ಪಂಜಾಬ್ ರೈತ ಬಲ್ಕಾರ್ ಸಿಂಗ್
- ಪಂಜಾಬ್ನ ಓರ್ವ ಸಾಮಾನ್ಯ ರೈತನಿಗೆ ಅದೃಷ್ಟ ಲಕ್ಷ್ಮೀ ಒಲಿದು ಬಂದಿದ್ದಾಳೆ
- ಕೇವಲ 7 ರೂಪಾಯಿಗೆ ಖರೀದಿಸಿದ ಲಾಟರಿ ಟಿಕೆಟ್ನಿಂದ ರೈತನ ಜೀವನವೇ ಬದಲಾಗಿದೆ
- ಸೋಧಿಯಾನ್ ಗ್ರಾಮದ ಬಲ್ಕಾರ್ ಸಿಂಗ್ 1 ಕೋಟಿ ರೂ.ಗಳ ಬೃಹತ್ ಜಾಕ್‌ಪಾಟ್ ಹೊಡೆದಿದ್ದಾರೆ
Farmer : ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಪಂಜಾಬ್ನ ಓರ್ವ ಸಾಮಾನ್ಯ ರೈತನಿಗೆ ಅದೃಷ್ಟ ಲಕ್ಷ್ಮೀ ಒಲಿದು ಬಂದಿದ್ದಾಳೆ. ಹೌದು, ಕೇವಲ 7 ರೂಪಾಯಿಗೆ ಖರೀದಿಸಿದ ಲಾಟರಿ ಟಿಕೆಟ್ನಿಂದ ರೈತನ ಜೀವನವೇ ಬದಲಾಗಿದೆ. ಫತೇಘರ್ ಸಾಹಿಬ್ ಜಿಲ್ಲೆಯ ಮಜ್ರಿ ಸೋಧಿಯಾನ್ ಗ್ರಾಮದ ಬಲ್ಕಾರ್ ಸಿಂಗ್ ಎಂಬುವರು 1 ಕೋಟಿ ರೂ.ಗಳ ಬೃಹತ್ ಜಾಕ್‌ಪಾಟ್ ಹೊಡೆದಿದ್ದಾರೆ. ಬಲ್ಕಾರ್ ಅವರು ಕಳೆದ ಹತ್ತು ವರ್ಷಗಳಿಂದ ನಿಯಮಿತವಾಗಿ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು. ಅಂತಿಮವಾಗಿ ಈ ಬಾರಿ ಅದೃಷ್ಟ, ಬಲ್ಕಾರ್ ಅವರನ್ನು ಹುಡುಕಿಕೊಂಡು ಬಂದಿದೆ.
ಬಲ್ಕಾರ್ ಸಿಂಗ್ ವೃತ್ತಿಯಲ್ಲಿ ರೈತ. ಅವರು ಕೃಷಿಯ ಮೂಲಕ ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ, ಸಿರ್ಹಿಂದ್‌ನಲ್ಲಿರುವ 'ಬಿಟ್ಟು ಲಾಟರಿ ಸ್ಟಾಲ್' ನಿಂದ ನಿಯಮಿತವಾಗಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಈ ಹಿಂದೆ, ಬಲ್ಕಾರ್ ಅವರು 90 ಸಾವಿರ ರೂ.ವರೆಗಿನ ಸಣ್ಣ ಬಹುಮಾನಗಳನ್ನು ಪಡೆದಿದ್ದಾರೆ. ಆದರೆ, ಈ ಬಾರಿ 1 ಕೋಟಿ ರೂ.ಗಳ ಬಹುಮಾನ ಬಲ್ಕಾರ್ ಪಾಲಾಗಿದೆ. ಇಷ್ಟೊಂದು ಬಹುಮಾನ ಬರುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ ಎನ್ನುತ್ತಾರೆ ಬಲ್ಕಾರ್. ಡಿಸೆಂಬರ್ 24 ರಂದು ಡ್ರಾ ಮಾಡಲಾದ ಲಾಟರಿಯ ಫಲಿತಾಂಶವು ಕೆಲವು ದಿನಗಳ ನಂತರ ಬಲ್ಕಾರ್ ಅವರಿಗೆ ತಿಳಿದಿದೆ.
