Yogi Adityanath | ಲಕ್ನೋದಲ್ಲಿ ನಡೆದ ಗೀತಾ ಪ್ರೇರಣಾ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಲಕ್ನೋ: ರಾಷ್ಟ್ರೀಯ ಸ್ವಯಂಸೇವಕ ಸಂಘ ಯಾವುದೇ ರೀತಿಯ ವಿದೇಶಿ ಅಥವಾ ಸಾಂಸ್ಥಿಕ ನಿಧಿಯನ್ನು ಪಡೆಯದೆ, ಕೇವಲ ಸಾಮಾಜಿಕ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲಕ್ನೋದಲ್ಲಿ ನಡೆದ ಗೀತಾ ಪ್ರೇರಣಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉಪಸ್ಥಿತಿಯಲ್ಲಿ ಮಾತನಾಡಿದ ಸಿಎಂ ಯೋಗಿ, ನಾವು ಸ್ವಯಂಸೇವಕರಾಗಿ ಆಗಿ ಕೆಲಸ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತೇವೆ, ಅವರು ಹಣಕಾಸಿನ ಮೂಲದ ಬಗ್ಗೆ ಕೇಳುತ್ತಾರೆ. ಆದರೆ ಸಂಘಕ್ಕೆ ಯಾವುದೇ ಹಣಕಾಸಿನ ಮೂಲಗಳು ಇಲ್ಲ, ಯಾವುದೇ OPEC ದೇಶ ಅಥವಾ ಅಂತರರಾಷ್ಟ್ರೀಯ ಚರ್ಚ್ ಅದಕ್ಕೆ ಹಣಕಾಸು ಒದಗಿಸುವುದಿಲ್ಲ. ಆರ್‌ಎಸ್‌ಎಸ್ ಸಮಾಜದ ಬಲದ ಮೇಲೆ ನಿಂತಿದ್ದು, ಸೇವಾ ಮನೋಭಾವದಿಂದ ಕೆಲಸ ಮಾಡುತ್ತದೆ ಎಂದರು.
ಮುಂದುವರೆದು ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಸಂಕಷ್ಟದಲ್ಲಿರುವ, ನೋವಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ, ಜಾತಿ, ಧರ್ಮವನ್ನು ಲೆಕ್ಕಿಸದೆ ಸೇವೆ ಸಲ್ಲಿಸಿದೆ, ದೇಶವು ಯಾವಾಗಲೂ ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚಿದ್ದು, ಭಾರತದ ಆಧ್ಯಾತ್ಮಿಕ ನೀತಿಗಳು ಯಾವಾಗಲೂ ಜನರನ್ನು ಜವಾಬ್ದಾರಿಯಿಂದ ವರ್ತಿಸಲು ಪ್ರೇರೇಪಿಸುತ್ತವೆ ಎಂದು ಹೇಳಿದರು.
ನಮ್ಮಲ್ಲಿಗೆ ಆಶ್ರಯ ಕೋರಿ ಬಂದವರನ್ನು ನಾವು ಯಾವಾಗಲೂ ಸ್ವಾಗತಿಸುತ್ತೇವೆ. 'ಜಿಯೋ ಔರ್ ಜೀನೇ ದೋ' (ಬದುಕಿ ಬದುಕಲು ಬಿಡಿ) ಮತ್ತು 'ವಸುಧೈವ ಕುಟುಂಬಕಂ' (ಜಗತ್ತು ಒಂದೇ ಕುಟುಂಬ) ಎಂಬುದು ಭಾರತವು ಜಗತ್ತಿಗೆ ನೀಡಿದ ಸಂದೇಶವಾಗಿದ್ದು, ಒಳ್ಳೆಯದನ್ನು ಮಾಡಿ ಪುಣ್ಯ ಗಳಿಸಿ, ತಪ್ಪು ಮಾಡಿ ಪಾಪ ಗಳಿಸಿ. ಪ್ರತಿಯೊಂದು ಧರ್ಮವು ತನ್ನ ಅನುಯಾಯಿಗಳಿಗೆ ಇದೇ ನೀತಿಯನ್ನು ಕಲಿಸುತ್ತದೆ ಎಂದರು.
ರಾಷ್ಟ್ರ ಮೊದಲು ಎನ್ನುವುದನ್ನು ಆರ್‌ಎಸ್‌ಎಸ್ ಕಲಿಸುತ್ತದೆ, ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುವ ಯಾರಿಗಾದರು ನಾವು ಬೆಂಬಲ ನೀಡಲು ಸಿದ್ಧ, ಸೇವೆಯನ್ನು ವ್ಯವಹಾರ ಮತ್ತು ಪ್ರಭಾವದ ಸಾಧನವನ್ನಾಗಿ ಪರಿವರ್ತಿಸಿಕೊಂಡಿರುವವರು ಒತ್ತಡ ಮತ್ತು ದುರಾಸೆಯ ಮೂಲಕ ಭಾರತದ ಜನಸಂಖ್ಯಾ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಆದಿತ್ಯನಾಥ್ ಆರೋಪಿಸಿದ್ದಾರೆ.
ಸವಾಲಿನ ಸಮಯದಲ್ಲಿ ಭಗವದ್ಗೀತೆ ಮಾರ್ಗದರ್ಶನ ನೀಡುತ್ತದೆ, ಗೀತೆಯು 140 ಕೋಟಿ ಭಾರತೀಯರಿಗೆ ದೈವಿಕ ಮಂತ್ರವಾಗಿದೆ, ಅದು ಜೀವನ ವಿಧಾನ ಮತ್ತು ಯಶಸ್ಸಿನ ಹಾದಿಯನ್ನು ನೀಡುತ್ತದೆ ಎಂದು ಹೇಳಿದರು. ಭಾರತದ ನಾಗರಿಕತೆಯ ದೃಷ್ಟಿಕೋನದಲ್ಲಿ, ಯುದ್ಧಭೂಮಿಯನ್ನು ಸಹ ಧರ್ಮ ಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ ಮತ್ತು ಧರ್ಮ ಮತ್ತು ಕರ್ತವ್ಯ ಎಲ್ಲೆಲ್ಲಿ ಮೇಲುಗೈ ಸಾಧಿಸುತ್ತದೋ ಅಲ್ಲಿ ಗೆಲುವು ಖಚಿತ ಎಂದರು(ಏಜೆನ್ಸೀಸ್).