Mahesh Babu 
ದೇಶ

299 ರೂ.ನೀರಿನ ಬಾಟಲ್..! Mahesh Babu ರೆಸ್ಟೋರೆಂಟ್ ಬಿಲ್ ನೋಡಿ ಶಾಕ್ ಆದ ನೆಟ್ಟಿಗರು!

ಹೈದರಾಬಾದ್​: ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಮಹೇಶ್​​ ಬಾಬು (Mahesh Babu) ಸಹಭಾಗಿತ್ವದ ಹೈದರಾಬಾದ್‌ನ ಐಷಾರಾಮಿ ರೆಸ್ಟೋರೆಂಟ್‌ನಲ್ಲಿ ನೀರಿನ ಬಾಟಲ್‌ಗೆ 299 ಮತ್ತು ಡೈಟ್ ಕೋಕ್‌ಗೆ 180 ಬೆಲೆ ನಿಗದಿಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಫುಡ್ ಬ್ಲಾಗರ್ ಒಬ್ಬರು ರೆಸ್ಟೋರೆಂಟ್ ಬಿಲ್ ವಿಡಿಯೊ ಹಂಚಿಕೊಂಡ ಬಳಿಕ ಈ ವಿಚಾರ ವೈರಲ್ ಆಗಿದೆ.
ಹೈದರಾಬಾದ್‌ನ ಬಂಜಾರಾ ಹಿಲ್ಸ್ ಪ್ರದೇಶದಲ್ಲಿರುವ ‘AVN Palace Heights’ ಎಂಬ ಐಷಾರಾಮಿ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದ ಫುಡ್ ಬ್ಲಾಗರ್, ಅಲ್ಲಿನ ವಾತಾವರಣ ಮತ್ತು ಆಹಾರದ ರುಚಿಯನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಸಾಮಾನ್ಯ ನೀರಿನ ಬಾಟಲ್‌ಗೆ 299 ಮತ್ತು ಡೈಯಟ್ ಕೋಕ್‌ಗೆ 180 ದರ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋ ಪ್ರಕಾರ, ಬ್ಲಾಗರ್ ಒಂದು ಚಿಕನ್ ಟಿಕ್ಕಾ, ಒಂದು ಮಟನ್ ಬಿರಿಯಾನಿ ಮತ್ತು ಎರಡು ಡೈಯಟ್ ಕೋಕ್ ಆರ್ಡರ್ ಮಾಡಿದ್ದರು. ತೆರಿಗೆ ಮತ್ತು ಸರ್ವಿಸ್ ಚಾರ್ಜ್ ಸೇರಿ ಒಟ್ಟು ಬಿಲ್ 1,853 ಆಗಿತ್ತು. ಈ ಬಿಲ್ ನೋಡಿ ಅನೇಕ ನೆಟ್ಟಿಗರು “ಇದು ಸಾಮಾನ್ಯ ಜನರಿಗೆ ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ.
ℹ️

ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ಆ ಹಣಕ್ಕೆ ಎರಡು ಕಿಲೋ ಮಟನ್ ತಂದು ಮನೆಯಲ್ಲೇ ರುಚಿಯಾಗಿ ಊಟ ಮಾಡಬಹುದು” ಎಂಬ ಕಾಮೆಂಟ್ ಹೆಚ್ಚು ವೈರಲ್ ಆಗಿದೆ. ಮತ್ತೊಬ್ಬರು “ಸ್ಟಾರ್ ಹೆಸರು ಇದೆ ಅಂತ ಎಲ್ಲದಕ್ಕೂ ಇಷ್ಟು ಬೆಲೆ ಹಾಕೋದು ಸರಿಯಲ್ಲ” ಎಂದು ಬರೆದಿದ್ದಾರೆ.
ಆದರೆ ಕೆಲ ಅಭಿಮಾನಿಗಳು ರೆಸ್ಟೋರೆಂಟ್ ಪರವಾಗಿ ಮಾತನಾಡಿದ್ದಾರೆ. “ಐಷಾರಾಮಿ ರೆಸ್ಟೋರೆಂಟ್ ಅಂದ್ರೆ ಬೆಲೆ ಜಾಸ್ತಿಯೇ ಇರುತ್ತದೆ”, “ಅಲ್ಲಿ ಕೇವಲ ಊಟವಲ್ಲ, ಅನುಭವಕ್ಕೂ ಹಣ ಕೊಡುತ್ತಾರೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಕೆಲವರು “ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಇಂತಹ ಬೆಲೆ ಸಾಮಾನ್ಯ” ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಈ ಘಟನೆ ಬಳಿಕ ಸೆಲೆಬ್ರಿಟಿ ರೆಸ್ಟೋರೆಂಟ್‌ಗಳ ಬೆಲೆ ಕುರಿತು ಮತ್ತೆ ಚರ್ಚೆ ಶುರುವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಸಿನಿಮಾ ತಾರೆಯರು ಹೋಟೆಲ್ ಮತ್ತು ಫುಡ್ ಬಿಸಿನೆಸ್ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಐಷಾರಾಮಿ ವಾತಾವರಣ, ಬ್ರಾಂಡ್ ಮೌಲ್ಯ ಮತ್ತು ಸ್ಟಾರ್ ಆಕರ್ಷಣೆ ಕಾರಣದಿಂದ ಇಂತಹ ಸ್ಥಳಗಳಲ್ಲಿ ಬೆಲೆ ಸಾಮಾನ್ಯ ರೆಸ್ಟೋರೆಂಟ್‌ಗಳಿಗಿಂತ ಹೆಚ್ಚಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
Mahesh Babu ಈಗಾಗಲೇ ಸಿನಿಮಾ, ಮಲ್ಟಿಪ್ಲೆಕ್ಸ್ ಮತ್ತು ಹೋಟೆಲ್ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. Asian Group ಜೊತೆಗೆ AMB Cinemas ನಡೆಸುತ್ತಿರುವ ಅವರು, ಪತ್ನಿ Namrata Shirodkar ಜೊತೆ ಸೇರಿ ರೆಸ್ಟೋರೆಂಟ್ ವ್ಯವಹಾರದಲ್ಲೂ ಸಕ್ರಿಯರಾಗಿದ್ದಾರೆ.
ಇದೀಗ ಈ ಬಿಲ್ ವೈರಲ್ ಆದ ಬಳಿಕ “ಲಕ್ಸುರಿ ಅನುಭವಕ್ಕೆ ಇಷ್ಟು ಬೆಲೆ ಸಹಜವೇ?” ಅಥವಾ “ಅತಿಯಾದ ದರ ವಸೂಲಿ ಮಾಡಲಾಗ್ತಿದೆಯಾ?” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಧ್ಯಮ ವರ್ಗದ ಜನರಿಗೆ ಇಂತಹ ದರಗಳು ಅಚ್ಚರಿ ತಂದಿದ್ದು, ಕೆಲವರು ಹಾಸ್ಯಮಯ ಮೀಮ್ಸ್‌ಗಳನ್ನೂ ಹಂಚಿಕೊಳ್ಳುತ್ತಿದ್ದಾರೆ,(ಏಜೆನ್ಸೀಸ್​).