Pregnant 
ದೇಶ

ನನ್ನನ್ನು ಗರ್ಭಿಣಿ ಮಾಡಿದ್ರೆ 13 ಲಕ್ಷ ರೂ. ಮತ್ತು ಫ್ಲಾಟ್: ನಂಬಿ ಹೋದವರಿಗೆ ಕಾದಿತ್ತು ಶಾಕ್! | Pregnant

ಪ್ರಮುಖ ಮುಖ್ಯಾಂಶಗಳು

  • ಗರ್ಭಿಣಿ ಮಾಡಿದರೆ 13 ಲಕ್ಷ ರೂ? ನಂಬಬೇಡಿ, ಇದು ದೊಡ್ಡ ವಂಚನೆ!
  • ನಿಮಗೂ ಬಂದಿದೆಯೇ 'ಪ್ರೆಗ್ನೆಂಟ್ ಜಾಬ್' ಮೆಸೇಜ್? ಎಚ್ಚರ, ಅಕೌಂಟ್ ಖಾಲಿಯಾದೀತು!
  • 13 ಲಕ್ಷದ ಆಸೆ ತೋರಿಸಿ ಪಂಗನಾಮ: ಆನ್‌ಲೈನ್ ಆಮಿಷಕ್ಕೆ ಬಲಿಯಾಗಬೇಡಿ!
ನವದೆಹಲಿ: "ನನ್ನನ್ನು ಗರ್ಭಿಣಿ(Pregnant) ಮಾಡಿ, ನಿಮಗೆ 13 ಲಕ್ಷ ರೂಪಾಯಿ ನಗದು ಮತ್ತು ಸುಸಜ್ಜಿತ 2BHK ಫ್ಲಾಟ್ ನೀಡುತ್ತೇನೆ!" - ಇಂತಹದೊಂದು ಅಸಹಜ ಮತ್ತು ಆಘಾತಕಾರಿ ಆಮಿಷವನ್ನೊಡ್ಡಿ ದೇಶಾದ್ಯಂತ ಪುರುಷರನ್ನು ಲೂಟಿ ಮಾಡುತ್ತಿದ್ದ ಬೃಹತ್ ಜಾಲವೊಂದು ಇದೀಗ ಬಯಲಾಗಿದೆ.
ಹೌದು, ಲೈಂಗಿಕತೆ, ಹಣ ಮತ್ತು ಆಸ್ತಿಯ ಆಸೆ ತೋರಿಸಿ ಅಮಾಯಕ ಪುರುಷರನ್ನು ಬಲೆಗೆ ಬೀಳಿಸುತ್ತಿದ್ದ ಈ ಕಿಲಾಡಿ ವಂಚಕರ ಕರಾಳ ಮುಖ ನೋಡಿ ಪೊಲೀಸರೇ ದಂಗಾಗಿದ್ದಾರೆ.
ಹಗರಣದ ಆಳ ಮತ್ತು ವಂಚನೆಯ ಜಾಲ
ವರದಿಗಳ ಪ್ರಕಾರ, ಈ ವಂಚಕರು ಪುರುಷರನ್ನು ಸಂಪರ್ಕಿಸಿ, "ಶ್ರೀಮಂತ ಮಹಿಳೆಯರು ತಮ್ಮ ಪತಿಯಿಂದ ಮಗುವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅವರಿಗೆ ನೀವು ನೆರವಾದರೆ ಬೃಹತ್ ಮೊತ್ತದ ಹಣ ಸಿಗಲಿದೆ" ಎಂದು ನಂಬಿಸುತ್ತಿದ್ದರು. ಇದು ಗೌಪ್ಯ ಮತ್ತು ಕಾನೂನುಬದ್ಧ ಒಪ್ಪಂದ ಎಂದು ಬಣ್ಣಿಸಿ ಸಂತ್ರಸ್ತರ ವಿಶ್ವಾಸ ಗಳಿಸುತ್ತಿದ್ದರು. ಈ ಕೆಲಸಕ್ಕೆ ನಿಯೋಜನೆಗೊಳ್ಳುವ ಮೊದಲು 'ನೋಂದಣಿ ಶುಲ್ಕ', 'ಜಿಎಸ್ ಟಿ', 'ಆದಾಯ ತೆರಿಗೆ' ಅಥವಾ 'ಸೆಕ್ಯೂರಿಟಿ ಡೆಪಾಸಿಟ್' ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಪೀಕುತ್ತಿದ್ದರು.

