ಬಂಗಾಳದಲ್ಲಿ ಕೇಸರಿ ಕ್ರಾಂತಿ: ಒಳನುಸುಳುಕೋರರ ವಿರುದ್ಧ ಪ್ರಧಾನಿ ಮೋದಿ ಗುಡುಗು; ನಮಗೆ ಸೇಡು ಬೇಡ, ಬದಲಾವಣೆ ಬೇಕು ಎಂದ ನಮೋ 
ದೇಶ

ಬಂಗಾಳದಲ್ಲಿ ಕೇಸರಿ ಕ್ರಾಂತಿ: ಒಳನುಸುಳುಕೋರರ ವಿರುದ್ಧ ಪ್ರಧಾನಿ ಮೋದಿ ಗುಡುಗು; ನಮಗೆ ಸೇಡು ಬೇಡ, ಬದಲಾವಣೆ ಬೇಕು" ಎಂದ ನಮೋ! PM Modi

ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಿ, ಬಿಜೆಪಿ ಪ್ರಚಂಡ ಬಹುಮತ ಸಾಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಬಂಗಾಳದ ಭವಿಷ್ಯದ ಬಗ್ಗೆ ಮಹತ್ವದ ಭರವಸೆಗಳನ್ನು ನೀಡಿದ್ದಾರೆ.
ಈ ಬಗ್ಗೆ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಳನುಸುಳುವಿಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುವುದರ ಜೊತೆಗೆ, ಬಂಗಾಳದಲ್ಲಿ ದಶಕಗಳಿಂದ ನಡೆಯುತ್ತಿರುವ ರಾಜಕೀಯ ಹಿಂಸಾಚಾರಕ್ಕೆ ಅಂತ್ಯ ಹಾಡುವಂತೆ ಕರೆ ನೀಡಿದ್ದಾರೆ.

ಬಂಗಾಳದ ಪುಣ್ಯಭೂಮಿಯಲ್ಲಿ ಹೊಸ ಸೂರ್ಯೋದಯ!

ದು ಮೇ 4ರ ಸೂರ್ಯ ಮುಳುಗುತ್ತಿರಬಹುದು, ಆದರೆ ಬಂಗಾಳದ ಪುಣ್ಯಭೂಮಿಯಲ್ಲಿ ಹೊಸ ಸೂರ್ಯೋದಯವಾಗಿದೆ. ಇದು ಅಲ್ಲಿನ ತಲೆಮಾರುಗಳು ಕಾಯುತ್ತಿದ್ದ ಉದಯಕಾಲ ಎಂದು ಪ್ರಧಾನಿ ಮೋದಿ ಭಾವುಕರಾಗಿ ನುಡಿದರು. ಬಿಜೆಪಿಯ ಈ ಜಯವು ಕೇವಲ ಅಂಕಿಅಂಶಗಳ ಆಟವಲ್ಲ, ಇದು ಭಯ, ತುಷ್ಟೀಕರಣ ಮತ್ತು ಹಿಂಸಾಚಾರದ ರಾಜಕಾರಣವನ್ನು ಬೇರುಸಹಿತ ಕಿತ್ತೊಗೆದ ಜನರ ಅಚಲ ನಂಬಿಕೆಯ ಪ್ರತಿಬಿಂಬ ಎಂದು ಮೋದಿ ಬಣ್ಣಿಸಿದರು.

ಒಳನುಸುಳುವಿಕೆದಾರರಿಗೆ ಎಚ್ಚರಿಕೆ; ಆಯುಷ್ಮಾನ್ ಭಾರತ್ ಜಾರಿ

ಬಂಗಾಳದಲ್ಲಿ ದೀರ್ಘಕಾಲದಿಂದ ಚರ್ಚೆಯಲ್ಲಿರುವ ಒಳನುಸುಳುವಿಕೆ ಸಮಸ್ಯೆಯ ಬಗ್ಗೆ ಕಠಿಣ ನಿಲುವು ತಳೆದ ಪ್ರಧಾನಿ, ಅಕ್ರಮ ಒಳನುಸುಳುವಿಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದೇ ವೇಳೆ ಬಂಗಾಳದ ಬಡ ಜನತೆಗೆ ಸಿಹಿಸುದ್ದಿ ನೀಡಿದ ಪ್ರಧಾನಿ, ನಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲೇ ಬಂಗಾಳದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಅನುಮೋದಿಸಲಾಗುವುದು ಎಂದು ಘೋಷಿಸಿದರು. ಇದುವರೆಗೆ ಮಮತಾ ಸರ್ಕಾರ ಈ ಕೇಂದ್ರ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತಂದಿರಲಿಲ್ಲ ಎಂಬುದು ಗಮನಾರ್ಹವಾಗಿದೆ.

