ಬಾಡಿ ಬಿಲ್ಡರ್ ರೋಹಿತ್ ಧನಕರ್
- ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದನ್ನು ನೋಡಿ ತಡೆಯಲು ಹೋದ ಬಾಡಿ ಬಿಲ್ಡರ್ ಹತ್ಯೆ
- ಹರಿಯಾಣ ರಾಜ್ಯದ ಭಿವಾನಿ ಜಿಲ್ಲೆಯಲ್ಲಿ ನಡೆದ ಅಮಾನವೀಯ ಘಟನೆ
- ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸ್ನೇಹಿತನ ಜತೆ ಭಿವಾನಿ ಜಿಲ್ಲೆಗೆ ತೆರಳಿದ್ದಾಗ ದುರ್ಘಟನೆ
ಚಂಡೀಗಢ: ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದನ್ನು ನೋಡಿ ತಡೆಯಲು ಹೋದ ಬಾಡಿ ಬಿಲ್ಡರ್ ( Bodybuilder ) ಹಾಗೂ ಜಿಮ್ ಟ್ರೈನರ್ನನ್ನು ಗುಂಪೊಂದು ಥಳಿಸಿ, ಕೊಲೆಗೈದಿರುವ ಅಮಾನವೀಯ ಘಟನೆ ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ನಡೆದಿದೆ.
ಮೃತನನ್ನು ರೋಹಿತ್ ಧನಕರ್ (26) ಎಂದು ಗುರುತಿಸಲಾಗಿದೆ. ಈತ ರೋಹ್ಟಕ್ ಜಿಲ್ಲೆಯ ಹುಮಾಯುನ್ಪುರ್ ಗ್ರಾಮದ ನಿವಾಸಿ. ರೋಹಿತ್ ವೃತ್ತಿಯಲ್ಲಿ ಜಿಮ್ ಟ್ರೈನರ್ ಹಾಗೂ ಬಾಡಿ ಬಿಲ್ಡರ್ ಆಗಿದ್ದ. ತಮ್ಮ ಸ್ನೇಹಿತ ಜತಿನ್ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹುಮಾಯೂನ್‌ಪುರದಿಂದ ಭಿವಾನಿ ಜಿಲ್ಲೆಗೆ ಸ್ನೇಹಿತನ ಜೊತೆ ಶುಕ್ರವಾರ ತೆರಳಿದ್ದ.
ಕುಟುಂಬದವರ ಪ್ರಕಾರ, ತಿಗದಾನ ಗ್ರಾಮದಲ್ಲಿ ಆರಂಭವಾದ ವರನ ಮೆರವಣಿಗೆ ತಡರಾತ್ರಿ ಮದುವೆ ಮಂಟಪಕ್ಕೆ ಬಂದಿತು. ಈ ವೇಳೆ ಅಲ್ಲಿದ್ದ ಕೆಲವು ಪುರುಷರು, ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದರು. ಅದನ್ನು ನೋಡಿದ ರೋಹಿತ್, ಅವರಿಗೆಲ್ಲ ವಾರ್ನಿಂಗ್ ನೀಡಿದರು. ಇದು ವಾಗ್ವಾದಕ್ಕೆ ಕಾರಣವಾಯಿತು. ಈ ವೇಳೆ ಕಿರುಕುಳ ನೀಡಿದವರು ಸ್ಥಳದಿಂದ ಹೊರಟುಹೋದರು.
