Safety rules 
ದೇಶ

ಸಂಪಾದಕೀಯ: ಸುರಕ್ಷಾ ನಿಯಮ ನಿರ್ಲಕ್ಷ್ಯ ಸಲ್ಲ

ದೇಶದ ಕೈಗಾರಿಕಾ ವಲಯದಲ್ಲಿ ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ನಿರ್ಲಕ್ಷ್ಯದ ಪರಾಕಾಷ್ಠೆ ಎಷ್ಟು ಭೀಕರವಾಗಿರಬಲ್ಲದು ಎಂಬುದಕ್ಕೆ ಇತ್ತೀಚೆಗೆ ಆಂಧ್ರಪ್ರದೇಶದ ಕಾಕಿನಾಡ ಮತ್ತು ಮಹಾರಾಷ್ಟ್ರದ ನಾಗಪುರದಲ್ಲಿ ಸಂಭವಿಸಿದ ಸ್ಪೋಟಗಳೇ ಸಾಕ್ಷಿ. ಕೇವಲ ಎರಡೇ ದಿನಗಳ ಅಂತರದಲ್ಲಿ ಸಂಭವಿಸಿದ ಈ ದುರಂತಗಳಲ್ಲಿ ಸುಮಾರು 39 ಅಮಾಯಕ ಜೀವಗಳು ಬಲಿಯಾಗಿವೆ. ಇವು ಕೇವಲ ಆಕಸ್ಮಿಕ ಅಪಘಾತಗಳಲ್ಲ, ವ್ಯವಸ್ಥೆಯ ವೈಫಲ್ಯದ ಪ್ರತಿಬಿಂಬ. ಪ್ರತಿ ಬಾರಿ ಇಂತಹ ಘಟನೆಗಳು ನಡೆದಾಗಲೂ ತನಿಖೆ, ಪರಿಹಾರ ಮತ್ತು ಸಾಂತ್ವನದ ಮಾತುಗಳು ಕೇಳಿಬರುತ್ತವೆ. ಆದರೆ, ಮೂಲಭೂತ ಪ್ರಶ್ನೆಯಾದ ‘ಸುರಕ್ಷಾ ಮಾನದಂಡಗಳ ಕಟ್ಟುನಿಟ್ಟಿನ ಜಾರಿ’ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
ಪಟಾಕಿ ತಯಾರಿಕಾ ಘಟಕಗಳು ಮತ್ತು ರಾಸಾಯನಿಕ ಕಾರ್ಖಾನೆಗಳು ‘ಬೆಂಕಿಯ ಉಂಡೆ’ಗಳ ಮೇಲೆ ಕುಳಿತಂತಿರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೂ, ಇಲ್ಲಿ ಕೆಲಸ ಮಾಡುವ ಕಾರ್ವಿುಕರಿಗೆ ಕನಿಷ್ಠ ಸುರಕ್ಷತಾ ಪರಿಕರಗಳನ್ನು ಒದಗಿಸದಿರುವುದು ಮತ್ತು ತಾಂತ್ರಿಕ ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಿರುವುದು ಅಕ್ಷಮ್ಯ ಅಪರಾಧ. ಕಾರ್ಖಾನೆಗಳ ಆವರಣದಲ್ಲಿ ನಡೆಯುವ ಅಪಾಯಕಾರಿ ಕಾರ್ಯಾಚರಣೆಗಳ ಮೇಲೆ ನಿರಂತರ ನಿಗಾ ಇಡುವಲ್ಲಿ ಸಂಬಂಧಪಟ್ಟ ಇಲಾಖೆಗಳು ಸೋತಿವೆ ಎಂಬುದನ್ನು ಕಾಕಿನಾಡ ಮತ್ತು ನಾಗಪುರದ ಘಟನೆಗಳು ಎತ್ತಿ ತೋರಿಸುತ್ತವೆ.
ಕಾರ್ಖಾನೆಗಳಲ್ಲಿ ಸುರಕ್ಷತೆಯ ಕೊರತೆಗೆ ಮಾಲೀಕರು ಮಾತ್ರವಲ್ಲದೆ, ಭ್ರಷ್ಟಾಚಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯೂ ಕಾರಣ. ಅನೇಕ ಬಾರಿ ಪರವಾನಗಿ ಪಡೆದ ಮಿತಿಗಿಂತ ಹೆಚ್ಚು ಸ್ಪೋಟಕಗಳನ್ನು ಸಂಗ್ರಹಿಸಿಡುವುದು, ತರಬೇತಿ ಪಡೆಯದ ಕಾರ್ವಿುಕರನ್ನು ಅಪಾಯಕಾರಿ ಕೆಲಸಗಳಿಗೆ ಬಳಸುವುದು ಮತ್ತು ಕಾಲಕಾಲಕ್ಕೆ ನಡೆಯಬೇಕಾದ ಸುರಕ್ಷತಾ ತಪಾಸಣೆಗಳು ಕೇವಲ ಕಾಗದಕ್ಕೆ ಸೀಮಿತವಾಗುತ್ತಿರುವುದು ದುರಂತದ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಹೆಚ್ಚಿನ ಲಾಭದ ಹಪಾಹಪಿಗೆ ಬಿದ್ದ ಮಾಲೀಕರು ಕಾರ್ವಿುಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.ಕಾರ್ವಿುಕರ ಪಾಲಿಗೆ ಕೆಲಸದ ಸ್ಥಳ ಮಸಣವಾಗಬಾರದು ಎಂದರೆ ಸರ್ಕಾರ ಮತ್ತು ಆಡಳಿತ ಮಂಡಳಿಗಳು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ.
ಕಾರ್ಖಾನೆ ಪರಿವೀಕ್ಷಕರು ಅನಿರೀಕ್ಷಿತ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು. ಸ್ಪೋಟಕ ಘಟಕಗಳಲ್ಲಿ ಉಷ್ಣಾಂಶ ಏರಿಕೆ ಅಥವಾ ಅನಿಲ ಸೋರಿಕೆ ಯನ್ನು ಪತ್ತೆ ಹಚ್ಚುವ ಆಧುನಿಕ ಸೆನ್ಸರ್ ಅಳವಡಿಕೆ ಕಡ್ಡಾಯಗೊಳಿಸಬೇಕು. ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸುವುದರ ಜತೆಗೆ, ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಪ್ರತಿಯೊಬ್ಬ ಕಾರ್ವಿುಕನಿಗೂ ತುರ್ತು ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಮತ್ತು ಬೆಂಕಿ ನಂದಿಸುವ ಉಪಕರಣಗಳನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಕಡ್ಡಾಯ ತರಬೇತಿ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗಾರಿಕಾ ಸುರಕ್ಷತೆಗೆ ಸಂಬಂಧಿಸಿದ ಕಾನೂನುಗಳನ್ನು ಹೆಚ್ಚು ಬಲಪಡಿಸಬೇಕಿದೆ. ಸತ್ತವರ ಕುಟುಂಬಕ್ಕೆ ಹಣದ ರೂಪದಲ್ಲಿ ಪರಿಹಾರ ನೀಡುವುದು ಕೇವಲ ತಾತ್ಕಾಲಿಕ ಮದ್ದು. ಆದರೆ, ಅಂತಹ ಘಟನೆಗಳೇ ಸಂಭವಿಸದಂತೆ ತಡೆಯುವುದು ಶಾಶ್ವತ ಪರಿಹಾರ. ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯನ ಜೀವವನ್ನು ಬಲಿ ಕೊಡುವುದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ.