ಭಾರತ-ಅಮೆರಿಕ ಡೀಲ್ ನಡುವೆ ರಷ್ಯಾ ಟ್ವಿಸ್ಟ್; ನಮಗೆ ಯಾವುದೇ ಸಂದೇಶ ಬಂದಿಲ್ಲ ಎಂದ ಕ್ರೆಮ್ಲಿನ್: ಟ್ರಂಪ್ ಹೇಳಿಕೆಗೆ ಕೌಂಟರ್..? 
ದೇಶ

ಭಾರತ-ಅಮೆರಿಕ ಡೀಲ್ ನಡುವೆ ರಷ್ಯಾ ಟ್ವಿಸ್ಟ್; ನಮಗೆ ಯಾವುದೇ ಸಂದೇಶ ಬಂದಿಲ್ಲ ಎಂದ ಕ್ರೆಮ್ಲಿನ್: ಟ್ರಂಪ್ ಹೇಳಿಕೆಗೆ ಕೌಂಟರ್..? Russia Statement

ಪ್ರಮುಖ ಮುಖ್ಯಾಂಶಗಳು

  • ಟ್ರಂಪ್ ವರ್ಸಸ್ ಕ್ರೆಮ್ಲಿನ್: ಯಾರ ಮಾತು ನಿಜ..?
  • ಡಿಮಿಟ್ರಿ ಪೆಸ್ಕೋವ್ ಹೇಳಿದ್ದೇನು..?
  • ಭಾರತದ ಮೌನ ಮತ್ತು ಜಾಗತಿಕ ಕುತೂಹಲ..
ಮಾಸ್ಕೋ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಇನ್ಮುಂದೆ ರಷ್ಯಾ ತೈಲ ಖರೀದಿಸುವುದಿಲ್ಲ ಎಂಬ ಹೇಳಿಕೆಯ ಬೆನ್ನಲ್ಲೇ, ರಷ್ಯಾ(Russia Statement) ಇಂದು ಜಾಗತಿಕ ವೇದಿಕೆಯಲ್ಲಿ ಅಚ್ಚರಿಯ ಪ್ರತಿಕ್ರಿಯೆ ನೀಡಿದೆ. ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ನಮಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ ಎಂದು ರಷ್ಯಾದ ಅಧ್ಯಕ್ಷರ ಅಧಿಕೃತ ವಕ್ತಾರ ಡಿಮಿಟ್ರಿ ಪೆಸ್ಕೋವ್ (Dmitry Peskov) ಸ್ಪಷ್ಟಪಡಿಸಿದ್ದಾರೆ.

ಟ್ರಂಪ್ ವರ್ಸಸ್ ಕ್ರೆಮ್ಲಿನ್: ಯಾರ ಮಾತು ನಿಜ..?

ಕೇವಲ 24 ಗಂಟೆಗಳ ಹಿಂದೆ, ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ ನಂತರ, ಭಾರತವು ರಷ್ಯಾ ತೈಲ ನಿಲ್ಲಿಸಲು ಮತ್ತು ಅಮೆರಿಕದಿಂದ ಇಂಧನ ಖರೀದಿಸಲು ಒಪ್ಪಿಕೊಂಡಿದೆ ಎಂದು ಘೋಷಿಸಿದ್ದರು. ಆದರೆ ಇಂದು ಮಾಸ್ಕೋದಲ್ಲಿ ಮಾತನಾಡಿದ ಪೆಸ್ಕೋವ್, ನಾವು ಭಾರತದೊಂದಿಗೆ ಎಲ್ಲಾ ರೀತಿಯಲ್ಲೂ ಸಂಬಂಧವನ್ನು ವೃದ್ಧಿಸಲು ಬಯಸುತ್ತೇವೆ ಮತ್ತು ನವದೆಹಲಿಯಿಂದ ಅಂತಹ ಯಾವುದೇ ನಕಾರಾತ್ಮಕ ಸಂದೇಶ ನಮಗೆ ಬಂದಿಲ್ಲ ಎಂದಿದ್ದಾರೆ.

