Rohit Sharma Slams Century
Rohit Sharma Slams Century: ಮುಂಬರುವ ಏಕದಿನ ವಿಶ್ವಕಪ್ ಆಡಲೇಬೇಕು ಎಂದು ಪಣತೊಟ್ಟವರಂತೆ ನಾ ಮುಂದು ತಾ ಮುಂದು ಎಂದು ಅದ್ಭುತ ಬ್ಯಾಟಿಂಗ್ ನಡೆಸುತ್ತಿರುವ ರೋ-ಕೋ ಜೋಡಿಯ ಆರ್ಭಟ ವಿಜಯ್ ಹಜಾರೆ ಟೂರ್ನಿಯಲ್ಲಿ ಮುಂದುವರೆದಿದ್ದು, ಈ ಇಬ್ಬರು ದಿಗ್ಗಜರು ಭರ್ಜರಿ ಶತಕ ಬಾರಿಸುವ ಮೂಲಕ ನಮ್ಮ ರನ್ ದಾಹ ತೀರಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಟೀಕಾಕಾರರಿಗೆ ತಲುಪಿಸಿದ್ದಾರೆ.
ಇಂದು ( ಡಿ.24 ಬುಧವಾರ) ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿದಿರುವ ಒಡಿಐ ನಂ 1 ಬ್ಯಾಟರ್ ರೋಹಿತ್ ಶರ್ಮಾ ಭರ್ಜರಿ ಶತಕ ಬಾರಿಸಿದ್ದಾರೆ. 62 ಎಸೆತಗಳನ್ನು ಎದುರಿಸಿದ ಹಿಟ್ ಮ್ಯಾನ್ ಎಂಟು ಬೌಂಡರಿ ಮತ್ತು ಎಂಟು ಸಿಕ್ಸರ್ ಬಾರಿಸುವ ಮೂಲಕ ಸಿಕ್ಕಿಂ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 50 ಓವರ್‌ಗಳ ಮಾದರಿಯಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿರುವ ರೋಹಿತ್‌ಗೆ ಲಿಸ್ಟ್ ಎನಲ್ಲಿ ಇದು 37 ನೇ ಶತಕವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸಿಕ್ಕಿಂ ತಂಡವು 7 ವಿಕೆಟ್‌ಗಳಿಗೆ 236 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ವಿಕೆಟ್ ಕೀಪರ್ ಆಶಿಶ್ ಥಾಪ 87 ಎಸೆತಗಳಲ್ಲಿ 79 ರನ್ ಗಳಿಸಿದರು. ಮುಂಬೈ ಪರ ದಾಳಿಗಿಳಿದ ಶಾರ್ದೂಲ್ ಠಾಕೂರ್ ಆರು ಓವರ್‌ಗಳಲ್ಲಿ 19 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಬಳಿಸಿದರು.
ಕೊಹ್ಲಿ ಮಿಂಚು..
ಇತ್ತ ಸುಮಾರು 15 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಗೆ ಮರಳಿರುವ ವಿರಾಟ್ ಕೊಹ್ಲಿ, ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ನಿಲ್ಲಿಸಿದ್ದ ಆಟವನ್ನು ಅಲ್ಲಿಂದಲೇ ಮುಂದುವರೆಸಿದರು. ಆಂಧ್ರಪ್ರದೇಶ ನೀಡಿದ್ದ 299 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಕಿಂಗ್, 94 ಎಸೆತಗಳಲ್ಲಿ 118 ರನ್ ಗಳಿಸಿದರು. ಎಚ್ಚರಿಕೆ ಆಟಕ್ಕೆ ಗಮನೀಡಿದ ಕೊಹ್ಲಿ, ಸ್ಟ್ರೈಕ್ ರೊಟೇಟ್ ಮೂಲಕ ರನ್ ಗತಿ ಏರಿಸಿದರು. 37 ರನ್‌ಗಳು ಸಿಂಗಲ್ಸ್ ಮೂಲಕವೇ ಬಂದಿದ್ದು ವಿಶೇಷ.
ಈ ಪಂದ್ಯ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದ್ದು, ಸಚಿನ್ ತೆಂಡೂಲ್ಕರ್ ಬಳಿಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16,000 ರನ್‌ಗಳನ್ನು ದಾಟಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್, ಈ ಸಾಧನೆ ಮಾಡಿದ ಒಟ್ಟಾರೆ ಒಂಬತ್ತನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
101 ಎಸೆತಗಳನ್ನು ಎದುರಿಸಿದ ಕೊಹ್ಲಿ, 14 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 131 ರನ್ ಸಿಡಿಸಿ, ಅಂತಿಮವಾಗಿ ಪಿವಿಎಸ್‌ಎನ್ ರಾಜುಗೆ ವಿಕೆಟ್ ಒಪ್ಪಿಸಿ ಹೊರನಡೆದರು. ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಅಂತರರಾಷ್ಟ್ರೀಯ ಪಂದ್ಯಗಳ ನಡುವಿನ ವಿರಾಮದ ಸಮಯದಲ್ಲಿ ಆಟಗಾರರು ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗವಹಿಸುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ(ಏಜೆನ್ಸೀಸ್).