ಕೇರಳ ಹೈಕೋರ್ಟ್, ಶಬರಿಮಲಾ ಅಯ್ಯಪ್ಪ ಸ್ವಾಮಿ ದೇವಸ್ಥಾನ
- ಶಬರಿಮಲಾ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕರಣ
- ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್
- ರೊದ್ದಂ ಗೋವರ್ಧನ್, ಎ. ಪದ್ಮಕುಮಾರ್, ಬಿ.ಮುರಾರಿ ಬಾಬು ಸಲ್ಲಿಸಿದ್ದ ಜಾಮೀನು ಅರ್ಜಿ
ಕೇರಳ: ಶಬರಿಮಲಾ (Sabarimala) ಅಯ್ಯಪ್ಪ ಸ್ವಾಮಿ ದೇವಸ್ಥಾನದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಬುಧವಾರ(ಜ.21)ಜಾಮೀನು ನಿರಾಕರಿಸಿ ಆದೇಶಿಸಿದೆ.
ಕರ್ನಾಟಕ ಮೂಲದ ಆಭರಣ ವ್ಯಾಪಾರಿ ರೊದ್ದಂ ಗೋವರ್ಧನ್, ಟಿಡಿಬಿ ಮಾಜಿ ಅಧ್ಯಕ್ಷ ಹಾಗೂ ಸಿಪಿಎಂ ಹಿರಿಯ ನಾಯಕ ಎ. ಪದ್ಮಕುಮಾರ್ ಹಾಗೂ ಮಾಜಿ ಆಡಳಿತಾಧಿಕಾರಿ ಬಿ.ಮುರಾರಿ ಬಾಬು ಅವರಿಗೆ ನ್ಯಾಯಮೂರ್ತಿ ಎ.ಬದರುದ್ದೀನ್ ಅವರ ನ್ಯಾಯಪೀಠ ಜಾಮೀನು ನೀಡಲು ನಿರಾಕರಿಸಿದೆ.
ಶಬರಿಮಲೆ ದೇವಸ್ಥಾನದ ದ್ವಾರಪಾಲಕ ವಿಗ್ರಹಗಳು ಮತ್ತು ಬಾಗಿಲು ಚೌಕಟ್ಟಿಗೆ ಅಳವಡಿಸಿದ್ದ ಚಿನ್ನಗಳ ದುರಸ್ತಿ ಕಾರ್ಯದ ಬಳಿಕ ಸುಮಾರು ನಾಲ್ಕು ಕಿಲೋಗ್ರಾಂ ಚಿನ್ನ ಕಡಿಮೆಯಾಗಿದ್ದು ಇದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
2019ರಲ್ಲಿ ಆರೋಪಿತ ಕಳವು ನಡೆದ ಸಮಯದಲ್ಲಿ ಟಿಡಿಬಿ ಅಧ್ಯಕ್ಷರಾಗಿದ್ದ ಪದ್ಮಕುಮಾರ್ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತಿರುವನಂತಪುರಂನಲ್ಲಿನ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ ಬಳಿಕ ಬಂಧಿಸಿತ್ತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉನ್ನಿಕೃಷ್ಣನ್ ಪೊಟ್ಟಿ ಜೊತೆ ಸಂಚು ರೂಪಿಸಿದ್ದು ಆರೋಪದಲ್ಲಿ ಪದ್ಮಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದರು.
ಚಿನ್ನಲೇಪಿತ ತಾಮ್ರದ ಹೊದಿಕೆ ಎಂದು ಉಲ್ಲೇಖಿಸುವ ಬದಲು ತಾಮ್ರದ ಹೊದಿಕೆಗಳು ಎಂದು ಪದ್ಮಕುಮಾರ್ ವರ್ಗೀಕರಿಸಿದ್ದರು. ಇದರಿಂದ ಪೊಟ್ಟಿಗೆ ದೇವಸ್ಥಾನದ ವಸ್ತುಗಳನ್ನು ಸ್ವೀಕರಿಸಿ ಚಿನ್ನವನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ದೊರಕಿತು ಎಂದು ಆರೋಪಿಸಲಾಗಿದೆ.
ಉನ್ನಿಕೃಷ್ಣನ್ ಪೊಟ್ಟಿ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ದುರಸ್ತಿ ಕಾರ್ಯಗಳ ಪ್ರಾಯೋಜಕತ್ವವನ್ನು ಈ ಪೊಟ್ಟಿಯೇ ಹೊಂದಿದ್ದನು. ದುರಸ್ತಿ ಬಳಿಕ ಚಿನ್ನ ಕಾಣೆಯಾಗಿದೆಯೆಂದು ಆರೋಪಿಸಲಾಗಿದೆ. ಟಿಡಿಬಿ ಅಧಿಕಾರಿಗಳು ಮಾಡಿದ ಅಕ್ರಮಗಳಿಂದ ದುರಸ್ತಿ ಪ್ರಾಯೋಜಕತ್ವದ ಹೆಸರಿನಲ್ಲಿ ಪೊಟ್ಟಿಗೆ ಚಿನ್ನ ಪಡೆಯಲು ಅವಕಾಶವಾಯಿತು ಎಂದು ಪೊಲೀಸರು ಹೇಳಿದ್ದಾರೆ,(ಏಜನ್ಸೀಸ್).