1 ಕೋಟಿ ರೂಪಾಯಿ ಗೆದ್ದ ಸುದ್ದಿ ತಿಳಿದಾಗ ಬಲ್ಕಾರ್ ಅವರ ಮಜ್ರಿ ಸೋಧಿಯಾನ್ ಗ್ರಾಮದಲ್ಲಿ ಸಂಭ್ರಮಾಚರಣೆ ಭುಗಿಲೆದ್ದಿತು. ಸ್ಥಳೀಯರು ಅವರನ್ನು ಹೂಮಾಲೆಗಳಿಂದ ಸನ್ಮಾನಿಸಿ, ಡ್ರಮ್ಸ್‌ನೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ದರು. ಬಲ್ಕಾರ್ ಸಿಂಗ್ ಕೂಡ ತುಂಬಾ ಸಂತೋಷಪಟ್ಟರು. ಎಲ್ಲಾ ಗ್ರಾಮಸ್ಥರಿಗೆ ಸಿಹಿತಿಂಡಿಗಳನ್ನು ವಿತರಿಸುವ ಮೂಲಕ ಬಲ್ಕಾರ್ ತಮ್ಮ ಸಂತೋಷ ಹಂಚಿಕೊಂಡರು. ಮಾತನಾಡುವಾಗ ಭಾವುಕರಾದ ಬಲ್ಕಾರ್, ಈ ಯಶಸ್ಸಿಗೆ ದೇವರ ಆಶೀರ್ವಾದವೇ ಕಾರಣ ಎಂದು ಹೇಳಿದರು.
ಈ ಬೃಹತ್ ಮೊತ್ತವನ್ನು ಹೇಗೆ ಬಳಸುತ್ತೀರಿ ಎಂದು ಕೇಳಿದಾಗ, ಬಲ್ಕಾರ್ ಸಿಂಗ್ ತಮ್ಮ ಔದಾರ್ಯ ವ್ಯಕ್ತಪಡಿಸಿದರು. ತಮಗೆ ಬಂದ ಬಹುಮಾನದ ಹಣದಲ್ಲಿ ಶೇ. 10 ರಷ್ಟು (10 ಲಕ್ಷ) ಹಣವನ್ನು ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಮೀಸಲಿಡುವುದಾಗಿ ಘೋಷಿಸಿದರು. ಉಳಿದ ಮೊತ್ತವನ್ನು ತಮ್ಮ ಕೃಷಿ ಕೆಲಸವನ್ನು ಅಭಿವೃದ್ಧಿಪಡಿಸಲು ಮತ್ತು ಕುಟುಂಬದ ಅಗತ್ಯಗಳನ್ನು ಪೂರೈಸಲು ಬಳಸುವುದಾಗಿ ಹೇಳಿದರು. ಕಷ್ಟಪಟ್ಟು ದುಡಿಯುವ ರೈತನಿಗೆ ಇಂತಹ ಅದೃಷ್ಟ ಸಿಕ್ಕಿದ್ದಕ್ಕೆ ಎಲ್ಲರೂ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಸಿರ್ಹಿಂದ್‌ನಲ್ಲಿ 45 ವರ್ಷಗಳಿಂದ ಲಾಟರಿ ವ್ಯವಹಾರ ನಡೆಸುತ್ತಿರುವ ಮುಖೇಶ್ ಕುಮಾರ್ ಬಿಟ್ಟು ಕೂಡ ಈ ಗೆಲುವಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ತಮ್ಮ ಸ್ಟಾಲ್‌ಗೆ ಇದುವರೆಗೆ 10 ಲಕ್ಷ ರೂ.ಗಳವರೆಗಿನ ಬಹುಮಾನಗಳು ಬಂದಿವೆ ಆದರೆ, 1 ಕೋಟಿ ರೂ.ಗಳ ಬೃಹತ್ ಬಹುಮಾನ ಬಂದಿರುವುದು ಇದೇ ಮೊದಲು ಎಂದರು. ಫತೇಘರ್ ಸಾಹಿಬ್‌ನಲ್ಲಿ ನಡೆದ ಶಾಹಿದಿ ಸಮಾಗಮ್ ಸೇವೆಯಲ್ಲಿ ತಾವು ನಿರತರಾಗಿದ್ದರಿಂದ, ಫಲಿತಾಂಶವನ್ನು ತಕ್ಷಣವೇ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಬಲ್ಕಾರ್ ಸಿಂಗ್‌ಗೆ ಮಾಹಿತಿ ನೀಡಲು ತಡವಾಯಿತು ಎಂದು ವಿವರಿಸಿದರು, (ಏಜೆನ್ಸೀಸ್).