Rs 100 crore in bank account Bengal woman shocked
- ಕಸೂತಿ ಹೊಲೆಯುವ ಮಹಿಳೆ ಖಾತೆಗೆ ರೂ. 99,99,99,997 ಜಮೆ, ಅಕೌಂಟ್ ಫ್ರೀಜ್.
- ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿಯ ಜಮತಲಾ ಶಾಖೆಯಲ್ಲಿ ಘಟನೆ.
- ಅಕೌಂಟ್ ಫ್ರೀಜ್ ಆಗಿರುವ ಕಾರಣ ನಾನಾ ಸಮಸ್ಯೆಗಳನ್ನು ಎದುರಿಸುತ್ತಿರುವ ಕಶ್ಮೀರಾ ಶೇಖ್.
ಕೋಲ್ಕತ್ತಾ: ಒಂದೊತ್ತಿನ ಅನ್ನಕ್ಕೂ ಕಷ್ಟಪಡುವ ಕುಟುಂಬಕ್ಕೆ ದಿಢೀರನೆ ಕೋಟಿಗಟ್ಟಲೇ ಹಣ ಜಮೆಯಾಗುತ್ತದೆ. ಆದಕ್ಕೂ ಮುನ್ನವೇ ಯಾವ ವಿಚಾರಕ್ಕೂ ಹಣ ಬಳಕೆ ಮಾಡದಂತೆ ಬ್ಯಾಂಕ್ ಫ್ರೀಜ್ ಮಾಡಿಬಿಟ್ಟರೆ ಅವರ ಪರಿಸ್ಥಿತಿ ಏನಾಗಬೇಡ. ಇಂತದ್ದೇ ಒಂದು ವಿಚಿತ್ರ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿಯ ಜಮತಲಾ ಶಾಖೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನಡೆದಿದೆ.
ಹೌದು, ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿ ಹಣ ಜಮೆಯಾಗಿದೆಯಾ ಅಥವಾ ಇಲ್ಲವಾ ಎಂದು ಪರಿಶೀಲನೆ ನಡೆಸಲು 36 ವರ್ಷದ ಕಶ್ಮೀರಾ ಶೇಖ್ ಎಂಬ ಮಹಿಳೆ ಬ್ಯಾಂಕ್ಗೆ ತೆರಳಿದ್ದರು. ಈ ವೇಳೆ ಶಾಕಿಂಗ್ ವಿಚಾರವನ್ನು ಸಿಬ್ಬಂದಿ ಅವರಿಗೆ ನೀಡಿದ್ದಾರೆ. ನಿಮ್ಮ ಖಾತೆಗೆ 100 ಕೋಟಿ ರೂಪಾಯಿಗೆ ಕೇವಲ 3 ರೂಪಾಯಿ ಕಡಿಮೆ. ಅಂದರೆ ರೂ. 99,99,99,997 ಜಮೆಯಾಗಿದೆ ಎಂದು.
ಕಶ್ಮೀರಾ ಶೇಖ್ ಅವರಿಗೆ ಮಾತ್ರ ಬಂಗಾಳದಲ್ಲಿ ಉಂಟಾದ ತಾಂತ್ರಿಕ ಹಾಗೂ ಸರ್ವರ್ ಬಿಕ್ಕಟ್ಟಿನಿಂದಾಗಿ ಹಲವರ ಖಾತೆಗೆ ಸಮಸ್ಯೆಗಳು ಎದುರಾಗಿದೆ ಎನ್ನುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಕಸೂತಿ,
ಬ್ಯಾಗ್ ಹೊಲೆಯುವ ಕಸುಬು
ಆಸ್ಬೆಸ್ಟೋಸ್ ಶೀಟ್ ಎಂದರೆ ಸಿಮೆಂಟಿನ ಶೀಟ್ ಮೇಲ್ಛಾವಣಿಯನ್ನು ಹೊಂದಿರುವ ಮನೆಯಲ್ಲಿ ವಾಸ ಮಾಡುವ ಕಶ್ಮೀರಾ ಶೇಖ್, ಕಸೂತಿ ಕೆಲಸ ಮಾಡುತ್ತಾರೆ. ಅವರ ಗಂಡನದ್ದು ಬ್ಯಾಗ್ ಹೊಲೆಯುವ ಕಸುಬು. ಇಬ್ಬರ ಅಲ್ಪಸ್ವಲ್ಪ ದುಡಿಮೆಯಲ್ಲೇ ತಿಂಗಳು ವರ್ಷವನ್ನು ದೂಡುತ್ತಾರೆ.
ಅಕೌಂಟ್ ಫ್ರೀಜ್
ಬಡ ವರ್ಗದವರಾದ ಈ ದಂಪತಿ ಅಕೌಂಟಿಗೆ ಕೋಟಿಕೋಟಿ ಹಣ ಜಮೆಯಾಗಿದ್ದು ಹೇಗೆ, ಹಾಕಿದ್ಯಾರು ಎನ್ನುವ ಮಾಹಿತಿಯೇ ಇಲ್ಲವಾದ ಕಾರಣ ಆ ಕುರಿತು ತನಿಖೆ ನಡೆಯುತ್ತಿದೆ. ಇದರಿಂದಾಗಿ ಖಾತೆ ಫ್ರೀಜ್ ಆಗಿರುವ ಕಾರಣ, ದೈನಂದಿನ ಚಟುವಟಿಕೆಗೆ ಹಣ ಡ್ರಾ ಮಾಡಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಕೆಲವು ದಿನದ ಹಿಂದೆ ಕೋಲ್ಕತ್ತಾದ ಬೆಲೆಘಾಟದಲ್ಲಿ ಕ್ಲೌಡ್ ಕಿಚನ್ ಹೊಂದಿರುವ ನೂಪುರ್ ಗುಪ್ತಾ ಅವರ ಖಾತೆಗೆ 47 ಕೋಟಿ ರೂ. ಠೇವಣಿಯಾದ ಘಟನೆ ಬೆಳಕಿಗೆ ಬಂದಿತ್ತು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ಬ್ಯಾಂಕ್ ಮತ್ತು ಆದಾಯ ತೆರಿಗೆ ಇಲಾಖೆಯ ತನಿಖೆ ನಡೆಸಿತು. ಈ ಸಮಸ್ಯೆ ಇನ್ನು ಪರಿಶೀಲನೆಯಲ್ಲಿದೆ ಎಂದು ಪಿಎನ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ ಆದರೆ ಬ್ಯಾಂಕ್ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ, (ಏಜೆನ್ಸೀಸ್).