ಫೋನ್‌ಪೇ ಸಿಇಒ ಸಮೀರ್ ನಿಗಮ್ 
ದೇಶ

UPI ಪಾವತಿಗಳ ಮೇಲೆ ಶುಲ್ಕ ವಿಧಿಸಲಾಗುತ್ತದೆ ಎಂಬ ವದಂತಿ: ಸ್ಪಷ್ಟನೆ ನೀಡಿದ ಫೋನ್ ಪೇ ಸಿಇಒ ಹೇಳಿದ್ದೇನು? | PhonePe CEO

ನವದೆಹಲಿ: ಲೋಕಸಭೆಯಲ್ಲಿ ಹೊಸ ತೆರಿಗೆ ತಿದ್ದುಪಡಿ ಮಸೂದೆ ಮಂಡನೆಯಾದ ಬಳಿಕ ಯುಪಿಐ ವಹಿವಾಟುಗಳ ಮೇಲೆ ವ್ಯಾಪಾರಿ ರಿಯಾಯಿತಿ ದರ(ಎಂಡಿಆರ್) ವಿಧಿಸುವ ವಿಷಯದ ಬಗ್ಗೆ ದೇಶದಲ್ಲಿ ಚರ್ಚೆ ಶುರುವಾಗಿದ್ದು, ಇನ್ಮುಂದೆ ಯುಪಿಐ ಪಾವತಿಗಳಿಗೆ ಶುಲ್ಕ ಬೀಳಲಿದೆ ಎಂಬ ವದಂತಿ ಹಬ್ಬಿದೆ. ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ರೂ ಜನಸಾಮಾನ್ಯರ ಆತಂಕ ಕಡಿಮೆಯಾಗಿಲ್ಲ. ಈಗ ಸ್ವತಃ ಫೋನ್ ಪೇ ಸಿಇಒ(PhonePe CEO) ಸ್ಪಷ್ಟನೆ ನೀಡಿದ್ದಾರೆ.
ಯುಪಿಐ ಪಾವತಿಗಳ ಮೇಲಿನ ಶುಲ್ಕಗಳ ಕುರಿತು ನಡೆಯುತ್ತಿರುವ ಚರ್ಚೆಗೆ ಫೋನ್‌ಪೇ ಸಿಇಒ ಸಮೀರ್ ನಿಗಮ್ ಅಂತ್ಯ ಹಾಡಿದ್ದು, ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಸಾಮಾನ್ಯ ಬಳಕೆದಾರರು ಯುಪಿಐ ಮೂಲಕ ಹಣವನ್ನು ಕಳುಹಿಸಲು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಎಲ್ಲಾ ಭಾರತೀಯ ಬಳಕೆದಾರರಿಗೆ ಯುಪಿಐ ಉಚಿತವಾಗಿ ಉಳಿಯುತ್ತದೆ' ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಎಂಡಿಆರ್ ಇದ್ದರೆ ಅದು ವ್ಯಾಪಾರ ಸಂಸ್ಥೆಗಳ ವ್ಯಾಪ್ತಿಯಲ್ಲಿರುತ್ತದೆ ಎಂದು ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದೆ. ಸಣ್ಣ ಅಂಗಡಿಗಳು ಮತ್ತು ದಿನಸಿ ವ್ಯಾಪಾರಿಗಳು UPI ಪಾವತಿಗಳನ್ನು ಸ್ವೀಕರಿಸಲು ಯಾವುದೇ ಎಂಡಿಆರ್ ಪಾವತಿಸುವ ಅಗತ್ಯವಿಲ್ಲ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ UPI ಪಾವತಿಗಳಿಗೆ ಅನ್ವಯಿಸುವುದಿಲ್ಲ. ಹೊಸ ಮಸೂದೆಯು UPI ಬಳಕೆದಾರರ ಮೇಲೆ ಯಾವುದೇ ನೇರ ಶುಲ್ಕಗಳನ್ನು ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಎಂಡಿಆರ್ ಎಂದರೇನು?

ಎಂಡಿಆರ್​ ಎಂದರೆ ವ್ಯಾಪಾರಿಗಳು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಿದ್ದಕ್ಕಾಗಿ ಪಾವತಿ ಸೇವಾ ಪೂರೈಕೆದಾರರಿಗೆ ಪಾವತಿಸುವ ಶುಲ್ಕ. ಹೊಸ ನಿಯಮಗಳ ಪ್ರಕಾರ, 2,000 ರೂ.ಗಿಂತ ಹೆಚ್ಚಿನ ಕೆಲವು ವ್ಯವಹಾರ-ಸಂಬಂಧಿತ ಎಲೆಕ್ಟ್ರಾನಿಕ್ ಪಾವತಿಗಳ ಮೇಲೆ 0.25 ಪ್ರತಿಶತದಿಂದ 0.4 ಪ್ರತಿಶತದವರೆಗೆ ವಿಧಿಸುವ ಸಾಧ್ಯತೆಯಿದೆ.
ಸುಮಾರು ಒಂದು ದಶಕದಿಂದ, ಬ್ಯಾಂಕುಗಳು, ಫಿನ್‌ಟೆಕ್ ಕಂಪನಿಗಳು, NPCI ಮತ್ತು RBI ಜಂಟಿಯಾಗಿ ಸೈಬರ್ ಭದ್ರತೆ ಮತ್ತು ವಂಚನೆ ತಡೆಗಟ್ಟುವಿಕೆ ಸೇರಿದಂತೆ UPI ವ್ಯವಸ್ಥೆಯನ್ನು ನಿರ್ವಹಿಸುವ ವೆಚ್ಚವನ್ನು ಭರಿಸುತ್ತಿವೆ. ಈಗ, ಈ ವ್ಯವಸ್ಥೆಗೆ ಸುಸ್ಥಿರ ಹಣಕಾಸು ಮಾದರಿಯ ಕುರಿತು ಚರ್ಚೆ ನಡೆಯುತ್ತಿದೆ (ಏಜೆನ್ಸೀಸ್).