Auto Fare (ಚಿತ್ರ Instagram)
ಚಂಡೀಗಢ: ಗುರುಗ್ರಾಮದಲ್ಲಿ ಸುರಿದ ಭಾರಿ ಮಳೆ ಮತ್ತು ವಿಪರೀತ ಟ್ರಾಫಿಕ್ ದಟ್ಟಣೆಯ ನಡುವೆ ಕೇವಲ 7 ಕಿಲೋಮೀಟರ್‌ಗಳ ಸಣ್ಣ ಆಟೋ ಪ್ರಯಾಣಕ್ಕೆ ಬರೋಬ್ಬರಿ 800 ರೂ. ದರ (
ತೆರಬೇಕಾಗಿ ಬಂದ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಮಳೆ ಬಂದಾಗ ಆಟೋ ಮತ್ತು ಕ್ಯಾಬ್ ಚಾಲಕರು ನಿಗದಿಪಡಿಸುವ ಭಾರಿ ಸರ್ಜ್ ಪ್ರೈಸಿಂಗ್ ಅಥವಾ ಕೃತಕ ಅಭಾವದ ಲಾಭ ಪಡೆಯುವ ದಂಧೆಯ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕ್ಯಾಮೆರಾ ಮುಂದೆ ಬೇಸರ ಹೊರಹಾಕಿದ ಯುವತಿ
ಆಸ್ಥಾ ಗೋಯಲ್ ಎಂಬ ಮಹಿಳೆ ತಮಗಾದ ಅಸಹನೀಯ ಅನುಭವವನ್ನು ಇನ್‌ಸ್ಟಾಗ್ರಾಮ್ ವೀಡಿಯೋ ಮೂಲಕ ಹಂಚಿಕೊಂಡಿದ್ದಾರೆ. 7 ಕಿಲೋಮೀಟರ್‌ಗೆ 800 ರೂ.??? ಎಂಬ ಶೀರ್ಷಿಕೆ ನೀಡಿದ್ದು, ಭಾರಿ ಮಳೆಯಿಂದಾಗಿ ಗುರುಗ್ರಾಮದ ರಸ್ತೆ ಸಂಚಾರ ಹಾಗೂ ಸಾರಿಗೆ ವ್ಯವಸ್ಥೆ ಎಷ್ಟು ಹದಗೆಡುತ್ತದೆ ಎಂಬುದನ್ನು ಅದರಲ್ಲಿ ವಿವರಿಸಿದ್ದಾರೆ.
ತಮ್ಮ ವೀಡಿಯೋದಲ್ಲಿ ಮಾತನಾಡಿದ ಆಸ್ಥಾ, "ಪ್ರತಿಯೊಬ್ಬರಿಗೂ ಗುರುಗ್ರಾಮದಲ್ಲಿ ಮಳೆ ಬಂದರೆ ರಸ್ತೆಗಳ ಸ್ಥಿತಿ ಏನಾಗುತ್ತದೆ ಎಂಬುದು ಗೊತ್ತು. ಆದರೆ 7 ಕಿ.ಮೀ ಪ್ರಯಾಣಕ್ಕೆ ಆಟೋ ಚಾಲಕ 800 ರೂ. ಕೇಳಿದಾಗ ನನಗೆ ಆತಂಕವಾಯಿತು. ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತು ಅಲ್ಲಿ ಮಳೆ ಬಂದಾಗ ದರ ಏರಿಕೆಯಾಗುವ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ, ಗುರುಗ್ರಾಮ್ ಈ ಸ್ಥಿತಿ ನಿಜಕ್ಕೂ ನುಂಗಲಾರದ ಬಿಸಿತುಪ್ಪ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶ
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಹಲವು ಸಾಮಾಜಿಕ ಬಳಕೆದಾರರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರ ನಾವು ನಿನ್ನೆಯಷ್ಟೇ ಕೇವಲ 3 ರಿಂದ 4 ಕಿಲೋಮೀಟರ್‌ಗಳ ಸಣ್ಣ ಕ್ಯಾಬ್ ಪ್ರಯಾಣಕ್ಕೆ 500 ಪಾವತಿಸಬೇಕಾಯಿತು ಎಂದು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬ ಬಳಕೆದಾರ ಆಟೋ ಚಾಲಕರ ಈ ತರಹದ ಅತಿಯಾದ ಬೇಡಿಕೆಗಳಿಗೆ ತಲೆಬಾಗುವ ಬದಲು ಹುಡಾ ಸಿಟಿ ಮೆಟ್ರೋ ಸ್ಟೇಷನ್‌ನಿಂದ ಸುಭಾಷ್ ಚೌಕ್‌ವರೆಗೆ ನಡೆದುಕೊಂಡು ಹೋಗುವುದೇ ಮೇಲು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು "ಗುರುಗ್ರಾಮ ಮತ್ತು ದೆಹಲಿ-ಎನ್‌ಸಿಆರ್ (Delhi-NCR) ಭಾಗಗಳಲ್ಲಿ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಬೇರೆ ದಾರಿಯಿಲ್ಲದಿರುವುದನ್ನು ಬಂಡವಾಳ ಮಾಡಿಕೊಳ್ಳುವ ಆಟೋ ಹಾಗೂ ಕ್ಯಾಬ್ ಚಾಲಕರು ಅತಿಯಾಗಿ ಹಣ ವಸೂಲಿ ಮಾಡುತ್ತಾರೆ. ಇಲ್ಲಿ ನೆಮ್ಮದಿಯಿಂದ ಇರಬೇಕೆಂದರೆ ಸ್ವಂತ ವಾಹನ ಹೊಂದುವುದೇ ಏಕೈಕ ಸೂಕ್ತ ಮಾರ್ಗ" ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ (ಏಜೆನ್ಸೀಸ್).