Rohit Sharma  
ದೇಶ

ರೋಹಿತ್ ಶರ್ಮಾ ಮುಡಿಗೆ ಮತ್ತೊಂದು ಗರಿ! ಹಿಟ್‌ಮ್ಯಾನ್‌ಗೆ ಗೌರವ ಡಾಕ್ಟರೇಟ್ ಘೋಷಿಸಿದ ವಿವಿ.. Rohit Sharma

ಮುಂಬೈ: ( Rohit Sharma )  ಭಾರತದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ  ಕ್ರಿಕೆಟ್ ಜಗತ್ತಿಗೆ ನೀಡಿದ ವಿಶಿಷ್ಟ ಸೇವೆ ಮತ್ತು ಅತ್ಯುತ್ತಮ ನಾಯಕತ್ವ ಕೌಶಲ್ಯವನ್ನು ಗುರುತಿಸಿ ಪುಣೆಯ ಅಜಿಂಕ್ಯ ಡಿವೈ ಪಾಟೀಲ್ ವಿಶ್ವವಿದ್ಯಾಲಯ (ಎಡಿವೈಪಿಯು) ಗೌರವ ಡಾಕ್ಟರೇಟ್ (ಡಾಕ್ಟರ್ ಆಫ್ ಲೆಟರ್ಸ್ - ಡಿ.ಲಿಟ್.) ಪದವಿಯನ್ನು ನೀಡಲಿದೆ.
ಶನಿವಾರ ನಡೆಯಲಿರುವ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ರೋಹಿತ್ ಶರ್ಮಾ ಈ ಗೌರವವನ್ನು ಸ್ವೀಕರಿಸಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಕುಲಪತಿ ಡಾ. ಅಜಿಂಕ್ಯ ಡಿ.ವೈ. ಪಾಟೀಲ್ ವಹಿಸಲಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ರೋಹಿತ್ ಅವರ ಸಾಧನೆಗಳು ಮತ್ತು ವಿಶ್ವ ವೇದಿಕೆಯಲ್ಲಿ ಅವರು ಪ್ರದರ್ಶಿಸಿದ ನಾಯಕತ್ವದ ಗುಣಗಳನ್ನು ಗುರುತಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ರೋಹಿತ್ ಶರ್ಮಾ ಅವರ ನೇತೃತ್ವದಲ್ಲಿ ಭಾರತ ತಂಡವು 2024ರ ಟಿ20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಅವರ ಶಾಂತ ಸ್ವಭಾವದ ನಾಯಕತ್ವ ಮತ್ತು ಕ್ರಿಕೆಟ್ ಲೋಕದ ಸಾಧನೆಗಾಗಿ ಈ ಗೌರವ ನೀಡಲಾಗಿದೆ.
"ರೋಹಿತ್ ಶರ್ಮಾ ಅವರು ಕೇವಲ 'ಹಿಟ್‌ಮ್ಯಾನ್' ಮಾತ್ರವಲ್ಲ, ಅವರಲ್ಲಿರುವ ಸ್ಥಿರತೆ ಮತ್ತು ವ್ಯೂಹರಚನೆಯ ಗುಣಗಳು ಇಂದಿನ ತಲೆಮಾರಿನ ಪದವೀಧರರಿಗೆ ಸ್ಫೂರ್ತಿಯಾಗಿವೆ" ಎಂದು ವಿಶ್ವವಿದ್ಯಾಲಯ ತಿಳಿಸಿದೆ.
38 ವರ್ಷದ ರೋಹಿತ್ ಶರ್ಮಾ ಈಗಾಗಲೇ ಟೆಸ್ಟ್ ಮತ್ತು ಟಿ20 ಮಾದರಿಗಳಿಂದ ನಿವೃತ್ತಿ ಘೋಷಿಸಿದ್ದಾರೆ, ಆದರೆ ಏಕದಿನ ಮಾದರಿಯಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ. ಹಿಟ್‌ಮ್ಯಾನ್ ನಾಯಕತ್ವದಲ್ಲಿ ಭಾರತ ತಂಡ 2024 ರ ಟಿ20 ವಿಶ್ವಕಪ್ ಗೆದ್ದಿದೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಪ್ರಶಸ್ತಿಗಳಿಗೆ ಮುನ್ನಡೆಸುವ ಮೂಲಕ ರೋಹಿತ್ ಅತ್ಯಂತ ಯಶಸ್ವಿ ನಾಯಕ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಗೌರವ ಡಾಕ್ಟರೇಟ್ ಪದವಿ ರೋಹಿತ್ ಅವರ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲಾಗಲಿದ್ದು, ಅವರು ಈ ಹಿಂದೆ ಅರ್ಜುನ ಪ್ರಶಸ್ತಿ (2015) ಮತ್ತು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ (2020) ನಂತಹ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.