ಬಂಗಾಳದಲ್ಲಿ ಕೇಸರಿ ಕ್ರಾಂತಿ: ಸೋನಾರ್ ಬಾಂಗ್ಲಾ ಕನಸು ನನಸಾಗಿಸುವ ಕಾಲ ಬಂದಿದೆ! ಸುವೇಂದು ಪಟ್ಟಾಭಿಷೇಕದ ವೇಳೆ ಅಮಿತ್ ಷಾ ಘೋಷಣೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಶಕೆ ಆರಂಭವಾಗಿದೆ. ಸುವೇಂದು ಅಧಿಕಾರಿ ಅವರನ್ನು ಬಂಗಾಳದ ಮುಂದಿನ ಮುಖ್ಯಮಂತ್ರಿಯನ್ನಾಗಿ ಅಧಿಕೃತವಾಗಿ ಘೋಷಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah), ಹೊಸ ಸರ್ಕಾರವು ಸೋನಾರ್ ಬಾಂಗ್ಲಾ ಕನಸನ್ನು ನನಸಾಗಿಸಲು ತನ್ನ ಶಕ್ತಿ ಮೀರಿ ಶ್ರಮಿಸಲಿದೆ ಎಂದು ಭರವಸೆ ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಸೋಲಿಸಿ ಬಿಜೆಪಿಗೆ ಅಭೂತಪೂರ್ವ ಜನಾದೇಶ ನೀಡಿದ ಬಂಗಾಳದ ಜನತೆಗೆ ಅವರು ಕೃತಜ್ಞತೆ ಸಲ್ಲಿಸಿದರು.
ಹಿಂಸೆ ಮತ್ತು ಬೆದರಿಕೆಗಳ ನಡುವೆ ಗೆದ್ದ ಜನಾದೇಶ
ಈ ಬಗ್ಗೆ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅಮಿತ್ ಷಾ, ಬಂಗಾಳದ ಚುನಾವಣಾ ಸಮಯದಲ್ಲಿ ಅನೇಕ ಹಿಂಸಾಚಾರದ ಘಟನೆಗಳು ಮತ್ತು ಬೆದರಿಕೆಗಳು ಎದುರಾಗಿದ್ದವು. ಆದರೆ ಬಂಗಾಳದ ಜನರು ಭಯಪಡದೆ ಬಿಜೆಪಿಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ, ನುಸುಳುವಿಕೆ ಮತ್ತು ಗೋವುಗಳ ಸಾಗಾಣಿಕೆ ಸಂಪೂರ್ಣವಾಗಿ ಅಸಾಧ್ಯವಾಗಲಿದೆ ಎಂದು ಗುಡುಗಿದ್ದಾರೆ.
ರವೀಂದ್ರನಾಥ ಟ್ಯಾಗೋರ್ ಸಾಲುಗಳನ್ನು ಸ್ಮರಿಸಿದ ಷಾ
ಬಂಗಾಳದ ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸಿದ ಗೃಹ ಸಚಿವರು, ಕವಿಗುರು ರವೀಂದ್ರನಾಥ ಟ್ಯಾಗೋರ್ ಅವರ ಸಾಲುಗಳನ್ನು ಉಲ್ಲೇಖಿಸಿದರು. ಎಲ್ಲಿ ಮನಸ್ಸು ಭಯಮುಕ್ತವಾಗಿದೆಯೋ ಮತ್ತು ಮನುಷ್ಯ ಹೆಮ್ಮೆಯಿಂದ ತಲೆ ಎತ್ತಿ ನಡೆಯುತ್ತಾನೋ ಅಂತಹ ಬಂಗಾಳದ ನಿರ್ಮಾಣದ ಹಾದಿ ಈಗ ಸಿದ್ಧವಾಗಿದೆ. ಬಂಗಾಳವು ಈಗ ಆ ಹಾದಿಯಲ್ಲಿ ನಡೆಯುತ್ತಿದೆ. ಬಂಗಾಳದ ಜನರ ನಿರೀಕ್ಷೆಗಳನ್ನು ಪೂರೈಸುವುದು ನಮ್ಮೆಲ್ಲಾ ಬಿಜೆಪಿ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಪರಕೀಯ ಸಿದ್ಧಾಂತಗಳಿಂದ ಮುಕ್ತಿ: ಬಂಗಾಳದ ಸಂಸ್ಕೃತಿ ರಕ್ಷಣೆ
