಧಿ ಖೇಲ್ ರತ್ನ (2010) ಮತ್ತು ಪದ್ಮಭೂಷಣ (2016) ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.