Rohit Sharma | ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಮತ್ತೊಂದು ದಾಖಲೆ ಬರೆದ ರೋಹಿತ್ ಶರ್ಮಾ
ಜೈಪುರ: ಮುಂಬರುವ ಏಕದಿನ ವಿಶ್ವಕಪ್ ಆಡಲೇಬೇಕು ಎಂದ ಹಠಕ್ಕೆ ಬಿದ್ದವರಂತೆ ಬ್ಯಾಟಿಂಗ್ ನಡೆಸುತ್ತಿರುವ ರೋಹಿತ್ ಶರ್ಮಾ, ಬುಧವಾರ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಜಯ್ ಹಜಾರೆ ಟೂರ್ನಿಯಲ್ಲಿ ಮುಂಬೈ ಪರ ಕಣಕ್ಕಿಳಿದ ಹಿಟ್ ಮ್ಯಾನ್,ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದರು. ಈ ಶತಕದ ಮೂಲಕ ರೋಹಿತ್, ಲಿಸ್ಟ್ ಎ ಮಾದರಿಯಲ್ಲಿ ಒಂಬತ್ತು ಬಾರಿ 150+ ರನ್ ಗಳಿಸಿರುವ ವಾರ್ನರ್ ದಾಖಲೆಯನ್ನು ಸರಿಗಟ್ಟಿದರು.
ಸಿಕ್ಕಿಂ ನೀಡಿದ್ದ 237 ರನ್‌ಗಳ ಗುರಿಯನ್ನು 117 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿದ ಮುಂಬೈ ತಂಡ, 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಅತ್ಯುತ್ತಮ ಪ್ರದರ್ಶನ ನೀಡಿದ ರೋಹಿತ್ 18 ಬೌಂಡರಿ, ಒಂಬತ್ತು ಸಿಕ್ಸರ್‌ಗಳೊಂದಿಗೆ 155 ರನ್ ಬಾರಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ರೋಹಿತ್, ಕೇವಲ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ತಮ್ಮ ಎರಡನೇ ಐವತ್ತು ರನ್ ಬಾರಿಸಲು ತೆಗೆದುಕೊಂಡಿದ್ದು 35 ಎಸೆತ.
ಮೊದಲು ಬ್ಯಾಟಿಂಗ್ ಮಾಡಿದ ಸಿಕ್ಕಿಂ ತಂಡವು 7 ವಿಕೆಟ್‌ಗಳಿಗೆ 236 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ವಿಕೆಟ್ ಕೀಪರ್ ಆಶಿಶ್ ಥಾಪ 87 ಎಸೆತಗಳಲ್ಲಿ 79 ರನ್ ಗಳಿಸಿದರು. ಮುಂಬೈ ಪರ ದಾಳಿಗಿಳಿದ ಶಾರ್ದೂಲ್ ಠಾಕೂರ್ ಆರು ಓವರ್‌ಗಳಲ್ಲಿ 19 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಬಳಿಸಿದರು. ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಅಂತರರಾಷ್ಟ್ರೀಯ ಪಂದ್ಯಗಳ ನಡುವಿನ ವಿರಾಮದ ಸಮಯದಲ್ಲಿ ಆಟಗಾರರು ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗವಹಿಸುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ(ಏಜೆನ್ಸೀಸ್).