ರಾಷ್ಟ್ರಮಟ್ಟದಲ್ಲಿ ಹರಡಿರುವ ಜಾಲ

ಇದು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾದ ಘಟನೆಯಲ್ಲ. ಕಳೆದ ಕೆಲವು ವರ್ಷಗಳಿಂದ ಇಂತಹ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. 2024ರಲ್ಲಿ ಬಿಬಿಸಿ ವರದಿ ಮಾಡಿದಂತೆ, ಇದೇ ಮಾದರಿಯ ವಂಚನೆಗಳು ದೇಶದ ವಿವಿಧೆಡೆ ನಡೆಯುತ್ತಿವೆ. ಬಿಹಾರದ ನವಾಡ ಜಿಲ್ಲೆಯಲ್ಲಿ ಪೊಲೀಸರು ಇತ್ತೀಚೆಗೆ "ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್" (All India Pregnant Job) ಮತ್ತು "ಪ್ಲೇಬಾಯ್ ಸರ್ವಿಸ್" ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ ಯುವಕರನ್ನು ಗುರಿಯಾಗಿಸಿಕೊಂಡು 10 ರಿಂದ 15 ಲಕ್ಷ ರೂಪಾಯಿ ಕೊಡುವುದಾಗಿ ನಂಬಿಸುತ್ತಿತ್ತು.

ವಂಚನೆಯ ರೋಚಕ ಹಾದಿ

ಈ ಜಾಲವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡುವುದಾದರೆ,ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಆಕರ್ಷಕ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತದೆ. ವಂಚಕರು ಸಂತ್ರಸ್ತರಿಗೆ ನಕಲಿ ಮಹಿಳೆಯರ ಫೋಟೋಗಳು, ನಕಲಿ ಒಪ್ಪಂದ ಪತ್ರಗಳು ಮತ್ತು ಧೃಡೀಕರಣ ಪತ್ರಗಳನ್ನು ತೋರಿಸಿ ನಂಬಿಕೆ ಹುಟ್ಟಿಸುತ್ತಾರೆ. ಮೊದಲು ನೋಂದಣಿ ಶುಲ್ಕ ಎಂದು ಸಣ್ಣ ಮೊತ್ತ ಕೇಳುತ್ತಾರೆ. ನಂತರ ವಿಮೆ, ಪ್ರೊಸೆಸಿಂಗ್ ಫೀಸ್ ಎಂದು ಸಾವಿರಾರು ರೂಪಾಯಿಗಳನ್ನು ಪೀಕುತ್ತಾ ಹೋಗುತ್ತಾರೆ. ಆದರೆ, ಇಲ್ಲಿ ಯಾವುದೇ ಮಹಿಳೆ ಇರುವುದಿಲ್ಲ, ಯಾವುದೇ ಒಪ್ಪಂದವೂ ಇರುವುದಿಲ್ಲ. ಹಣ ಸಂದಾಯವಾದ ತಕ್ಷಣ ವಂಚಕರು ನಾಪತ್ತೆಯಾಗುತ್ತಾರೆ.

ಲೈಂಗಿಕ ಆಮಿಷದ ಬಲೆ

ಬಿಬಿಸಿ ವರದಿಯ ಪ್ರಕಾರ, ಸಂತ್ರಸ್ತರಿಗೆ ಕೇವಲ ದೈಹಿಕ ಸಂಬಂಧಕ್ಕಾಗಿ 5 ಲಕ್ಷ ರೂಪಾಯಿ ಮತ್ತು ಮಹಿಳೆ ಗರ್ಭಿಣಿಯಾದರೆ ಹೆಚ್ಚುವರಿ 8 ಲಕ್ಷ ರೂಪಾಯಿ ನೀಡುವುದಾಗಿ ವಂಚಕರು ಆಮಿಷವೊಡ್ಡುತ್ತಿದ್ದರು. ತನಿಖೆಯ ವೇಳೆ ಈ ಗ್ಯಾಂಗ್ ಕೇವಲ ಇಂತಹ ಹಗರಣ ಮಾತ್ರವಲ್ಲದೆ, ನಕಲಿ ಲೋನ್ ಆಪ್‌ಗಳ ಮೂಲಕವೂ ಜನರ ಹಣವನ್ನು ಲೂಟಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ತಜ್ಞರ ಎಚ್ಚರಿಕೆ!

ಪೊಲೀಸ್ ಇಲಾಖೆಯು ಇಂತಹ ಆನ್‌ಲೈನ್ ಆಮಿಷಗಳ ವಿರುದ್ಧ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. "ಯಾವುದೇ ಅಧಿಕೃತ ಸಂಸ್ಥೆ ಅಥವಾ ವ್ಯಕ್ತಿ ಇಂತಹ ಅಸಹಜ ಕೆಲಸಗಳಿಗಾಗಿ ಜಾಹೀರಾತು ನೀಡುವುದಿಲ್ಲ. ಹಣ ಕೇಳುವ ಇಂತಹ ಯಾವುದೇ ಲಿಂಕ್‌ಗಳನ್ನು ಒತ್ತಬೇಡಿ ಮತ್ತು ಹಣವನ್ನು ವರ್ಗಾಯಿಸಬೇಡಿ" ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್​).