ಡಿಮಿಟ್ರಿ ಪೆಸ್ಕೋವ್ ಹೇಳಿದ್ದೇನು..?

ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ

ಟ್ರಂಪ್ ಅವರ ಘೋಷಣೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪೆಸ್ಕೋವ್, ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ನಮಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ ಸಂದೇಶ ಬಂದಿಲ್ಲ. ಈ ವಿಷಯದ ಬಗ್ಗೆ ನಾವು ಸದ್ಯಕ್ಕೆ ಏನನ್ನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಷ್ಯಾ-ಭಾರತ ಸ್ನೇಹಕ್ಕೆ ಹೆಚ್ಚಿನ ಆದ್ಯತೆ

ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ನಾವು ಗೌರವಿಸುತ್ತೇವೆ. ಆದರೆ ನಮಗೆ ರಷ್ಯಾ ಮತ್ತು ಭಾರತದ ನಡುವಿನ ಸುಧಾರಿತ ಕಾರ್ಯತಂತ್ರದ ಪಾಲುದಾರಿಕೆ ಎಲ್ಲಕ್ಕಿಂತ ಮುಖ್ಯವಾಗಿದೆ. ಇದನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ಡಿಮೆಟ್ರಿ ಹೇಳಿದ್ದಾರೆ.

ಸುದ್ದಿಗಳನ್ನು ಗಮನಿಸುತ್ತಿದ್ದೇವೆ

ಟ್ರಂಪ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಮತ್ತು ಅದರಲ್ಲಿನ ಹಕ್ಕುಗಳ ಬಗ್ಗೆ ರಷ್ಯಾ ಬಹಳ ಜಾಗರೂಕತೆಯಿಂದ ನಿಗಾ ವಹಿಸಿದೆ ಎಂದು ಪೆಸ್ಕೋವ್ ತಿಳಿಸಿದ್ದಾರೆ. ಅಂದರೆ, ಅಮೆರಿಕದ ಈ ಹೇಳಿಕೆಯ ಹಿಂದೆ ಏನಿದೆ ಎಂಬುದನ್ನು ರಷ್ಯಾ ವಿಶ್ಲೇಷಿಸುತ್ತಿದೆ ಎಂಬ ಮುನ್ಸೂಚನೆ ನೀಡಿದ್ದಾರೆ.

ವಿಶ್ವಾಸಾರ್ಹ ಇಂಧನ ಪಾಲುದಾರ

ರಷ್ಯಾವು ಭಾರತಕ್ಕೆ ಯಾವಾಗಲೂ ವಿಶ್ವಾಸಾರ್ಹ ಇಂಧನ ಪೂರೈಕೆದಾರ ರಾಷ್ಟ್ರವಾಗಿದೆ. ಈ ಸಂಬಂಧವು ಬಾಹ್ಯ ಒತ್ತಡಗಳಿಗೆ ಮಣಿಯುವುದಿಲ್ಲ ಎಂಬ ಅರ್ಥದಲ್ಲಿ ಡಿಮೆಟ್ರಿ ಮಾತನಾಡಿದ್ದಾರೆ.

ಭಾರತದ ಮೌನ ಮತ್ತು ಜಾಗತಿಕ ಕುತೂಹಲ

ಒಂದೆಡೆ ಟ್ರಂಪ್ ಹಕ್ಕು ಮಂಡಿಸುತ್ತಿದ್ದಾರೆ, ಇನ್ನೊಂದೆಡೆ ರಷ್ಯಾ ನಿರಾಕರಿಸುತ್ತಿದೆ. ಆದರೆ ಈ ಇಡೀ ಪ್ರಸಂಗದ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯವು (MEA) ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಪ್ರಧಾನಿ ಮೋದಿ ಅವರು ಸುಂಕ ಕಡಿತಕ್ಕೆ ಧನ್ಯವಾದ ತಿಳಿಸಿದ್ದಾರೆಯೇ ಹೊರತು, ರಷ್ಯಾ ತೈಲದ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಇದು ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರಿ ಕುತೂಹಲ ಮೂಡಿಸಿದೆ,(ಏಜೆನ್ಸೀಸ್).