ಬದ್ಲಾ ಬೇಡ, ಬದಲಾವ್ ಬೇಕು

ಬಂಗಾಳದ ರಾಜಕೀಯವು ಸದಾ ಹತ್ಯೆ ಮತ್ತು ದ್ವೇಷದ ರಾಜಕಾರಣಕ್ಕೆ ಹೆಸರಾಗಿತ್ತು. ಇದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಅತ್ಯಂತ ಸಂಯಮದ ಸಂದೇಶ ನೀಡಿದರು.
ನಮಗೆ ಸೇಡು ಬೇಡ, ಬದಲಾವಣೆ ಬೇಕು. ನಮ್ಮ ಗಮನವು ಭಯದ ಮೇಲಲ್ಲ, ಬದಲಾಗಿ ಭವಿಷ್ಯದ ಮೇಲಿರಬೇಕು. ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿ ನಾನು ವಿನಂತಿಸುತ್ತೇನೆ, ಬಂಗಾಳದಲ್ಲಿ ಈ ಸುದೀರ್ಘ ಹಿಂಸಾಚಾರದ ಚಕ್ರವನ್ನು ಇಂದೇ ಶಾಶ್ವತವಾಗಿ ನಿಲ್ಲಿಸೋಣ ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

2026ರ ಚುನಾವಣೆ ಏಕೆ ವಿಶೇಷ..?

ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ 2026ರ ಬಂಗಾಳ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ನಡೆದಿದೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ. ಹಿಂದೆಲ್ಲಾ ಬಂಗಾಳದ ಚುನಾವಣೆ ಎಂದರೆ ಸಾವು-ನೋವು, ಭಯದ ವಾತಾವರಣ ಇರುತ್ತಿತ್ತು. ಆದರೆ ಈ ಬಾರಿ ಯಾವುದೇ ನಾಗರಿಕ ತನ್ನ ಪ್ರಾಣ ಕಳೆದುಕೊಳ್ಳಲಿಲ್ಲ. ಇದು ಭಯದ ಸೋಲು ಮತ್ತು ಪ್ರಜಾಪ್ರಭುತ್ವದ ಗೆಲುವು ಎಂದು ಮೋದಿ ವಿಶ್ಲೇಷಿಸಿದ್ದಾರೆ.

ವಿಜಯದ ಪಥ ಮತ್ತು ಬಂಗಾಳದ ಕನಸು

ಬಿಜೆಪಿಯು ಬಂಗಾಳದಲ್ಲಿ ಅಭಿವೃದ್ಧಿ, ನಂಬಿಕೆ ಮತ್ತು ಹೊಸ ಭರವಸೆಗಳೊಂದಿಗೆ ಹೆಜ್ಜೆ ಹಾಕಲಿದೆ ಎಂದು ಮೋದಿ ಹೇಳಿದ್ದಾರೆ. ಬಂಗಾಳದ ಕಳೆದುಹೋದ ಗೌರವವನ್ನು ಮರುಸ್ಥಾಪಿಸುವುದು ನಮ್ಮ ಗುರಿಯಾಗಿದೆ. ಇಂದಿನಿಂದ ಬಂಗಾಳದ ಭವಿಷ್ಯದ ಹೊಸ ಪಯಣ ಆರಂಭವಾಗಿದೆ ಎಂದು ಘೋಷಿಸಿದರು.
ಈ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ಕೇಂದ್ರ ಸಚಿವರು, ರಾಜ್ಯ ಬಿಜೆಪಿ ನಾಯಕರು ಮತ್ತು ಹಿರಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ದೆಹಲಿಯ ಬಿಜೆಪಿ ಕಚೇರಿಯು ಕೇಸರಿಮಯವಾಗಿತ್ತು ಮತ್ತು ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು,(ಏಜೆನ್ಸೀಸ್​).