Sachin Tendulkar | ತಂದೆಯ 'ಆ' ನುಡಿಮುತ್ತು ಸ್ಮರಿಸಿ ಯುವಪಡೆಗೆ ಸಚಿನ್​ ಹೇಳಿದ್ದೇನು..? 
ದೇಶ

ವಿದ್ಯಾರ್ಥಿ ಸಮರಕ್ಕೆ ಸಿಕ್ತು 'ಕ್ರಿಕೆಟ್​ ದೇವರ' ಆಶೀರ್ವಾದ!...ತಂದೆಯ 'ಆ' ನುಡಿಮುತ್ತು ಸ್ಮರಿಸಿ ಯುವಪಡೆಗೆ ಸಚಿನ್​ ಹೇಳಿದ್ದೇನು..? | Sachin Tendulkar

ನವದೆಹಲಿ: ನೀಟ್​ ಪೇಪರ್ ಲೀಕ್ ಅಕ್ರಮವನ್ನು ಖಂಡಿಸಿ ರಾಷ್ಟ್ರ ರಾಜಧಾನಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಹಾಗೂ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಶುಭಮಾನ್ ಗಿಲ್ ಪ್ರತಿಕ್ರಿಯೆ ನೀಡಿದ್ದು, ಸಚಿನ್ ಅವರು ತಮ್ಮ ತಂದೆಯವರ ಆರಂಭಿಕ ದಿನಗಳ ಬೋಧನೆಗಳನ್ನು ಸ್ಮರಿಸಿಕೊಂಡಿದ್ದಾರೆ.
ನೀಟ್​ ಪೇಪರ್ ಲೀಕ್ ಖಂಡಿಸಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯು ಈಗಾಗಲೇ ಒಂದುವರೆ ತಿಂಗಳಿಗೂ ಹೆಚ್ಚು ಕಾಲದಿಂದ ದೇಶಾದ್ಯಂತ ವ್ಯಾಪಕ ಗಮನ ಸೆಳೆದಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.

ತಂದೆಯ ಬೋಧನೆ ಸ್ಮರಿಸಿದ ಸಚಿನ್ ತೆಂಡೂಲ್ಕರ್

ಪ್ರತಿಭಟನೆ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಮಾಸ್ಟರ್ ಬ್ಲಾಸ್ಟರ್, ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ತಮ್ಮ ತಂದೆ ರಮೇಶ್ ತೆಂಡೂಲ್ಕರ್ ಅವರ ಸದುಪದೇಶಗಳನ್ನು ಹಂಚಿಕೊಂಡಿದ್ದಾರೆ. ನನ್ನ ತಂದೆ ಒಬ್ಬ ಪ್ರೊಫೆಸರ್ ಆಗಿದ್ದರು. ಅವರು ಅನೇಕ ಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಅವರು ನನಗೆ ಬಾಲ್ಯದಲ್ಲೇ ಕಲಿಸಿದ ಒಂದು ಮುಖ್ಯ ಪಾಠವೆಂದರೆ ಸೋಲುವುದು ತಪ್ಪಲ್ಲ, ಆದರೆ ಮೋಸ ಮಾಡುವುದು ತಪ್ಪು. ಎಂದಿಗೂ ಅಡ್ಡದಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ ಎನ್ನುವ ಮಾತನ್ನು ತೆಂಡೂಲ್ಕರ್ ನೆನಪಿಸಿಕೊಂಡಿದ್ದಾರೆ.
ಸಮಾಜದಲ್ಲಿ ಹಿರಿಯರಾಗಿ ಸಂಸ್ಕೃತಿಯನ್ನು ರೂಪಿಸುವ ಮಹತ್ತ್ವದ ಜವಾಬ್ದಾರಿ ನಮ್ಮ ಮೇಲಿದೆ. ಶ್ರಮಕ್ಕಿಂತ ಫಲಿತಾಂಶಕ್ಕೆ ಮಾತ್ರ ಆದ್ಯತೆ ನೀಡುವ ಸಮಾಜವು ಅರ್ಹತೆಗಿಂತ ಅಡ್ಡದಾರಿಗಳನ್ನೇ ಹುಡುಕುತ್ತದೆ. ಇಂದು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲವೆಂದು ವಿದ್ಯಾರ್ಥಿಗಳು ನಿರಾಶೆಗೊಂಡಿರುವುದು ಸಹಜ. ಇಂತಹ ಭಾವನೆ ಅವರಿಗೆ ಮತ್ತೆಂದೂ ಬಾರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ವಿದ್ಯಾರ್ಥಿಗಳನ್ನು ಯುವ ಭಾರತ ಹಾಗೂ ನಮ್ಮ ಯಶಸ್ಸಿನ ಇಂಧನ ಎಂದು ಬಣ್ಣಿಸಿದ ಸಚಿನ್, ಯುವ ಭಾರತವು ಕನಸುಗಳು ಮತ್ತು ಉತ್ಸಾಹದಿಂದ ತುಂಬಿದೆ. ಅವರು ನಮ್ಮ ಯಶಸ್ಸಿನ ಶಕ್ತಿಯಾಗಿದ್ದಾರೆ. ಪೋಷಕರು, ಶಿಕ್ಷಕರು, ಸ್ನೇಹಿತರು, ಸಂಬಂಧಿಕರು, ಶಾಲೆಗಳು ಹಾಗೂ ಆಡಳಿತಗಾರರು ಸೇರಿದಂತೆ ಸಮಾಜದ ಪ್ರತಿಯೊಬ್ಬರೂ ನಮ್ಮ ಯುವಜನತೆಯನ್ನು ಪ್ರೋತ್ಸಾಹಿಸಲು ತಮ್ಮದೇ ಆದ ಪಾತ್ರ ಮತ್ತು ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಸಚಿನ್​ ತಿಳಿಸಿದ್ದಾರೆ.
ಶ್ರಮಕ್ಕೆ ಗೌರವ, ಪ್ರಾಮಾಣಿಕತೆಗೆ ಪ್ರೋತ್ಸಾಹ ಮತ್ತು ಅರ್ಹತೆಗೆ ಗೆಲುವು ಸಿಗುವ ವಾತಾವರಣವನ್ನು ನಾವು ನಿರ್ಮಿಸಬೇಕು. ನಮ್ಮ ಮಕ್ಕಳ ಭವಿಷ್ಯವನ್ನು ಬಲಪಡಿಸುವ ಮತ್ತು ಅವರ ಆಕಾಂಕ್ಷೆಗಳನ್ನು ಕಾಯುವ ಸೂಕ್ತ ಪರಿಹಾರವನ್ನು ನಾವೆಲ್ಲರೂ ಕಂಡುಕೊಳ್ಳುತ್ತೇವೆ ಎಂಬ ಭರವಸೆ ನನಗಿದೆ. ಜೈ ಹಿಂದ್! ಎಂದು ಸಚಿನ್ ಬರೆದುಕೊಂಡಿದ್ದಾರೆ.

