ನವದೆಹಲಿ: ಭಾರತದ ಪ್ರಾಚೀನ ನಾಗರಿಕತೆ ಮತ್ತು ಭಾಷಾ ವೈವಿಧ್ಯಕ್ಕೆ ಮನಸೋತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಇಷ್ಟೊಂದು ಭಾಷೆಗಳು, ಪ್ರಾದೇಶಿಕ ಉಪಭಾಷೆಗಳು ಹಾಗೂ ವಿಭಿನ್ನ ಸಾಂಸ್ಕೃತಿಕ ಗುರುತುಗಳು ಅಸ್ತಿತ್ವದಲ್ಲಿರುವುದು ನಿಜಕ್ಕೂ ಅದ್ಭುತ ಎಂದಿದ್ದಾರೆ.
ಸರ್ಬಿಯಾದ ಚಲನಚಿತ್ರ ನಿರ್ದೇಶಕ ಎಮಿರ್ ಕುಸ್ತೂರಿಕಾ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಪುಟಿನ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಇತ್ತೀಚಿನ ಮಾತುಕತೆಯ ವೇಳೆ ಭಾರತದ ಹಲವಾರು ಭಾಷೆಗಳು ಕುರಿತು ಸಾಕಷ್ಟು ಮಾಹಿತಿ ತಿಳಿದುಕೊಂಡಿದ್ದಾಗಿ ಪುಟಿನ್ ಹೇಳಿದ್ದಾರೆ.
ಸುಮಾರು 150 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸುಮಾರು 60 ಕೋಟಿ ಜನರು ಒಂದು ಪ್ರಮುಖ ಭಾಷೆಯನ್ನು ಮಾತನಾಡುತ್ತಾರೆ. ಉಳಿದವರು ವಿವಿಧ ಪ್ರಾದೇಶಿಕ ಭಾಷೆಗಳನ್ನು ಬಳಸುತ್ತಾರೆ ಎಂಬ ಮಾಹಿತಿಯನ್ನು ಪ್ರಧಾನಿ ಮೋದಿ ಅವರು ನನಗೆ ಒಂದು ಮಾತುಕತೆಯ ವೇಳೆ ತಿಳಿಸಿದ್ದಾಗಿ ಹೇಳಿದ್ದಾರೆ.
ಇಷ್ಟು ದೊಡ್ಡ ಜನಸಂಖ್ಯೆಯಿರುವ ದೇಶದಲ್ಲಿ ಇಷ್ಟೊಂದು ಭಾಷೆಗಳು ಮತ್ತು ಭಾಷಾ ವೈವಿಧ್ಯ ಇರುವುದು ನಿಜಕ್ಕೂ ವಿಸ್ಮಯಕಾರಿ. ಭಾರತದ ಪ್ರಾಚೀನ ನಾಗರಿಕತೆ ಮತ್ತು ಸಾಂಸ್ಕೃತಿಕ ವೈವಿಧ್ಯವೂ ವಿಶಿಷ್ಟವಾಗಿದ್ದು, ಮೋದಿ ಅವರೊಂದಿಗಿನ ಸಂಭಾಷಣೆಯಿಂದ ಭಾರತದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆ ಎಂದಿದ್ದಾರೆ.
ಕಳೆದ ತಿಂಗಳು ನಡೆದ ವಾಲ್ದಾಯ್ ಡಿಸ್ಕಷನ್ ಕ್ಲಬ್ ಸಭೆಯಲ್ಲಿಯೂ ಪುಟಿನ್ ಭಾರತದ ವೈವಿಧ್ಯವನ್ನು ಕೊಂಡಾಡಿದ್ದರು. ಭಾರತವು ತನ್ನ ವಿಶಾಲತೆ ಮತ್ತು ವೈವಿಧ್ಯದಿಂದ ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ. ಭಾರತವು 'ವಿಶಿಷ್ಟ, ವೈವಿಧ್ಯಮಯ ಹಾಗೂ ಏಕತೆಯಿಂದ ಕೂಡಿದ ದೇಶ' ಎಂದು ಬಣ್ಣಿಸಿದ್ದರು. ವಿವಿಧ ಭಾಷೆಗಳು ಮತ್ತು ಸಂಸ್ಕೃತಿಗಳ ನಡುವೆಯೂ ಜನರು ಒಗ್ಗಟ್ಟಿನಿಂದ ಬದುಕುತ್ತಿರುವುದು ಭಾರತದ ವಿಶೇಷತೆ ಎಂದು ಹೇಳಿದ್ದರು.
ಇದೇ ವೇಳೆ ರಷ್ಯಾದ ನಾಗರಿಕತೆಯ ಬಗ್ಗೆಯೂ ಮಾತನಾಡಿದ್ದ ಪುಟಿನ್, ವಿವಿಧ ಜನಾಂಗಗಳು ಮತ್ತು ಸಮುದಾಯಗಳು ತಮ್ಮ ಧರ್ಮ, ಸಂಪ್ರದಾಯ, ಭಾಷೆ ಹಾಗೂ ಆಧ್ಯಾತ್ಮಿಕ ಗುರುತನ್ನು ಉಳಿಸಿಕೊಂಡು ಬದುಕಲು ರಷ್ಯಾದಲ್ಲಿ ಅವಕಾಶವಿದೆ. ವಿಭಿನ್ನ ಸಮುದಾಯಗಳ ಗುರುತನ್ನು ಗೌರವಿಸುವುದು ರಷ್ಯಾದ ನಾಗರಿಕತೆಯ ಪ್ರಮುಖ ಲಕ್ಷಣ ಎಂದು ಹೇಳಿದ್ದಾರೆ,(ಏಜೆನ್ಸೀಸ್).