Punjab Congress > ಪಂಜಾಬ್ ಬಿಕ್ಕಟ್ಟು ಶಮನಕ್ಕೆ 'ಪೈಲಟ್'ಗೆ ಜವಾಬ್ದಾರಿ! 
ದೇಶ

ಪಂಜಾಬ್ ಬಿಕ್ಕಟ್ಟು ಶಮನಕ್ಕೆ 'ಪೈಲಟ್'ಗೆ ಜವಾಬ್ದಾರಿ!...ಭೂಪೇಶ್ ಬಾಘೇಲ್‌ರನ್ನು ಕೈ ಬಿಟ್ಟಿದ್ದೇಕೆ ಕಾಂಗ್ರೆಸ್ ಹೈಕಮಾಂಡ್...? | Punjab Congress

Punjab Congress: ಪಂಜಾಬ್ ಕಾಂಗ್ರೆಸ್‌ ಘಟಕದಲ್ಲಿ ಉಂಟಾಗಿರುವ ಭಿನ್ನಮತವನ್ನು ಶಮನಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಶನಿವಾರ ರಾತ್ರಿ ಸಚಿನ್ ಪೈಲಟ್ ಅವರನ್ನು ಪಂಜಾಬ್‌ನ ನೂತನ ಸಂಘಟನಾ ಉಸ್ತುವಾರಿಯಾಗಿ ನೇಮಕ ಮಾಡಿದೆ. ಈ ಹಿಂದೆ ಉಸ್ತುವಾರಿಯಾಗಿದ್ದ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರನ್ನು ಈ ಹುದ್ದೆಯಿಂದ ತೆರವುಗೊಳಿಸಿ ಅಸ್ಸಾಂ ರಾಜ್ಯದ ಹೊಣೆ ನೀಡಲಾಗಿದ್ದು, ಇದು ಪ್ರಮುಖ ಸಂಘಟನಾತ್ಮಕ ಬದಲಾವಣೆಯ ಭಾಗವಾಗಿ ಈ ಪ್ರಕ್ರಿಯೆ ನಡೆದಿದೆ.
ಪಂಜಾಬ್ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಮೂಡಿಸುವುದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿಯಾಗಿರುವ ಸಚಿನ್ ಪೈಲಟ್ ಮೊದಲ ಆದ್ಯತೆಯಾಗಬೇಕಿದ್ದು, ಈ ಮಹತ್ವದ ಜವಾಬ್ದಾರಿಯು ಪಕ್ಷದಲ್ಲಿ ಅವರ ಸ್ಥಾನಮಾನವನ್ನು ಹೆಚ್ಚಿಸಿದೆಯಾದರೂ, ಅವರ ಸ್ವಂತ ರಾಜ್ಯವಾದ ರಾಜಸ್ಥಾನದ ರಾಜಕೀಯಕ್ಕೆ ಅವರ ಪುನರಾಗಮನವನ್ನು ಮತ್ತಷ್ಟು ವಿಳಂಬಗೊಳಿಸಿದೆ. ದಿವಂಗತ ರಾಜೇಶ್ ಪೈಲಟ್ ಅವರ ಪುತ್ರರಾದ ಸಚಿನ್, ಹಿಂದೆ ಮನ್ಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿ, ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಪೈಲಟ್​ ಸಿಎಂ ಕನಸಿನ ಕಥೆ ಏನು..?

