ಸಾಂದರ್ಭಿಕ ಚಿತ್ರ 
ದೇಶ

RR vs RCB; ಕ್ಯಾಪ್ಟನ್​ ಪಾಟಿದಾರ್ ಅರ್ಧಶತಕ; ರಾಜಸ್ಥಾನ್ ರಾಯಲ್ಸ್​ಗೆ 202ರನ್ ಗುರಿ ನೀಡಿದ ಆರ್​ಸಿಬಿ

ಗುವಾಹಟಿ: ಗುವಾಹಟಿಯಲ್ಲಿ ನಡೆಯುತ್ತಿರುವ ಐಪಿಎಲ್​ -2026ರ ಆರ್​ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್(RR vs RCB) ನಡುವೆ ಹೈವೋಲ್ಟೇಜ್ ಪಂದ್ಯದಲ್ಲಿ ನಾಯಕ ರಜತ್ ಪಾಟಿದಾರ್ ಅವರ ಅರ್ಧಶತಕದ ಪರಿಣಾಮ ಆರ್‌ಸಿಬಿ, 8 ವಿಕೆಟ್ ನಷ್ಟಕ್ಕೆ 201ರನ್​ಗಳ ಬೃಹತ್ ಮೊತ್ತ ಕಲೆ ಹಾಕಿ ರಾಜಸ್ಥಾನ್ ರಾಯಲ್ಸ್​ಗೆ 202ರನ್​ಗಳ ಗುರಿ ನೀಡಿದೆ.

ಪಾಟಿದಾರ್ ಕ್ಯಾಪ್ಟನ್ ಇನಿಂಗ್ಸ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ವಿರಾಟ್ ಕೊಹ್ಲಿ 16 ಎಸೆತದಲ್ಲಿ 32 ರನ್​ ಸಿಡಿಸಿ ರವಿ ಬಿಷ್ಣೋಯ್ ಅವರ ಗೂಗ್ಲಿಗೆ ಔಟಾದರು. ಆದರೆ ಕ್ಯಾಪ್ಟನ್​ ರಜತ್ ಪಾಟಿದಾರ್ ಕೇವಲ 40 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 63 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದ ಕುಸಿತದ ಹೊರತಾಗಿಯೂ ಪಾಟಿದಾರ್ ತಂಡಕ್ಕೆ ಆಸರೆಯಾದರು.
ಇನ್ನಿಂಗ್ಸ್‌ನ ಕೊನೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ವೆಂಕಟೇಶ್ ಅಯ್ಯರ್, ರಾಯಲ್ಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಸಂದೀಪ್ ಶರ್ಮಾ ಎಸೆದ ಕೊನೆಯ ಓವರ್‌ನಲ್ಲಿ 4, 6, 6 ಸಿಡಿಸಿ ಕೇವಲ 15 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ರಾಯಲ್ಸ್ ಬೌಲಿಂಗ್ ಮಿಂಚು

ರಾಜಸ್ಥಾನ್ ಪರ ರವಿ ಬಿಷ್ಣೋಯ್ 32 ರನ್‌ಗಳಿಗೆ 2 ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ ಮತ್ತು ಬ್ರಿಜೇಶ್ ಶರ್ಮಾ ತಲಾ ಎರಡು ವಿಕೆಟ್ ಪಡೆದು ಗಮನ ಸೆಳೆದರು. ರವೀಂದ್ರ ಜಡೇಜಾ ಕೂಡ ಒಂದು ವಿಕೆಟ್ ಕಿತ್ತು ಆರ್‌ಸಿಬಿಯ ರನ್ ಗತಿಗೆ ಬ್ರೇಕ್ ಹಾಕಿದರು.
ಪಂದ್ಯವು ತೀವ್ರ ಕುತೂಹಲ ಮೂಡಿಸಿದ್ದು, ಆರ್‌ಸಿಬಿಯ ಬೃಹತ್ ಮೊತ್ತವನ್ನು ರಾಯಲ್ಸ್ ಬ್ಯಾಟರ್‌ಗಳು ಹೇಗೆ ಮೆಟ್ಟಿ ನಿಲ್ಲುತ್ತಾರೆ ಎಂಬುದು ಕಾದು ನೋಡಬೇಕಿದೆ (ಏಜೆನ್ಸೀಸ್).