ಕಾಂಗ್ರೆಸ್ ಸಂಸದ ಮಾಣಿಕ್ಯಂ ಟ್ಯಾಗೋರ್
ನವದೆಹಲಿ: ಆರ್‌ಎಸ್‌ಎಸ್‌ನ ಸಾಂಸ್ಥಿಕ ರಚನೆಗಳನ್ನು ಶ್ಲಾಘಿಸಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು(RSS) ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಅಲ್-ಖೈದಾಗೆ ಹೋಲಿಸಿ ಕಾಂಗ್ರೆಸ್ ಸಂಸದ ಮಾಣಿಕ್ಯಂ ಟ್ಯಾಗೋರ್ ಭಾನುವಾರ(ಡಿ. 28) ವಿವಾದ ಸೃಷ್ಟಿಸಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಐಎಎನ್ಎಸ್ ಜೊತೆಗೆ ಮಾತನಾಡಿರುವ ಅವರು, ಹಿಂದುತ್ವದ ಸೈದ್ಧಾಂತಿಕ ಮೂಲವಾದ ಆರ್‌ಎಸ್‌ಎಸ್‌ನಿಂದ ಕಲಿಯಲು ಏನೂ ಇಲ್ಲ. ದ್ವೇಷವನ್ನು ಹರಡುವ ಮತ್ತು ಹುಟ್ಟು ಹಾಕುವ ಸಂಘಟನೆ. ಆರ್ಎಸ್ಎಸ್ ಒಂದು ರೀತಿ ಅಲ್-ಖೈದಾ ಇದ್ದಂತೆ. ಅಲ್-ಖೈದಾ ಕೂಡ ದ್ವೇಷ ಮತ್ತು ಭಯೋತ್ಪಾದನೆಯನ್ನು ಹರಡುತ್ತದೆ ಎಂದು ಹೇಳಿದ್ದಾರೆ.
ಮಾಣಿಕ್ಯಂ ಟಾಗ್ಯೋರ್ ಮಾತಿಗೆ ಕಿಡಿಕಾರಿರುವ ಆರ್ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್, ಕೆಲವು ನಾಯಕರು ಆರ್‌ಎಸ್‌ಎಸ್‌ನ ಶಿಸ್ತು, ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯಕ್ಕಾಗಿ ಹೊಗಳಿದ್ದಾರೆ. ಇದು ಕಾಂಗ್ರೆಸ್ ಪಕ್ಷದೊಳಗೆ ಗೊಂದಲಕ್ಕೆ ಕಾರಣವಾಗಿದೆ. ಬಹುಶಃ ಪಕ್ಷ ವಿಭಜನೆಯಾಗಬಹುದು. ಅಲ್ ಖೈದಾಗೆ ಹೋಲಿಸುವ ಈ ಮನಸ್ಥಿತಿ ಕಾಂಗ್ರೆಸ್ ನಾಯಕತ್ವ ಮತ್ತು ಅದರ ಸದಸ್ಯರ ಬೌದ್ಧಿಕ ಮತ್ತು ಮಾನಸಿಕ ದಿವಾಳಿತನವನ್ನು ಪ್ರತಿಬಿಂಬಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).