ಆಂಧ್ರಪ್ರದೇಶ: ತಿರುಪತಿಗೆ ಭೇಟಿ ನೀಡಿದ ವೇಳೆ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಕುರಿತು ನಟಿ, ಮಾಜಿ ಸಚಿವೆ ರೋಜಾ ಆಡಿದ ಮಾತುಗಳು ಸದ್ಯ ವಿವಾದಕ್ಕೆ ಕಾರಣವಾಗಿದೆ.
ಶನಿವಾರ (ಮೇ.09) ದೇಗುಲಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ರೋಜಾ, ತಮಿಳು ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ಪ್ರಸ್ತುತ ರಾಜಕೀಯ ಜೀವನ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರನ್ನೇ ಹೋಲುತ್ತದೆ. ವಿಜಯ್ ಅವರ ರಾಜಕೀಯ ಪ್ರಯಾಣದ ಪ್ರತಿ ಹಂತದಲ್ಲೂ ಜಗನ್ ಅವರನ್ನು ಫಾಲೋ ಮಾಡುತ್ತಿರುವುದು ಕಾಣುತ್ತಿದೆ ಎಂದರು.
ಆಂಧ್ರಪ್ರದೇಶದಲ್ಲಿ ಜಗನ್ ಅವರು ಏಕಾಂಗಿಯಾಗಿ ಹೋರಾಡಿ ಚುನಾವಣೆಯಲ್ಲಿ ಗೆದ್ದ ರೀತಿಯನ್ನು ಶ್ಲಾಘಿಸಿದ ನಟಿ, ಅದೇ ರೀತಿ ವಿಜಯ್ ಕೂಡ ಯಾವುದೇ ಮೈತ್ರಿಗಳಿಲ್ಲದೆ ಒಂಟಿಯಾಗಿ ಕಣಕ್ಕಿಳಿದು ತಮಿಳುನಾಡಿನಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ವಿಜಯ್ ಅವರಿಗೆ ಜನರ ಆಶೀರ್ವಾದ ಲಭಿಸಿದೆ. ವಿಶೇಷವಾಗಿ ವಿಜಯ್ ಅವರ ಪ್ರಚಾರ ಶೈಲಿಯು ಥೇಟ್ ಜಗನ್ ಅವರಂತೆಯೇ ಇದೆ ಎಂದಿದ್ದಾರೆ.
ಡ್ರೆಸ್ಸಿಂಗ್ ವಿಷಯದಲ್ಲಿ, ಭಾಷಣದ ಶೈಲಿಯಲ್ಲಿ ವಿಜಯ್ ಜಗನ್‌ರನ್ನು ಹೋಲುತ್ತಿದ್ದಾರೆ. ಡ್ರೆಸ್ ಕೋಡ್‌ನಲ್ಲಿ ಮಾತ್ರವಲ್ಲದೆ ಸಾರ್ವಜನಿಕ ಸಭೆಗಳಲ್ಲಿ ವಿಜಯ್ ಮಾತನಾಡುವ ವಿಧಾನದಲ್ಲೂ ಈ ವಿಷಯಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ. ತಮಿಳುನಾಡಿನ ಜನರು ವಿಜಯ್ ಸಿಎಂ ಆಗಬೇಕೆಂದು ಬಯಸಿದ್ದಾರೆ. ಅಲ್ಲಿ ಅವರಿಂದ ಉತ್ತಮ ಆಡಳಿತ ಬರಲಿ ಎಂದು ಆಶಿಸಿದರು,(ಏಜೆನ್ಸೀಸ್).