Rohit Sharma | ರೋಹಿತ್ ಶರ್ಮಾಗೆ 'ಪದ್ಮಶ್ರೀ' ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು  
ದೇಶ

ಹಿಟ್‌ಮ್ಯಾನ್‌ಗೆ ಒಲಿದ 'ಪದ್ಮಶ್ರೀ' ಗೌರವ: ರಾಷ್ಟ್ರಪತಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ ರೋಹಿತ್ ಶರ್ಮಾ! | Rohit Sharma

Rohit Sharma: ಭಾರತ ಕ್ರಿಕೆಟ್ ತಂಡದ ದಿಗ್ಗಜ ಕ್ರಿಕೆಟಿಗ ರೋಹಿತ್ ಶರ್ಮಾ ಅವರು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಗೌರವವನ್ನು ಸ್ವೀಕರಿಸಿದರು. ಕ್ರಿಕೆಟ್ ಕ್ಷೇತ್ರಕ್ಕೆ ಅವರು ನೀಡಿರುವ ಅನುಪಮ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ರೋಹಿತ್ ಶರ್ಮಾ ಅವರ ಐತಿಹಾಸಿಕ ಪಯಣ

ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್‌ನ ದಂತಕಥೆಯಾಗಿ ಹೊರಹೊಮ್ಮಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ತಂಡವು 2024ರ ಟಿ20 ವಿಶ್ವಕಪ್ ಹಾಗೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಐತಿಹಾಸಿಕ ಜಯ ದಾಖಲಿಸಿದೆ. ಇದಕ್ಕೂ ಮುನ್ನ 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದಲ್ಲೂ ಅವರು ಭಾಗವಾಗಿದ್ದರು. 2023ರ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಫೈನಲ್‌ವರೆಗೆ ಮುನ್ನಡೆಸಿದ್ದ ರೋಹಿತ್, ಇಡೀ ಟೂರ್ನಿಯಲ್ಲಿ 597 ರನ್ ಗಳಿಸಿ ಅಬ್ಬರಿಸಿದ್ದರು. ಅಲ್ಲದೆ, 2019ರ ವಿಶ್ವಕಪ್‌ನಲ್ಲಿ ದಾಖಲೆಯ 5 ಶತಕಗಳೊಂದಿಗೆ 648 ರನ್ ಸಿಡಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.
ವಿಜಯ್ ಅಮೃತ್‌ರಾಜ್ ಮತ್ತು ಸವಿತಾ ಪುನಿಯಾಗೂ ಗೌರವ
ಇದೇ ಸಮಾರಂಭದಲ್ಲಿ ಭಾರತದ ಟೆನ್ನಿಸ್ ದಂತಕಥೆ ವಿಜಯ್ ಅಮೃತ್‌ರಾಜ್ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ನೀಡಿ ಗೌರವಿಸಲಾಯಿತು. ಟೆನ್ನಿಸ್ ಕ್ರೀಡೆಗೆ ಅವರು ನೀಡಿದ ಅತ್ಯುತ್ತಮ ಸೇವೆಗಾಗಿ ಈ ಪ್ರಶಸ್ತಿ ಒಲಿದಿದೆ. ಮತ್ತೊಂದೆಡೆ, ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ಸವಿತಾ ಪುನಿಯಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿ, ಭಾರತ ತಂಡ 4ನೇ ಸ್ಥಾನ ಪಡೆಯುವಲ್ಲಿ ಗೋಲ್‌ಕೀಪರ್ ಸವಿತಾ ಪ್ರಮುಖ ಪಾತ್ರ ವಹಿಸಿದ್ದರು. ಇವರನ್ನು ಹಾಕಿಯ ಗ್ರೇಟ್ ವಾಲ್ ಆಫ್ ಇಂಡಿಯಾ ಎಂದೇ ಕರೆಯಲಾಗುತ್ತದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸವಿತಾ ಪುನಿಯಾ, ಹಾಕಿ ಆಡುವುದೇ ಒಂದು ದೂರದ ಕನಸಾಗಿದ್ದ ದಿನಗಳಿಂದ ಇಂದು ನನ್ನ ಕುಟುಂಬದೊಂದಿಗೆ ರಾಷ್ಟ್ರಪತಿ ಭವನಕ್ಕೆ ಬಂದು ಪ್ರಶಸ್ತಿ ಸ್ವೀಕರಿಸುತ್ತಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ ಎಂದು ಹರ್ಷ ವ್ಯಕ್ತಪಡಿಸಿದರು(ಏಜೆನ್ಸೀಸ್​​).