2028ರ ವಿಧಾನಸಭಾ ಚುನಾವಣೆಗೆ ಮುನ್ನ ಪೈಲಟ್ ಅವರಿಗೆ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಮತ್ತೆ ನೀಡಲಾಗುತ್ತದೆ ಎಂಬ ಸುದ್ದಿಗಳ ಹರಿದಾಡಿದ್ದವು. ಆದರೆ ಈಗ 2027ರ ಆರಂಭದಲ್ಲೇ ಚುನಾವಣೆ ಎದುರಿಸಲಿರುವ ಪಂಜಾಬ್‌ನ ಹೊಣೆ ನೀಡಿರುವುದರಿಂದ, ರಾಜಸ್ಥಾನ ರಾಜಕೀಯಕ್ಕೆ ಅವರು ಮರಳಲು ಇನ್ನಷ್ಟು ಕಾಯುವುದು ಅನಿವಾರ್ಯವಾಗಿದೆ. ಪಂಜಾಬ್‌ ಕಾಂಗ್ರೆಸ್​ನಲ್ಲಿ ದೊಡ್ಡ ಮಟ್ಟದ ಆಂತರಿಕ ಕಲಹ ಉಂಟಾಗಿದ್ದು, ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿ ನೇತೃತ್ವದ ಹಿರಿಯ ನಾಯಕರ ತಂಡವು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕೆಂದು ಪಟ್ಟು ಹಿಡಿದಿತ್ತು.
ಈ ವಿಷಯವಾಗಿ ಸುದೀರ್ಘ ಚರ್ಚೆಗಳು ನಡೆದ ನಂತರ ಜುಲೈ 1 ರಂದು ಹೈಕಮಾಂಡ್ ರಾಜಾ ವಾರಿಂಗ್ ಅವರನ್ನೇ ಅಧ್ಯಕ್ಷರಾಗಿ ಮುಂದುವರಿಸಿ, ಚನ್ನಿ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಪಟ್ಟ ನೀಡಿತ್ತು. ಆದಾಗ್ಯೂ ಚನ್ನಿ, ಶಾಸಕಾಂಗ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ಸಂಸದ ಸುಖಜೀಂದರ್ ಸಿಂಗ್ ರಂಧಾವಾ ಮತ್ತು ವಿಜಯ್ ಇಂದರ್ ಸಿಂಗ್ಲಾ ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದರು.
ಕಳೆದ ವರ್ಷ ಫೆಬ್ರುವರಿಯಲ್ಲಿ ಉಸ್ತುವಾರಿಯಾಗಿದ್ದ ಭೂಪೇಶ್ ಬಾಘೇಲ್ ನಾಯಕರನ್ನು ಒಗ್ಗೂಡಿಸಲು ವಿಫಲರಾಗಿದ್ದಲ್ಲದೆ, ರಾಜಾ ವಾರಿಂಗ್ ಪರ ತಟಸ್ಥತೆ ಕಳೆದುಕೊಂಡಿದ್ದರು ಎನ್ನಲಾಗಿದ್ದು, ಇದರಿಂದಾಗಿ ಅವರ ವಿರುದ್ಧ ಪಂಜಾಬ್‌ನ ಕೆಲವು ಕಡೆ ಪೋಸ್ಟರ್‌ ಅಭಿಯಾನ​ ಕೂಡ ನಡೆದಿತ್ತು. ಈ ಹಿನ್ನೆಲೆಯಲ್ಲಿ ರಾಜಾ ವಾರಿಂಗ್ ವಿರೋಧಿ ಬಣವನ್ನು ಶಾಂತಗೊಳಿಸಲು ಹೈಕಮಾಂಡ್ ಸಚಿನ್ ಪೈಲಟ್ ಅವರನ್ನು ಕರೆತಂದಿದೆ. ಈ ನಿರ್ಧಾರವನ್ನು ಚನ್ನಿ, ವಾರಿಂಗ್, ರಂಧಾವಾ ಸೇರಿದಂತೆ ಎಲ್ಲಾ ನಾಯಕರು ಸ್ವಾಗತಿಸಿದ್ದಾರೆ. ಆದರೆ ಈ ನಾಯಕತ್ವ ಬದಲಾವಣೆಯಿಂದ ಚನ್ನಿ ತಮ್ಮ ರಾಜಾ ವಾರಿಂಗ್ ವಿರೋಧಿ ನಿಲುವನ್ನು ಬಿಡುತ್ತಾರೆಯೇ ಎಂಬುದು ಮುಂದಿರುವ ಯಕ್ಷಪ್ರಶ್ನೆ.
ಶೀಘ್ರದಲ್ಲೇ ರಾಹುಲ್ ಗಾಂಧಿ ಅವರು ಪಂಜಾಬ್‌ನಾದ್ಯಂತ ಎಲ್ಲ ನಾಯಕರೊಂದಿಗೆ ಬಸ್ ಯಾತ್ರೆ ನಡೆಸಲಿದ್ದು, ಇದು ಪೈಲಟ್ ಅವರಿಗೆ ಮೊದಲ ಅಗ್ನಿಪರೀಕ್ಷೆಯಾಗಲಿದೆ. ಭಗವಂತ್ ಮಾನ್ ನೇತೃತ್ವದ ಆಪ್ ಸರ್ಕಾರ, ಜೊತೆಗೆ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳದ ಮುಂಬರುವ ಮೈತ್ರಿ ಹಾಗೂ ಜೈಲಿನಲ್ಲಿರುವ ಸಂಸದ ಅಮೃತಪಾಲ್ ಸಿಂಗ್ ಅವರ ಬಣದ ಸವಾಲುಗಳನ್ನು ಎದುರಿಸಿ ಕಾಂಗ್ರೆಸ್ ಅನ್ನು ಗೆಲ್ಲಿಸಬೇಕಾದ ದೊಡ್ಡ ಜವಾಬ್ದಾರಿ ಈಗ ಸಚಿನ್ ಪೈಲಟ್ ಹೆಗಲೇರಿದೆ(ಏಜೆನ್ಸೀಸ್​).