DMK Manifesto | ಡಿಎಂಕೆ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ 
ದೇಶ

ಡಿಎಂಕೆ ಪ್ರಣಾಳಿಕೆ ಬಿಡುಗಡೆ..ಉದ್ಯೋಗ ಸೃಷ್ಟಿ ಮತ್ತು ಉಚಿತ ವಿದ್ಯುತ್ ಭರವಸೆಯೊಂದಿಗೆ ಅಖಾಡಕ್ಕಿಳಿದ ಸ್ಟಾಲಿನ್​ | DMK Manifesto

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಭಾನುವಾರ ಡಿಎಂಕೆ ಪಕ್ಷದ ಮಹತ್ವಾಕಾಂಕ್ಷೆಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಅಭಿವೃದ್ದಿ ಯೋಜನೆಗಳ ವಿಸ್ತರಣೆ ಮತ್ತು ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಈ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಡಿಎಂಕೆ ಸರ್ಕಾರವು ತನ್ನ ಹಿಂದಿನ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದು, ಮುಂಬರುವ ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಹೇಳಿದರು.

ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಆರ್ಥಿಕ ಬಲ

ಪ್ರಣಾಳಿಕೆಯ ಪ್ರಮುಖ ಘೋಷಣೆಗಳಲ್ಲಿ ಮಹಿಳಾ ಕುಟುಂಬ ಮುಖ್ಯಸ್ಥರಿಗೆ ನೀಡಲಾಗುತ್ತಿರುವ ಮಾಸಿಕ ಸಹಾಯಧನವನ್ನು 1,000 ರೂಪಾಯಿಗಳಿಂದ 2,000 ರೂಪಾಯಿಗಳಿಗೆ ಹೆಚ್ಚಿಸುವುದಾಗಿ ತಿಳಿಸಲಾಗಿದೆ. ಇದರಿಂದ ಸುಮಾರು 1.37 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ. ಇದರೊಂದಿಗೆ ವೃದ್ಧಾಪ್ಯ ವೇತನವನ್ನು ಸಹ 2,000 ರೂಪಾಯಿಗಳಿಗೆ ಏರಿಸಲಾಗುವುದು ಎಂದು ಘೋಷಿಸಲಾಗಿದ್ದು, ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂಪಾಯಿಗಳವರೆಗಿನ ಬಡ್ಡಿರಹಿತ ಸಾಲದ ಸೌಲಭ್ಯವನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಜಾರಿಯಲ್ಲಿರುವ ಉಪಾಹಾರ ಯೋಜನೆಯನ್ನು ಪ್ರಸ್ತುತ ಇರುವ 1 ರಿಂದ 5 ನೇ ತರಗತಿಯಿಂದ 8 ನೇ ತರಗತಿಯವರೆಗೆ ವಿಸ್ತರಿಸಲಾಗುವುದು ಎಂದು ಸ್ಟಾಲಿನ್ ಹೇಳಿದ್ದು, ಉನ್ನತ ವ್ಯಾಸಂಗ ಮಾಡುತ್ತಿರುವ ಸುಮಾರು 35 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸುವ ಬೃಹತ್ ಯೋಜನೆಯನ್ನು ಪ್ರಕಟಿಸಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ, ಮುಖ್ಯಮಂತ್ರಿಗಳ ಆರೋಗ್ಯ ವಿಮಾ ಯೋಜನೆಯಡಿ ಪ್ರಯೋಜನಗಳನ್ನು 1 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಉದ್ಯೋಗಾವಕಾಶ

ರಾಜ್ಯದ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು 18 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಡಿಎಂಕೆ ಹೊಂದಿದ್ದು, 120 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ಗಾತ್ರವನ್ನು ತಲುಪುವ ಗುರಿಯೊಂದಿಗೆ ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶಗಳನ್ನು ವಿಸ್ತರಿಸಲು ನಿಯೋ ಟೈಡೆಲ್ ಪಾರ್ಕ್ಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ವಿವರಿಸಿದರು. ಅಲ್ಲದೆ, 20 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತ ವಿದ್ಯುತ್ ಬೆಂಬಲವನ್ನು ಮುಂದುವರಿಸುವುದಾಗಿ ಮತ್ತು ರೈತರಿಗೆ ಮೀಟರ್ ಇಲ್ಲದ ಪಂಪ್ ಸೆಟ್‌ಗಳನ್ನು ಒದಗಿಸುವುದಾಗಿ ತಿಳಿಸಿದರು.
ಪ್ರಣಾಳಿಕೆ ಸಮಿತಿಯ ನೇತೃತ್ವ ವಹಿಸಿದ್ದ ಕನಿಮೋಳಿ ಕರುಣಾನಿಧಿ ಮತ್ತು ಇತರ ಹಿರಿಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ ಸ್ಟಾಲಿನ್, ವಿರೋಧ ಪಕ್ಷಗಳು ರಾಜ್ಯದ ಅಭಿವೃದ್ಧಿ ಪಥವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ತಮಿಳುನಾಡಿನ ಜನರು ಅಭಿವೃದ್ಧಿಯ ನಿರಂತರತೆಯನ್ನು ಬಯಸುತ್ತಿದ್ದು, ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬ ವಿಶ್ವಾಸವನ್ನು ಸಿಎಂ ವ್ಯಕ್ತಪಡಿಸಿದರು(ಏಜೆನ್ಸೀಸ್​​).