ಮದುವೆ ಸಮಾರಂಭದ ನಂತರ, ರೋಹಿತ್ ಮತ್ತು ಜತಿನ್ ತಮ್ಮ ಕಾರಿನಲ್ಲಿ ಮನೆಗೆ ತೆರಳಿದರು. ಅವರ ಕಾರು ರೈಲ್ವೆ ಕ್ರಾಸಿಂಗ್‌ನಲ್ಲಿ ನಿಂತಾಗ, ಅವರ ಮೇಲೆ ಏಕಾಏಕಿ ದಾಳಿ ಮಾಡಲಾಯಿತು. ಕೋಲುಗಳು ಮತ್ತು ಇತರ ಆಯುಧಗಳನ್ನು ಹಿಡಿದು ಬಂದ ಸುಮಾರು 20 ಪುರುಷರು ರೋಹಿತ್ ಮತ್ತು ಜತಿನ್ನನ್ನು ಸುತ್ತುವರೆದು ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು ಎಂದು ರೋಹಿತ್ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಈ ವೇಳೆ ಇಬ್ಬರೂ ಪರಾರಿಯಾಗಲು ಪ್ರಯತ್ನಿಸಿದರು. ಈ ಪ್ರಯತ್ನದಲ್ಲಿ ಜತಿನ್ ಯಶಸ್ವಿ ಕೂಡ ಆದರು. ಆದರೆ, ರೋಹಿತ್ರನ್ನು ಹಿಡಿದುಕೊಂಡ ದುಷ್ಕರ್ಮಿಗಳ ಗುಂಪು, ಕೋಲು ಮತ್ತು ರಾಡ್‌ಗಳಿಂದ ಹಲ್ಲೆ ಮಾಡಿದರು. ಇದರಿಂದ ರೋಹಿತ್ ಗಂಭೀರವಾಗಿ ಗಾಯಗೊಂಡರು. ಗಾಯದ ಗುರುತುಗಳಿಲ್ಲದ ಅವನ ದೇಹದ ಒಂದೇ ಒಂದು ಭಾಗವು ಕೂಡ ಇರಲಿಲ್ಲ. ಅಷ್ಟರಮಟ್ಟಿಗೆ ಹಲ್ಲೆ ಮಾಡಿದ್ದರು ಎಂದು ಕುಟುಂಬ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಲ್ಲೆ ನಡೆಸಿದ ಬಳಿಕ ದಾಳಿಕೋರರು ಸ್ಥಳದಿಂದ ಓಡಿಹೋದರು. ಇದಾದ ನಂತರ, ಅಲ್ಲಿಗೆ ಹಿಂತಿರುಗಿದ ಜತಿನ್, ರೋಹಿತ್‌ನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಗಂಭೀರ ಸ್ಥಿತಿಯಲ್ಲಿದ್ದ ಕಾರಣ ವೈದ್ಯರ ಸಲಹೆಯಂತೆ ರೋಹಿತ್ರನ್ನು ರೋಹ್ಟಕ್‌ನ ಪಿಜಿಐಎಂಎಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರ ರಾತ್ರಿಯಿಡೀ ಪ್ರಯತ್ನಗಳ ಹೊರತಾಗಿಯೂ, ರೋಹಿತ್ ಶನಿವಾರ (ನ.29) ಕೊನೆಯುಸಿರೆಳೆದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಭಿವಾನಿ ಪೊಲೀಸರು ಪಿಜಿಐಎಂಎಸ್‌ಗೆ ತೆರಳಿ ವಿಚಾರಣೆ ನಡೆಸಿದರು. ಕುಟುಂಬದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಅಂದಹಾಗೆ, ರೋಹಿತ್ ಅವರು ವೃತ್ತಿಪರ ಬಾಡಿಬಿಲ್ಡರ್ ಆಗಿದ್ದರು ಮತ್ತು ರೋಹ್ಟಕ್‌ನ ಜಿಮ್ಖಾನಾ ಕ್ಲಬ್‌ನಲ್ಲಿ ತರಬೇತಿ ಪಡೆದ ಸದಸ್ಯರಾಗಿದ್ದರು. ರೋಹಿತ್ ಅಂತಾರಾಷ್ಟ್ರೀಯ ಪದಕ ವಿಜೇತರೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. 2018 ರಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದರು. ಅಲ್ಲದೆ, ಆಗಿನ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರೋಹಿತ್ ಅವರನ್ನು ಸನ್ಮಾನಿಸಿದ್ದರು. ಇದೀಗ ಮಗನನ್ನು ಕಳೆದುಕೊಂಡ ಕುಟುಂಬ ದುಃಖದಲ್ಲಿ ಮುಳುಗಿದೆ. ಹಲ್ಲೆಕೋರರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕೆಂದು ರೋಹಿತ್ ಅವರ ಸೋದರ ಮಾವ ರವಿ ಖಾಸ್ಸಾ ಮತ್ತು ಚಿಕ್ಕಪ್ಪ ಸತೀಶ್ ಧನಕ್ರ್ ಒತ್ತಾಯಿಸಿದ್ದಾರೆ. ಅಲ್ಲದೆ, ಇದೊಂದು ಯೋಜಿತ ಕೊಲೆ. ರೋಹಿತ್ ಅವರು ಮಹಿಳೆಯರ ಘನತೆಯ ಪರವಾಗಿ ನಿಂತು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು ಎಂದು ಹೇಳಿದ್ದಾರೆ, (ಏಜೆನ್ಸೀಸ್).