ಮುರಾರಿ ಬಾಬು  
ದೇಶ

ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣ; ಎರಡನೇ ಆರೋಪಿಯಾಗಿದ್ದ ಮುರಾರಿ ಬಾಬು ಸಾವು | Murari Babu dies

ತಿರುವನಂತಪುರಂ: ಕೇರಳಂನ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದಿಂದ ಬಂಧಿಸಲ್ಪಟ್ಟಿದ್ದ ದೇವಸ್ಥಾನದ ಮಾಜಿ ಆಡಳಿತ ಅಧಿಕಾರಿ ಮುರಾರಿ ಬಾಬು(Murari Babu dies) ಶನಿವಾರ(ಜೂ. 13) ಕೊಚ್ಚಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕೊಟ್ಟಾಯಂ ಜಿಲ್ಲೆಯ ಚಂಗನಶ್ಶೇರಿ ಬಳಿಯ ಪೆರುನ್ನದವರಾದ ಮುರಾರಿ ಬಾಬು ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ 12.48 ರ ಸುಮಾರಿಗೆ ಸಾವು ಸಂಭವಿಸಿದ್ದು, ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಪೆರುನ್ನದ ತೆಕ್ಕೆಡತ್‌ ಹೌಸ್‌ನ ಮುರಾರಿ ಬಾಬು ಅವರು 1994ರಲ್ಲಿ ಪೊಲೀಸ್‌ ಅಧಿಕಾರಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಆದರೆ ನಂತರ ಸೇವೆಗೆ ರಾಜೀನಾಮೆ ನೀಡಿ 1997ರಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದ್ದರು. ವೈಕಂ, ಎಟ್ಟುಮನೂರು ಮತ್ತು ತಿರುನಕ್ಕರ ದೇವಸ್ಥಾನಗಳಲ್ಲಿ ದೇವಸ್ವಂ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
2019ರಲ್ಲಿ ಶಬರಿಮಲೆ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ನೇಮಕಗೊಂಡಿದ್ದ ಮುರಾರಿ ಬಾಬು, 2024ರವರೆಗೂ ಆ ಹುದ್ದೆಯಲ್ಲಿ ಮುಂದುವರೆದಿದ್ದರು. ಈ ವೇಳೆ ನಡೆದ ಚಿನ್ನ ಕಳವು ಪ್ರಕರಣದಲ್ಲಿ ಎಸ್​ಐಟಿ ಅವರನ್ನು ಪ್ರಕರಣದಲ್ಲಿ ಎರಡನೇ ಆರೋಪಿಯನ್ನಾಗಿಸಿತ್ತು. ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಗೆ ಚಿನ್ನವನ್ನು ಹಸ್ತಾಂತರಿಸುವಲ್ಲಿ ಅವರ ಪಾತ್ರವನ್ನು ಎಸ್ಐಟಿ ಪತ್ತೆ ಹಚ್ಚಿತ್ತು.
2025 ಆಕ್ಟೋಬರ್ 25ರಂದು ಎಸ್​ಐಟಿಯಿಂದ ಬಂಧಿಸಲ್ಪಟ್ಟಿದ್ದ ಬಾಬು, 90 ದಿನಗಳ ಕಾಲ ಜೈಲಿನಲ್ಲಿದ್ದರು. ಬಂಧನವಾದ 90 ದಿನಗಳ ನಂತರವೂ ಎಸ್‌ಐಟಿ ಆರೋಪಪಟ್ಟಿ ಸಲ್ಲಿಸಲು ವಿಫಲವಾದ ಕಾರಣ ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು (ಏಜೆನ್ಸೀಸ್).