ಟ್ವಿಟರ್​ನಲ್ಲಿ ವೈರಲ್​ ಆದ ಪೋಸ್ಟ್ 
ದೇಶ

ಒಂದನೇ ತರಗತಿ ಪುಸ್ತಕಕ್ಕೆ 4,000 ರೂ.! ಶಾಲೆಯ ಫೀಸ್​ ನೋಡಿ ಬೆಚ್ಚಿಬಿದ್ದ ಪೋಷಕರು; ಹಗಲು ಲೂಟಿ ಎಂದ ನೆಟ್ಟಿಗರು | School Fees

ಪ್ರಮುಖ ಮುಖ್ಯಾಂಶಗಳು

  • ಮೀತಿ ಮೀರಿದ ಖಾಸಗಿ ಶಾಲೆಗಳ ಉಪಟಳ
  • ಒಂದನೇ ತರಗತಿ ಮಗುವಿನ ಪುಸ್ತಕಕ್ಕೆ 4,000 ರೂಪಾಯಿ ಫೀಸ್​!
  • ಬೆಂಗಳುರೂನಿನಲ್ಲಿನ ಖಾಸಗಿ ಶಾಲೆಗಳ ಫೀಸ್​ಗಳನ್ನು ಕೇಳಿದರೆ ತಲೆತಿರುಗಿ ಬೀಳುವುದು ಗ್ಯಾರಂಟಿ
ಅಹಮದಾಬಾದ್: ಇಗೀನ ಕಾಲದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದರೆ ಲಕ್ಷಾಂತರ ರೂಪಾಯಿ ಖರ್ಚಾ(School Fees)ಗುತ್ತದೆ ಎಂಬ ಮಾತನ್ನು ನೀವು ಕೇಳಿರುತ್ತಿರಿ. ಆದರೆ, ಇತ್ತೀಚೆಗೆ ಗುಜರಾತ್‌ನ ಅಹಮದಾಬಾದ್‌ನ ಪೋಷಕರೊಬ್ಬರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿರುವ ವಿಷಯ ಈಗ ಇಡೀ ದೇಶದ ಪೋಷಕರ ನಿದ್ದೆಗೆಡಿಸಿದೆ ಎಂದರೆ ತಪ್ಪಾಗದು.

ಏನಿದು ಘಟನೆ?

ತಮ್ಮ ಮಗಳು ಈ ಬಾರಿ ಒಂದನೇ ತರಗತಿಗೆ ಕಾಲಿಡುತ್ತಿದ್ದಾಳೆ. ಆಕೆಯ ಪುಸ್ತಕಗಳು ಮತ್ತು ನೋಟ್‌ಬುಕ್‌ಗಳಿಗಾಗಿ ಶಾಲೆಯಲ್ಲೇ ಬರೋಬ್ಬರಿ 4,000 ರೂಪಾಯಿ ಪಾವತಿಸಬೇಕಾಯಿತು ಎಂದು ಪೋಷಕರು ನೋವು ತೋಡಿಕೊಂಡಿದ್ದಾರೆ.
ಇದೇ ಪುಸ್ತಕಗಳನ್ನು ನಾವು ಮಾರುಕಟ್ಟೆಯಲ್ಲಿ ರಿಯಾಯಿತಿ ದರದಲ್ಲಿ ಸುಲಭವಾಗಿ ಖರೀದಿಸಬಹುದು. ಆದರೆ ಶಾಲೆಗಳು ತಮ್ಮಲ್ಲೇ ಕೊಳ್ಳಬೇಕು ಎಂದು ಒತ್ತಾಯಿಸುತ್ತಿವೆ. ಇದರ ಜತೆಗೆ ಸೀನಿಯರ್ ಕೆಜಿಗಿಂತ ಒಂದನೇ ತರಗತಿಗೆ ಫೀಸ್ ಬರೋಬ್ಬರಿ ಶೇ. 35ರಷ್ಟು ಏರಿಕೆಯಾಗಿದೆ! ಎಂದು ಅವರು ಬರೆದುಕೊಂಡಿದ್ದಾರೆ.

ಹಗಲು ಲೂಟಿ ಎಂದ ನೆಟ್ಟಿಗರು!

