Abhishek Banerjee > ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಗೆ ಮಮತಾ, ಖರ್ಗೆ, ಅಖಿಲೇಶ್ ಕಿಡಿ! 
ದೇಶ

ಸರ್ಕಾರ ನಡೆಸುವವರೇ ಕೊಲೆಗಡುಕರಾಗಿದ್ದಾರೆ!... ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಗೆ ಮಮತಾ, ಖರ್ಗೆ, ಅಖಿಲೇಶ್ ಕಿಡಿ! | Abhishek Banerjee

ಕೊಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್‌ಪುರಕ್ಕೆ ಭೇಟಿ ನೀಡಿದ್ದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಮೇಲೆ ಮೊಟ್ಟೆ ಮತ್ತು ಕಲ್ಲುಗಳನ್ನು ತೂರಿದ ಘಟನೆಗೆ ಸಂಬಂಧಿಸಿದಂತೆ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶನಿವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಭಿಷೇಕ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೋವನ್ನು ರೀ ಪೋಸ್ಟ್​ ಮಾಡಿರುವ ಮಮತಾ ಬ್ಯಾನರ್ಜಿ, ಆಡಳಿತಗಾರರು ಕೊಲೆಗಡುಕರಾಗಿದ್ದಾರೆ ಮತ್ತು ಈ ಬಗ್ಗೆ ಬಿಜೆಪಿ ನಾಚಿಕೆಪಡಬೇಕು ಎಂದು ಕಿಡಿಕಾರಿದ್ದಾರೆ.
ಟಿಎಂಸಿ ನಾಯಕಿ ಸುಶ್ಮಿತಾ ದೇವ್ ಸಹ ಈ ಘಟನೆಯನ್ನು ಖಂಡಿಸಿದ್ದು, ಇದೊಂದು ಪೂರ್ವಯೋಜಿತ ಮತ್ತು ಸಂಚಿನ ದಾಳಿ ಎಂದು ಕರೆದಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಇದು ಸಾರ್ವಜನಿಕರ ಆಕ್ರೋಶ ಅಲ್ಲ, ಬದಲಿಗೆ ಟಿಎಂಸಿಯನ್ನು ಮೌನಗೊಳಿಸಲು ಬಿಜೆಪಿ ನಡೆಸಿದ ಪ್ರಯತ್ನ ಎಂದು ಹೇಳಿದ್ದಾರೆ. ಮತ್ತೊಬ್ಬ ಟಿಎಂಸಿ ನಾಯಕಿ ಸಾಗರಿಕಾ ಘೋಷ್ ಈ ದಾಳಿಯನ್ನು ಆಘಾತಕಾರಿ ಎಂದು ಬಣ್ಣಿಸಿದ್ದು, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಭಿಷೇಕ್ ಮೇಲೆ ದಾಳಿ ನಡೆದಾಗ ಪೊಲೀಸರು ಎಲ್ಲಿಯೂ ಕಾಣಿಸಲಿಲ್ಲ ಎಂದು ದೂರಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಅಖಿಲೇಶ್ ಯಾದವ್ ಖಂಡನೆ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳು ಯಾವುದೇ ರೀತಿಯ ಹಿಂಸಾಚಾರವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಎಲ್ಲಾ ವಿರೋಧ ಪಕ್ಷದ ನಾಯಕರಿಗೆ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ಪ್ರಮುಖ ವಿರೋಧ ಪಕ್ಷದ ನಾಯಕನಿಗೆ ಉದ್ದೇಶಪೂರ್ವಕವಾಗಿ ಸೂಕ್ತ ಪೊಲೀಸ್ ರಕ್ಷಣೆ ನೀಡದಿರುವುದು, ಬಿಜೆಪಿಯ ದ್ವೇಷ ಮತ್ತು ರಾಜಕೀಯ ಸೇಡಿನ ರಾಜಕಾರಣವನ್ನು ಎತ್ತಿ ತೋರಿಸುತ್ತದೆ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಪೊಲೀಸರ ವೈಫಲ್ಯವನ್ನು ಟೀಕಿಸಿದ್ದು, ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಯನ್ನು ಕೊಲೆ ಯತ್ನ ಎಂದು ಕರೆದಿದ್ದಾರೆ. ಬಂಗಾಳದಲ್ಲಿರುವ ಅರಾಜಕ ಸರ್ಕಾರವು, ಬಿಜೆಪಿ ದ್ವೇಷ ತುಂಬಿದ, ನಕಾರಾತ್ಮಕ ಮತ್ತು ಹಿಂಸಾತ್ಮಕ ರಾಜಕಾರಣವನ್ನು ಬಿಟ್ಟು ಬೇರೇನನ್ನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ.
ದಾಳಿಗೂ ನಮಗೂ ಸಂಬಂಧವಿಲ್ಲ ಎಂದು ಬಿಜೆಪಿ ಸ್ಪಷ್ಟನೆ
ಮತ್ತೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಘಟನೆಯ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಈ ದಾಳಿಗೂ ತಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದಾಗ ಅವರ ಮೇಲೂ ಇದೇ ರೀತಿಯ ದಾಳಿ ನಡೆದಿತ್ತು ಎಂಬುದನ್ನು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.
ಟಿಎಂಸಿ ನಮ್ಮ ಮೇಲೆ ಮಾಡಿದ ದೌರ್ಜನ್ಯಗಳನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಯಿತು ಮತ್ತು ಪುರುಷರ ಮೇಲೆ ಹಲ್ಲೆ ನಡೆಸಲಾಯಿತು. ಟಿಎಂಸಿ ಏನು ಮಾಡಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಹೀಗಿದ್ದೂ, ನಮ್ಮ ಸರ್ಕಾರ ಇರುವುದರಿಂದಲೇ ತೃಣಮೂಲ ನಾಯಕರು ಮತ್ತು ಸಂಸದರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು.

ಘಟನೆಯ ಹಿನ್ನಲೆ!

ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ಸೋನಾರ್‌ಪುರಕ್ಕೆ ತೆರಳಿದ್ದಾಗ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಅಪರಿಚಿತ ವ್ಯಕ್ತಿಗಳು ಕಲ್ಲು ಮತ್ತು ಮೊಟ್ಟೆಗಳನ್ನು ತೂರಿದ್ದರು. ಈ ದಾಳಿಯು ತನ್ನನ್ನು ಕೊಲ್ಲುವ ಪ್ರಯತ್ನವಾಗಿದೆ ಎಂದು ಕರೆದಿರುವ ಅಭಿಷೇಕ್, ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ(ಏಜೆನ್ಸೀಸ್​​).