Nitish Kumar Assets | ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 
ದೇಶ

ಮುಖ್ಯಮಂತ್ರಿಗಿಂತ ಸಚಿವರೇ ಕುಬೇರರು...ಬಹಿರಂಗವಾಯ್ತು ನಿತೀಶ್ ಕುಮಾರ್ ಮತ್ತು ಸಂಪುಟ ಸದಸ್ಯರ ಆಸ್ತಿ ಪಟ್ಟಿ | Nitish Kumar Assets

ಪಟನಾ: ಸರ್ಕಾರದ ಪಾರದರ್ಶಕತೆ ಕ್ರಮಗಳ ಭಾಗವಾಗಿ ಕ್ಯಾಬಿನೆಟ್ ಸೆಕ್ರೆಟರಿಯೇಟ್ ಇಲಾಖೆಯು ಆಸ್ತಿ ಬಹಿರಂಗಪಡಿಸುವಿಕೆಯನ್ನು ಸಾರ್ವಜನಿಕಗೊಳಿಸಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಚಿವ ಸಂಪುಟದ ಸದಸ್ಯರು 2025 ರ ಕೊನೆಯ ದಿನವಾದ ಡಿಸೆಂಬರ್​ 31 ರಂದು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಈ ವಿವರಗಳ ಪ್ರಕಾರ, ಸಿಎಂ ನಿತೀಶ್ ಕುಮಾರ್ ಬಳಿ 20,552 ರೂ. ನಗದು ಇದ್ದು, ಮೂರು ಬ್ಯಾಂಕ್ ಖಾತೆಗಳಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಪಾಟ್ನಾ ಸೆಕ್ರೆಟರಿಯೇಟ್ ಖಾತೆಯಲ್ಲಿ 27,217 ರೂ., ದೆಹಲಿಯ ಎಸ್‌ಬಿಐ ಪಾರ್ಲಿಮೆಂಟ್ ಹೌಸ್ ಖಾತೆಯಲ್ಲಿ 3,358 ರೂ. ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಬೋರಿಂಗ್ ರಸ್ತೆ ಶಾಖೆಯ ಖಾತೆಯಲ್ಲಿ 27,191 ರೂ ಇದೆ.
ಮುಖ್ಯಮಂತ್ರಿ ನಿತೀಶ್​ 11,32,753 ರೂ. ಮೌಲ್ಯದ ಫೋರ್ಡ್ ಇಕೋಸ್ಪೋರ್ಟ್ ಕಾರು ಮತ್ತು ಸುಮಾರು 2.03 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಹೊಂದಿದ್ದು, ಒಟ್ಟು ಚರಾಸ್ತಿಗಳ ಮೌಲ್ಯ 17,66,196 ರೂ. ನಿತೀಶ್ ಕುಮಾರ್ ದ್ವಾರಕಾದ ಪಾರ್ಲಿಮೆಂಟ್ ಬಿಹಾರ ಕೋಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿ ಫ್ಲಾಟ್ ಸಹ ಹೊಂದಿದ್ದಾರೆ, ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ 1.48 ಕೋಟಿ ರೂ ಆಗಿದೆ ಎಂದು ತಿಳಿದುಬಂದಿದೆ.

ಡಿಸಿಎಂ ಸಾಮ್ರಾಟ್ ಚೌಧರಿ

ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ 1.35 ಲಕ್ಷ ರೂಪಾಯಿ ನಗದು ಘೋಷಿಸಿದ್ದು, ಅವರ ಪತ್ನಿ 35,000 ರೂಪಾಯಿ ನಗದು ಹೊಂದಿದ್ದಾರೆ. ಎಸ್‌ಬಿಐ ಖಾತೆಯಲ್ಲಿ 15,35,789 ರೂಪಾಯಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಲ್ಲಿ 2,09,688 ರೂಪಾಯಿ ಸೇರಿದಂತೆ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಲಕ್ಷಾಂತರ ರೂಪಾಯಿ ಉಳಿತಾಯವಿದೆ. ಬಾಂಡ್‌ಗಳು ಮತ್ತು ಷೇರುಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ಅವರ ಪತ್ನಿ, ಮಗಳು ಮತ್ತು ಮಗನ ಹೆಸರಿನಲ್ಲಿ ಬ್ಯಾಂಕ್ ಠೇವಣಿಗಳಿವೆ ಎನ್ನಲಾಗಿದೆ.
ಸಾಮ್ರಾಟ್ ಚೌಧರಿ ಬಳಿ 7 ಲಕ್ಷ ರೂಪಾಯಿ ಮೌಲ್ಯದ 2023 ಮಾಡೆಲ್ ಬೊಲೆರೊ ನಿಯೋ ಕಾರು ಇದ್ದು, 20 ಲಕ್ಷ ರೂಪಾಯಿ ಮೌಲ್ಯದ 200 ಗ್ರಾಂ ಚಿನ್ನವಿದೆ, ಅವರ ಪತ್ನಿ ಬಳಿ 20 ಲಕ್ಷ ರೂಪಾಯಿ ಮೌಲ್ಯದ 200 ಗ್ರಾಂ ಚಿನ್ನವಿದ್ದು, 4 ಲಕ್ಷ ರೂಪಾಯಿ ಮೌಲ್ಯದ ಎನ್‌ಪಿ ಬೋರ್ ರೈಫಲ್ ಮತ್ತು ಅವರ ತಂದೆ ನೀಡಿದ್ದ 2 ಲಕ್ಷ ರೂಪಾಯಿ ಮೌಲ್ಯದ ರಿವಾಲ್ವರ್ ಇದೆ. ಪತ್ನಿ ಪಾಟ್ನಾದ ಗೋಲಾ ರಸ್ತೆಯಲ್ಲಿ 29 ಲಕ್ಷ ರೂಪಾಯಿ ಮೌಲ್ಯದ ಫ್ಲಾಟ್ ಹೊಂದಿದ್ದಾರೆ.