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ದೇಶದ ಮೂಲೆ ಮೂಲೆಯ ಪೋಷಕರು ತಮ್ಮ ಅಳಲನ್ನು ತೋಡಿಕೊಳ್ಳಲು ಶುರುಮಾಡಿದ್ದಾರೆ. ಇದು ಶಿಕ್ಷಣವಲ್ಲ, ವ್ಯವಹಾರ ಎಂದು ಒಬ್ಬರು ಕಿಡಿಕಾರಿದರೆ, ಮತ್ತೊಬ್ಬರು 80 ರೂಪಾಯಿ ಬೆಲೆಯ ಪುಸ್ತಕವನ್ನು ಪ್ರೈವೇಟ್ ಪಬ್ಲಿಷರ್ಸ್ ಲೇಬಲ್ ಹಚ್ಚಿ 500 ರೂಪಾಯಿಗೆ ಮಾರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೆಟ್ರೋ ಸಿಟಿಗಳ ಪರಿಸ್ಥಿತಿ ಇನ್ನೂ ಭೀಕರ!

ನೆಟ್ಟಿಗರು ಹಂಚಿಕೊಂಡಿರುವ ಫೀಸ್ ಸ್ಟ್ರಕ್ಚರ್ ನೋಡಿದರೆ ಸಾಮಾನ್ಯ ಮನುಷ್ಯನಿಗೆ ತಲೆ ತಿರುಗುವುದು ಗ್ಯಾರಂಟಿಯಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಐಸಿಎಸ್ಇ ಶಾಲೆಯೊಂದರಲ್ಲಿ ಯುಕೆಜಿ ಅಡ್ಮಿಷನ್‌ಗೆ ಬರೋಬ್ಬರಿ 1,62,000 ಕೇಳುತ್ತಿದ್ದಾರಂತೆ. ಗುರುಗ್ರಾಮ್​ನ ಶಾಲೆಗಳಲ್ಲಿ ತಿಂಗಳಿಗೆ 15,000 ದಿಂದ 20,000 ನ್ನು ಟ್ಯೂಷನ್ ಫೀಸ್ ರೀತಿಯಲ್ಲಿ ಪಾವತಿಸಬೇಕಂತೆ. ಉಳಿದಂತೆ ಅಡ್ಮಿಷನ್, ಸೆಕ್ಯೂರಿಟಿ ಡೆಪಾಸಿಟ್ ಎಲ್ಲ ಸೇರಿದರೆ ವರ್ಷಕ್ಕೆ ಮಗುವಿಗೆ 3 ರಿಂದ 4 ಲಕ್ಷ ರೂಪಾಯಿ ಖರ್ಚಾಗುತ್ತಿದೆ ಎಂದು ಪಾಲಕರೊಬ್ಬರು ಹೇಳಿದ್ದಾರೆ. ಹೈದರಾಬಾದ್​ನ ಒಂದು ಶಾಲೆಯೊಂದರ ಒಂದನೇ ತರಗತಿ ಮಗುವಿನ ವಾರ್ಷಿಕ ಫೀಸ್ ಪುಸ್ತಕ, ಯೂನಿಫಾರ್ಮ್ ಮತ್ತು ಟ್ರಾನ್ಸ್‌ಪೋರ್ಟ್ ವೆಚ್ಚ ಬಿಟ್ಟು, 1.6 ಲಕ್ಷ ರೂಪಾಯಿಯಂತೆ.

ಸರ್ಕಾರದ ಲಗಾಮು ಇಲ್ಲವೇ?

ಖಾಸಗಿ ಶಾಲೆಗಳ ಈ ಏಕಸ್ವಾಮ್ಯದ ವಿರುದ್ಧ ಯಾವುದೇ ಕಠಿಣ ನಿಯಮಗಳಿಲ್ಲದಿರುವುದು ಪೋಷಕರ ಆಕ್ರೋಶಕ್ಕೆ ಮುಖ್ಯ ಕಾರಣ. ಶಾಲಾ ಆವರಣದಲ್ಲಿ ಪುಸ್ತಕ ಅಥವಾ ಸಮವಸ್ತ್ರ ಮಾರಾಟ ಮಾಡುವುದು ಕಾನೂನುಬಾಹಿರ ಎಂಬ ನಿಯಮವಿದ್ದರೂ, ಹಲವು ಶಾಲೆಗಳು ಪ್ಯಾಕೇಜ್ ಹೆಸರಿನಲ್ಲಿ ಪೋಷಕರ ಜೇಬಿಗೆ ಕತ್ತರಿ ಹಾಕುತ್ತಿವೆ.
ಶಿಕ್ಷಣ ಇಂದು ಜ್ಞಾನದ ಮೂಲವಾಗುವ ಬದಲು ಲಾಭದಾಯಕ ಉದ್ದಿಮೆಯಾಗಿ ಮಾರ್ಪಟ್ಟಿರುವುದು ದುರಂತ. ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅನಿವಾರ್ಯವಾಗಿ ಈ ಲೂಟಿಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ,(ಎಜನ್ಸೀಸ್​).