ಬಂಗಾಳದ ಸಂಸ್ಕೃತಿಯನ್ನು ಪರಕೀಯ ಸಿದ್ಧಾಂತಗಳ ಪ್ರಭಾವದಿಂದ ಮುಕ್ತಗೊಳಿಸುವ ಕುರಿತು ಮಾತನಾಡಿದ ಅಮಿತ್ ಷಾ, ನಾವು ಬಂಗಾಳದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ವಿದೇಶಿ ಸಿದ್ಧಾಂತಗಳ ಆಡಳಿತದಿಂದ ಮುಕ್ತಗೊಳಿಸುವತ್ತ ಸಾಗುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ ಮತ್ತು ಕವಿಗುರು ಟ್ಯಾಗೋರ್ ಅವರು ಕಂಡ ಕನಸಿನ ಬಂಗಾಳವನ್ನು ನಾವು ಮರುಸೃಷ್ಟಿಸುತ್ತೇವೆ ಎಂದು ಗೃಹ ಸಚಿವರು ಘೋಷಿಸಿದ್ದಾರೆ.
ಸುವೇಂದು ಅಧಿಕಾರಿ: ಮೊದಲ ಬಿಜೆಪಿ ಸಿಎಂ
ಕೇಂದ್ರ ವೀಕ್ಷಕರಾಗಿ ನೇಮಕಗೊಂಡಿದ್ದ ಅಮಿತ್ ಷಾ, ಸುವೇಂದು ಅಧಿಕಾರಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಅಧಿಕೃತವಾಗಿ ಘೋಷಿಸಿದರು. ನೂತನವಾಗಿ ಆಯ್ಕೆಯಾದ ಬಿಜೆಪಿ ಶಾಸಕರು ಸುವೇಂದು ಅವರ ಹೆಸರನ್ನು ಪ್ರಸ್ತಾಪಿಸಿ, ಸರ್ವಾನುಮತದಿಂದ ಅನುಮೋದಿಸಿದರು. ಈ ಮೂಲಕ ಸುವೇಂದು ಅಧಿಕಾರಿ ಅವರು ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಇತಿಹಾಸ ಪುಟ ಸೇರಲಿದ್ದಾರೆ.
ನಾಳೆ ಬೆಳಿಗ್ಗೆ 11ಕ್ಕೆ ಪ್ರಮಾಣವಚನ
ನೂತನ ಬಿಜೆಪಿ ಸರ್ಕಾರದ ಪ್ರಮಾಣವಚನ ಸಮಾರಂಭವು ಮೇ 9ರಂದು ಬೆಳಿಗ್ಗೆ 11 ಗಂಟೆಗೆ ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಗ್ರೌಂಡ್‌ನಲ್ಲಿ ನಡೆಯಲಿದೆ. ಸುವೇಂದು ಅಧಿಕಾರಿ ಅವರು ಇಂದು ಸಂಜೆ 6:30ಕ್ಕೆ ಲೋಕ ಭವನದಲ್ಲಿ ಬಂಗಾಳದ ರಾಜ್ಯಪಾಲ ಟಿ.ಎನ್. ರವಿ ಅವರನ್ನು ಭೇಟಿ ಮಾಡಲಿದ್ದು, ಎಲ್ಲಾ ಶಾಸಕರ ಸಹಿಯಿರುವ ಬೆಂಬಲ ಪತ್ರವನ್ನು ಸಲ್ಲಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ,(ಏಜೆನ್ಸೀಸ್).