ಡಿಸಿಎಂ ವಿಜಯ್ ಕುಮಾರ್ ಸಿನ್ಹಾ

ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ 88,560 ರೂ. ನಗದು ಮತ್ತು ಬ್ಯಾಂಕ್ ಖಾತೆಗಳಲ್ಲಿ 55 ಲಕ್ಷ ರೂ.ಗೂ ಹೆಚ್ಚು ಠೇವಣಿ ಇಟ್ಟಿರುವುದಾಗಿ ಘೋಷಿಸಿದ್ದಾರೆ. ಶಿವ ಬಯೋಜೆನೆಟಿಕ್ ಮತ್ತು ಪವರ್ ಗ್ರಿಡ್‌ನಂತಹ ಕಂಪನಿಗಳ ಷೇರುಗಳು ಸೇರಿದಂತೆ ಇತರ ಕಡೆಗಳಲ್ಲೂ ಹೂಡಿಕೆ ಮಾಡಿದ್ದಾರೆ. 90 ಗ್ರಾಂ ತೂಕದ ಚಿನ್ನಾಭರಣಗಳನ್ನು ಹೊಂದಿದ್ದು, ಇದರ ಮೌಲ್ಯ 9.90 ಲಕ್ಷ ರೂಪಾಯಿ.

ಆರೋಗ್ಯ ಸಚಿವ ಮಂಗಲ್ ಪಾಂಡೆ

ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ತಮ್ಮ ಆಸ್ತಿಗಳಲ್ಲಿ ನಗದು, ಚಿನ್ನ ಮತ್ತು ಬೆಳ್ಳಿ, ಒಂದು ಸಫಾರಿ ವಾಹನ ಮತ್ತು ಒಂದು ರೈಫಲ್ ಇದೆ ಎಂದು ಘೋಷಿಸಿಕೊಂಡಿದ್ದು, ಒಂದು ಬ್ಯಾಂಕ್ ಖಾತೆಯಲ್ಲಿ 1 ಕೋಟಿ ರೂ.ಗೂ ಹೆಚ್ಚು ಠೇವಣಿ ಇದೆ. ಒಟ್ಟು ಚರಾಸ್ತಿಗಳ ಮೌಲ್ಯ 1,32,16,075 ರೂ. ಪಾಂಡೆ ಬಳಿ 52,000 ರೂ. ಮೌಲ್ಯದ ರೈಫಲ್, 240 ಗ್ರಾಂ ಚಿನ್ನ ಮತ್ತು ಟಾಟಾ ಸಫಾರಿ ಕಾರು ಇದೆ. ಪಾಟ್ನಾದ ಎಸ್‌ಬಿಐ ಖಾತೆಯಲ್ಲಿ 1,01,66,660 ರೂ. ಇದ್ದರೆ, ಪಿಎನ್‌ಬಿ ಆರ್‌ಕೆ ಅವೆನ್ಯೂ ಖಾತೆಯಲ್ಲಿ 18,83,415.18 ರೂ ಇದೆ ಮತ್ತು 59,000 ರೂ. ನಗದು ಇದೆ.

ಸಚಿವ ಅಶೋಕ್ ಚೌಧರಿ

ಸಚಿವ ಅಶೋಕ್ ಚೌಧರಿ 2024–25ರ ಆರ್ಥಿಕ ವರ್ಷದಲ್ಲಿ ಒಟ್ಟು 20.34 ಲಕ್ಷ ರೂ. ಆದಾಯ ತೋರಿಸಿದ್ದು, ಬ್ಯಾಂಕ್ ಖಾತೆಗಳಲ್ಲಿ 53.86 ಲಕ್ಷ ರೂ. ಠೇವಣಿ ಇಟ್ಟಿದ್ದಾರೆ. ಪತ್ನಿ ನೀತಾ ಚೌಧರಿ ಬ್ಯಾಂಕ್ ಖಾತೆಗಳಲ್ಲಿ 22.54 ಕೋಟಿ ರೂ.ಗೂ ಹೆಚ್ಚು ಠೇವಣಿ ಇಟ್ಟಿದ್ದಾರೆ. ಚಿನ್ನ ಮತ್ತು ಹರಳು ಸೇರಿದಂತೆ 9.60 ಕೋಟಿ ರೂ. ಮೌಲ್ಯದ ಮತ್ತು 800 ಗ್ರಾಂ ತೂಕದ ಆಭರಣಗಳನ್ನು ಹೊಂದಿದ್ದಾರೆ. ಅಶೋಕ್ ಚೌಧರಿ 1 ಲಕ್ಷ ರೂ. ಮೌಲ್ಯದ ರಿವಾಲ್ವರ್ ಸಹ ಹೊಂದಿದ್ದಾರೆ.

ಸಚಿವ ವಿಜಯ್ ಕುಮಾರ್ ಚೌಧರಿ

ಸಚಿವ ವಿಜಯ್ ಕುಮಾರ್ ಚೌಧರಿ ವಿವಿಧ ಬ್ಯಾಂಕ್ ಖಾತೆಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಸುಮಾರು 1.12 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಹೊಂದಿದ್ದು, ಸಮಷ್ಟಿಪುರದಲ್ಲಿ 55 ಲಕ್ಷ ರೂ. ಮೌಲ್ಯದ ಕೃಷಿ ಭೂಮಿ ಮತ್ತು 15 ಲಕ್ಷ ರೂ. ಮೌಲ್ಯದ ವಸತಿ ಕಟ್ಟಡವನ್ನು ಹೊಂದಿದ್ದಾರೆ(ಏಜೆನ್ಸೀಸ್​).