RBI ಶಿಫಾರಸಿನಂತೆ ಪಾಲಿಮರ್ ನೋಟುಗಳನ್ನು ಪರಿಚಯಿಸಲು ಕೇಂದ್ರದ ಒಪ್ಪಿಗೆ 
ದೇಶ

ಇನ್ಮುಂದೆ 10, 20 ರೂ. ನೋಟಿಗೆ ಹೊಸ ರೂಪ? ಪಾಲಿಮರ್ ನೋಟಿಗೆ ಕೇಂದ್ರದ ಗ್ರೀನ್ ಸಿಗ್ನಲ್ | polymer notes

ಪ್ರಮುಖ ಮುಖ್ಯಾಂಶಗಳು

  • 10, 20 ರೂ. ಹೊಸ ಪಾಲಿಮರ್ ನೋಟಿಗೆ ಕೇಂದ್ರದ ಗ್ರೀನ್ ಸಿಗ್ನಲ್
  • ಪ್ರಾಯೋಗಿಕವಾಗಿ ತಲಾ 100 ಕೋಟಿ ನೋಟು ಬಿಡುಗಡೆಗೆ ಸಿದ್ಧತೆ
  • ಈಗಿರುವ ನೋಟುಗಳ ಜೊತೆಯಲ್ಲೇ ಬರಲಿವೆ ಪಾಲಿಮರ್ ನೋಟು
ನವದೆಹಲಿ: 10 ಮತ್ತು 20 ರೂಪಾಯಿ ನೋಟುಗಳು ಇನ್ಮುಂದೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿವೆ. ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಶಿಫಾರಸಿನಂತೆ ಪಾಲಿಮರ್ ನೋಟುಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲು ಕೇಂದ್ರ ಸರ್ಕಾರ ಗ್ರೀನ್​ ಸಿಗ್ನಲ್​ ನೀಡಿದೆ.
ಮೊದಲ ಹಂತದಲ್ಲಿ 10 ಮತ್ತು 20 ಮುಖಬೆಲೆಯ ತಲಾ 100 ಕೋಟಿ ಪಾಲಿಮರ್ ನೋಟುಗಳನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲು ಕೇಂದ್ರ ಒಪ್ಪಿಗೆ ನೀಡಿದೆ. ಈ ನೋಟುಗಳ ಪ್ರಯೋಗ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಚಲಾವಣೆಗೆ ಬರಲಿದ್ದು, ಪಾಲಿಮರ್ ನೋಟುಗಳು ಜನಗಳ ಕೈಯಲ್ಲಿ ಓಡಾಡಲಿವೆ.

ಕಾಗದದ ನೋಟುಗಳ ಜೊತೆಯಲ್ಲೇ ಪಾಲಿಮರ್ ನೋಟು

ಆರ್‌ಬಿಐ ಪ್ರಕಾರ, ಹೊಸ ಪಾಲಿಮರ್ ನೋಟುಗಳು ಈಗಿರುವ ಕಾಗದದ ನೋಟುಗಳ ಬದಲಾಗಿ ತಕ್ಷಣ ಬರುತ್ತವೆ ಎಂದೇನಿಲ್ಲ. ಈಗಿರುವ ಕಾಗದದ ನೋಟುಗಳ ಜೊತೆಯಲ್ಲೇ ಪಾಲಿಮರ್ ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಲಾಗಿದೆ. ಆರ್‌ಬಿಐ ಕೇಂದ್ರ ಮಂಡಳಿಯ ಶಿಫಾರಸಿನ ಮೇಲೆ ಸರ್ಕಾರಕ್ಕೆ ಈ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಅದಕ್ಕೆ ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಯಾವಾಗ ಕೈಸೇರಲಿವೆ ಹೊಸ ನೋಟು?

ಇದು ಸದ್ಯಕ್ಕೆ ಬಹುತೇಕ ಮಂದಿಯ ಪ್ರಶ್ನೆ. ಆದರೆ ಪಾಲಿಮರ್ ನೋಟುಗಳು ಮಾರುಕಟ್ಟೆಗೆ ಬರುವ ನಿಖರ ದಿನಾಂಕ ನಿಗದಿಯಾಗಿಲ್ಲ. ನೋಟುಗಳ ಖರೀದಿ ಪ್ರಕ್ರಿಯೆ ಇನ್ನೂ ಆರಂಭಿಕ ಹಂತದಲ್ಲಿದೆ. ಹೀಗಾಗಿ ಪಾಲಿಮರ್ ನೋಟುಗಳ ಪರಿಚಯಕ್ಕೆ ಎಷ್ಟು ಸಮಯ ಬೇಕಾಗುತ್ತೆ?  ಇದಕ್ಕೆ ಎಷ್ಟು ಹಣ ವೆಚ್ಚವಾಗುತ್ತೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

ಪಾಲಿಮರ್ ನೋಟು ಯಾಕೆ?

ಪಾಲಿಮರ್‌ನಿಂದ ತಯಾರಿಸುವ ನೋಟುಗಳು ಸಾಮಾನ್ಯ ಕಾಗದದ ನೋಟುಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ.  ನೀರು ಮತ್ತು ತೇವಾಂಶದಿಂದ ಹಾನಿಯಾಗುವ ಪ್ರಮಾಣ ಕಡಿಮೆ ಇರುತ್ತೆದ. ಹೀಗಾಗಿ ಮೊದಲು ಸಣ್ಣ ಮುಖಬೆಲೆಯ ನೋಟುಗಳ ಬಳಕೆ ಮತ್ತು ಬಾಳಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಯೋಗ ಮಾಡಲಾಗುತ್ತಿದೆ.

ದೇಶದಲ್ಲಿ ಹಣದುಬ್ಬರ ಇಳಿಕೆ

ಇದೇ ವೇಳೆ ದೇಶದ ಚಿಲ್ಲರೆ ಹಣದುಬ್ಬರದ ಬಗ್ಗೆಯೂ ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಸರಾಸರಿ ಚಿಲ್ಲರೆ ಹಣದುಬ್ಬರವು 2023-24ರಲ್ಲಿ 5.4% ಇದ್ದದ್ದು, 2024-25ರಲ್ಲಿ 4.6% ಮತ್ತು 2025-26ರಲ್ಲಿ 2.1%ಕ್ಕೆ ಇಳಿಕೆಯಾಗಿದೆ ಎಂದಿದ್ದಾರೆ.
ಮುಂದುವರಿದು, ಪಶ್ಚಿಮ ಏಷ್ಯಾದ ಬಿಕ್ಕಟ್ಟು ಸೇರಿದಂತೆ ಜಾಗತಿಕ ಇಂಧನ, ಕಚ್ಚಾವಸ್ತು ಮತ್ತು ತರಕಾರಿ ಬೆಲೆಗಳ ಏರಿಕೆಯ ಪರಿಣಾಮ 2026-27ರ ಮೊದಲ ತ್ರೈಮಾಸಿಕದಲ್ಲಿ ಹಣದುಬ್ಬರ 3.9%ಕ್ಕೆ ಏರಿಕೆಯಾಗಿದೆ. ಆದರೂ ಇದು ಆರ್‌ಬಿಐ ನಿಗದಿಪಡಿಸಿರುವ 4% ಗುರಿಗಿಂತ ಕಡಿಮೆಯಾಗಿದೆ ಎಂದು ಸಚಿವರು ತಿಳಿದ್ದಾರೆ,(ಏಜೆನ್ಸೀಸ್​).