Mohan Bhagwat | ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ 
ದೇಶ

ಪಾಕಿಸ್ತಾನದ ಜೊತೆ ಮಾತುಕತೆ; ಹೊಸಬಾಳೆ ಹೇಳಿಕೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಹತ್ವದ ಸ್ಪಷ್ಟನೆ! | Mohan Bhagwat

ತಿರುವನಂತಪುರಂ: ಭಾರತದ ವಿದೇಶಾಂಗ ನೀತಿಯ ವಿಷಯದಲ್ಲಿ ಆರ್‌ಎಸ್‌ಎಸ್ ಯಾವುದೇ ಸ್ವತಂತ್ರ ನಿಲುವನ್ನು ಹೊಂದಿಲ್ಲ. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ನಿಲುವನ್ನೇ ಸಂಘವು ಬೆಂಬಲಿಸುತ್ತದೆ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಸ್ಪಷ್ಟಪಡಿಸಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಣೆಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಜೊತೆಗಿನ ಸಂಬಂಧದ ಕುರಿತು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡು ಮಹತ್ವದ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ದತ್ತಾತ್ರೇಯ ಹೊಸಬಾಳೆ ಅವರು ಪಾಕಿಸ್ತಾನದೊಂದಿಗೆ ಮಾತುಕತೆಯ ಬಾಗಿಲು ಮುಚ್ಚಬಾರದು ಎಂದು ಹೇಳಿಕೆ ನೀಡಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಮಾತನಾಡಿದ ಭಾಗವತ್, ಹೊಸಬಾಳೆ ಅವರ ಹೇಳಿಕೆಗಳು ಪಾಕಿಸ್ತಾನದ ಸರ್ಕಾರ ಅಥವಾ ಅದರ ನೀತಿಗಳನ್ನು ಉದ್ದೇಶಿಸಿರಲಿಲ್ಲ, ಬದಲಿಗೆ ಅಲ್ಲಿನ ಸಾಮಾನ್ಯ ಜನರನ್ನು ಉದ್ದೇಶಿಸಿ ಹೇಳಿದ್ದಾಗಿತ್ತು ಎಂದರು.
ಪಾಕಿಸ್ತಾನದಲ್ಲಿ ದೇಶ ವಿಭಜನೆಯನ್ನು ವಿರೋಧಿಸುವ ಮತ್ತು ಆರ್‌ಎಸ್‌ಎಸ್‌ನ ಕೆಲಸಗಳನ್ನು ಪ್ರಶಂಸಿಸುವ ಒಂದು ದೊಡ್ಡ ವರ್ಗವಿದೆ. ಅಲ್ಲಿನ ಅನೇಕ ಪತ್ರಕರ್ತರು ಕೂಡ ಆರ್‌ಎಸ್‌ಎಸ್ ಕಾರ್ಯವೈಖರಿಯನ್ನು ಹೊಗಳುತ್ತಾರೆ. ದ್ವಿರಾಷ್ಟ್ರ ಸಿದ್ಧಾಂತ ತಪ್ಪು, ಒಟ್ಟಿಗೆ ಬಾಳುವುದೇ ಲೇಸು ಎಂದು ನಂಬುವ ಜನರ ಅಂತರ್ಗತ ಭಾವನೆ ಪಾಕಿಸ್ತಾನದಲ್ಲಿದೆ ಎಂದು ಭಾಗವತ್​ ವಿಶ್ಲೇಷಿಸಿದ್ದಾರೆ.

ನಾವೇನು ಹಿಟ್ಲರ್ ಅಲ್ಲ: ಮೋಹನ್ ಭಾಗವತ್

ಭವಿಷ್ಯದ ಭಾರತ-ಪಾಕ್ ಸಂಬಂಧದ ಕುರಿತು ಮಾತನಾಡಿದ ಭಾಗವತ್, ಮುಂದಿನ ದಿನಗಳಲ್ಲಿ ಭಾರತವು ಪಾಕಿಸ್ತಾನವನ್ನು ಸಂಪೂರ್ಣವಾಗಿ ಮಣಿಸಿದರೂ ಸಹ, ಅಲ್ಲಿನ ಸಾಮಾನ್ಯ ಜನರನ್ನು ಒಂಟಿ ಮಾಡಬಾರದು. ಅವರನ್ನು ಭಾರತದ ಮುಖ್ಯವಾಹಿನಿಗೆ ತರಬೇಕು ಅಥವಾ ಅವರು ತಮ್ಮ ದೇಶದಲ್ಲೇ ಶಾಂತಿಯಿಂದ ಬದುಕುವಂತಾಗಬೇಕು. ಅದಕ್ಕಾಗಿ ಮಾತುಕತೆಯ ಬಾಗಿಲುಗಳನ್ನು ಸದಾ ಮುಕ್ತವಾಗಿಡಬೇಕು. ನಾವೇನು ಹಿಟ್ಲರ್ ಅಲ್ಲ, ಅದು ನಮ್ಮ ಸ್ವಭಾವವೂ ಅಲ್ಲ, ದಾರಿಯೂ ಅಲ್ಲ. ನಾವು ಅನ್ಯಾಯ ಮತ್ತು ದೌರ್ಜನ್ಯವನ್ನು ನಾಶಪಡಿಸಬೇಕು ಮತ್ತು ಅಲ್ಲಿರುವ ಒಳ್ಳೆಯದನ್ನು ಉಳಿಸಿಕೊಳ್ಳಬೇಕು ಎಂದರು.

ದತ್ತಾತ್ರೇಯ ಹೊಸಬಾಳೆ ಹೇಳಿದ್ದೇನು..?

ಇದಕ್ಕೂ ಮುನ್ನ ಮೇ ತಿಂಗಳಲ್ಲಿ ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು, ದೇಶದ ಭದ್ರತೆ ಮತ್ತು ಸ್ವಾಭಿಮಾನವನ್ನು ಕಾಪಾಡುವುದು ಸರ್ಕಾರದ ಕರ್ತವ್ಯ. ಆದರೆ ಅದೇ ಸಮಯದಲ್ಲಿ ನಾವು ಮಾತುಕತೆಯ ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚಬಾರದು. ನೆರೆಹೊರೆಯವರೊಂದಿಗೆ ಸಂವಹನ ನಡೆಸಲು ಸದಾ ಸಿದ್ಧರಿರಬೇಕು ಎಂದು ಭಯೋತ್ಪಾದನೆಯ ಆತಂಕಗಳ ನಡುವೆಯೂ ಪಾಕಿಸ್ತಾನದೊಂದಿಗೆ ಮಾತುಕತೆಯ ಅಗತ್ಯತೆಯನ್ನು ಪ್ರತಿಪಾದಿಸಿದ್ದರು(ಏಜೆನ್ಸೀಸ್​).