Oil tankers 
ದೇಶ

ರಷ್ಯಾದಿಂದ ಭಾರತದತ್ತ ಹಡಗುಗಳ ಲಗ್ಗೆ: ಚೀನಾಕ್ಕೆ ಹೋಗುತ್ತಿದ್ದ ತೈಲ ಟ್ಯಾಂಕರ್‌ಗಳು ಈಗ ಇಂಡಿಯಾಕ್ಕೆ 'ಯು-ಟರ್ನ್'! | Oil tankers

ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರತದ ಪ್ರಾಬಲ್ಯ ಮತ್ತೆ ಸಾಬೀತಾಗಿದೆ. ಚೀನಾಕ್ಕೆ ತೈಲ ಹೊತ್ತೊಯ್ಯುತ್ತಿದ್ದ ರಷ್ಯಾದ ಬೃಹತ್ ತೈಲ ಟ್ಯಾಂಕರ್‌ಗಳು(Oil tankers) ದಕ್ಷಿಣ ಚೀನಾ ಸಮುದ್ರದ ಮಧ್ಯದಲ್ಲೇ ದಿಕ್ಕನ್ನು ಬದಲಿಸಿ, ಈಗ ಭಾರತದತ್ತ ಮುಖ ಮಾಡಿವೆ. ಉಕ್ರೇನ್ ಮತ್ತು ಇರಾನ್ ಯುದ್ಧದ ಪರಿಣಾಮವಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ಏರುಪೇರಾಗಿರುವ ಬೆನ್ನಲ್ಲೇ, ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಆಮದು ಮಾಡಿಕೊಳ್ಳಲು ಮುಂದಾಗಿರುವುದು ಈ ಬದಲಾವಣೆಗೆ ಕಾರಣವಾಗಿದೆ.
ಶಿಪ್-ಟ್ರ್ಯಾಕಿಂಗ್ ಅಂಕಿಅಂಶಗಳ ಪ್ರಕಾರ, 'ಆಕ್ವಾ ಟೈಟಾನ್' (Aqua Titan) ಎಂಬ ಹೆಸರಿನ ಅಫ್ರಾಮ್ಯಾಕ್ಸ್ ನೌಕೆಯು ಜನವರಿ ಅಂತ್ಯದಲ್ಲಿ ರಷ್ಯಾದ ಬಾಲ್ಟಿಕ್ ಸಮುದ್ರದ ಬಂದರಿನಿಂದ 'ಯುರಲ್ಸ್' ಕಚ್ಚಾ ತೈಲವನ್ನು ತುಂಬಿಕೊಂಡು ಚೀನಾದ ರಿಝಾವೊ ಬಂದರಿನತ್ತ ಹೊರಟಿತ್ತು. ಆದರೆ, ಮಾರ್ಚ್ ಮಧ್ಯಭಾಗದಲ್ಲಿ ಆಗ್ನೇಯ ಏಷ್ಯಾದ ಸಮುದ್ರದಲ್ಲಿ ಇದ್ದಕ್ಕಿದ್ದಂತೆ ಯು-ಟರ್ನ್ ಪಡೆದಿರುವ ಈ ಹಡಗು, ಈಗ ಮಾರ್ಚ್ 21 ರಂದು ಮಂಗಳೂರಿನ (New Mangalore Port) ಬಂದರಿಗೆ ಬಂದು ತಲುಪಲಿದೆ.
ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಮಧ್ಯಪ್ರಾಚ್ಯದ ತೈಲ ಪೂರೈಕೆಗೆ ಅಡ್ಡಿಯಾಗಿದೆ. ಈ ಬಿಕ್ಕಟ್ಟನ್ನು ನಿಭಾಯಿಸಲು ರಷ್ಯಾದಿಂದ ಹೆಚ್ಚಿನ ತೈಲ ಖರೀದಿಸಲು ಅಮೆರಿಕವು ಭಾರತಕ್ಕೆ ತಾತ್ಕಾಲಿಕವಾಗಿ ಹಸಿರು ನಿಶಾನೆ ತೋರಿಸಿದೆ. ಈ ಅವಕಾಶವನ್ನು ಬಳಸಿಕೊಂಡಿರುವ ಭಾರತೀಯ ಸಂಸ್ಕರಣಾಗಾರಗಳು ಒಂದೇ ವಾರದಲ್ಲಿ ಬರೋಬ್ಬರಿ 30 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲವನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿವೆ. ಕೇವಲ 'ಆಕ್ವಾ ಟೈಟಾನ್' ಮಾತ್ರವಲ್ಲದೆ, ಕನಿಷ್ಠ ಏಳು ಟ್ಯಾಂಕರ್‌ಗಳು ಚೀನಾದ ಬದಲು ಭಾರತದತ್ತ ತಿರುಗಿವೆ ಎಂದು 'ವರ್ಟೆಕ್ಸಾ ಲಿಮಿಟೆಡ್' ವರದಿ ಮಾಡಿದೆ.

ಮತ್ತೊಂದು ಹಡಗು ಝೌಝೌ ಎನ್

ಕಝಾಕಿಸ್ತಾನ್‌ನ ಕಚ್ಚಾ ತೈಲವನ್ನು ಹೊತ್ತಿರುವ 'ಝೌಝೌ ಎನ್.' (Zouzou N.) ಎಂಬ ಮತ್ತೊಂದು ಬೃಹತ್ ನೌಕೆಯು ಕೂಡ ಚೀನಾದತ್ತ ಹೋಗುವುದನ್ನು ನಿಲ್ಲಿಸಿ, ಈಗ ಗುಜರಾತ್‌ನ ಸಿಕ್ಕಾ ಬಂದರಿನತ್ತ ಸಾಗುತ್ತಿದೆ. ಇದು ಮಾರ್ಚ್ 25 ರಂದು ಭಾರತಕ್ಕೆ ತಲುಪುವ ನಿರೀಕ್ಷೆಯಿದೆ.

ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ

ಭಾರತದ ಜೊತೆಗೆ ಈಗ ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಕೂಡ ರಷ್ಯಾದಿಂದ ತೈಲ ಖರೀದಿಸಲು ಆಸಕ್ತಿ ತೋರುತ್ತಿವೆ. ಇದುವರೆಗೆ ಚೀನಾವು ರಷ್ಯಾದ ತೈಲಕ್ಕೆ ಏಕೈಕ ದೊಡ್ಡ ಮಾರುಕಟ್ಟೆಯಾಗಿತ್ತು. ಆದರೆ ಈಗ ಭಾರತವು ಮಾರುಕಟ್ಟೆಗೆ ಭರ್ಜರಿಯಾಗಿ ಇಳಿದಿರುವುದು ಜಾಗತಿಕವಾಗಿ ತೈಲ ಬೆಲೆಗಳಲ್ಲಿ ಏರಿಳಿತ ಉಂಟುಮಾಡುವ ಸಾಧ್ಯತೆಯಿದೆ. ಭಾರತದ ಈ ನಡೆಯು ದೇಶದ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ,(ಏಜೆನ್ಸೀಸ್​).