ಶುಭಮಾನ್ ಗಿಲ್ ಹೇಳಿದ್ದೇನು..?

ಇನ್ನೊಂದೆಡೆ, ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಶುಭಮಾನ್ ಗಿಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಪ್ರತಿಭಟನೆಗೆ ಸ್ಪಂದಿಸಿದ್ದಾರೆ. ಯುವ ಭಾರತೀಯನಾಗಿ, ನಮ್ಮ ಪೀಳಿಗೆಗೆ ಕಲಿಯಲು, ಕನಸು ಕಾಣಲು ಮತ್ತು ನಾವು ಬಯಸುವ ಭವಿಷ್ಯವನ್ನು ರೂಪಿಸಲು ಪ್ರತಿಯೊಂದು ಅವಕಾಶವೂ ಸಿಗಬೇಕು ಎಂದು ನಾನು ನಂಬುತ್ತೇನೆ. ಶಾಂತಿಯುತವಾಗಿ ತಮ್ಮ ಧ್ವನಿಯನ್ನು ಎತ್ತುತ್ತಿರುವ ಪ್ರತಿಯೊಬ್ಬ ಯುವಕನ ಬಗ್ಗೆ ನನಗೂ ಅಪಾರ ಗೌರವವಿದೆ ಎಂದಿದ್ದಾರೆ.
ಶಿಕ್ಷಣಕ್ಕೆ ದೇಶದ ಭವಿಷ್ಯವನ್ನು ಬದಲಾಯಿಸುವ ಶಕ್ತಿಯಿದೆ. ಕರುಣೆ, ಪರಸ್ಪರ ಗೌರವ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಾವು ಮುನ್ನಡೆಯುತ್ತೇವೆ ಎಂದು ಭಾವಿಸುತ್ತೇನೆ. ಭಾರತದ ಭವಿಷ್ಯಕ್ಕಾಗಿ ಎಂದು ಗಿಲ್ ಬರೆದುಕೊಂಡಿದ್ದಾರೆ.

ಪ್ರಧಾನ್ ರಾಜೀನಾಮೆಗೆ ವಿಪಕ್ಷಗಳ ಪಟ್ಟು!...

ಇಂದು ಗಾಂಧಿ ಸ್ಮೃತಿಗೆ ಭೇಟಿ ನೀಡಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸಬೇಕು ಮತ್ತು ವಿದ್ಯಾರ್ಥಿಗಳ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕು ಎಂದು ಆಗ್ರಹಿಸಿದರು. ಇನ್ನೊಂದೆಡೆ, ಪೇಪರ್ ಲೀಕ್ ಮತ್ತು ಸಿಜಿಪಿ ಬೇಡಿಕೆಗಳ ಕುರಿತು ಸರ್ಕಾರದ ನಿರಂತರ ಭರವಸೆಗಳು ಹಾಗೂ ಮಾತುಕತೆಯ ಆಹ್ವಾನಗಳ ಹೊರತಾಗಿಯೂ, ಕಾಕ್ರೋಚ್ ಜನತಾ ಪಾರ್ಟಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಯನ್ನು ಮುಂದುವರಿಸಿದ್ದು, ಜುಲೈ 24 ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ(ಏಜೆನ್ಸೀಸ್​).