Rohit Pawar | ಕರ್ಜತ್-ಜಮಖೇಡ್ ವಿಧಾನಸಭಾ ಕ್ಷೇತ್ರದ ಶಾಸಕ ರೋಹಿತ್ ಪವಾರ್
ಪುಣೆ: ಇತ್ತೀಚೆಗೆ ನಡೆದ ವಿಮಾನ ದುರಂತದಲ್ಲಿ ನಿಧನರಾದ ಅಜಿತ್ ಪವಾರ್ ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ಎಲ್ಲರಿಗೂ ಅನುಮಾನಗಳಿದ್ದು, ಫೆಬ್ರವರಿ 10 ರಂದು ಈ ವಿಷಯವಾಗಿ ವಿವರವಾದ ಪ್ರಸ್ತುತಿಯನ್ನು ನೀಡುವುದಾಗಿ ಎನ್‌ಸಿಪಿ (ಎಸ್‌ಪಿ) ನಾಯಕ ರೋಹಿತ್ ಪವಾರ್ (Rohit Pawar) ಹೇಳಿದ್ದಾರೆ.
ಬಾರಾಮತಿಯಲ್ಲಿ ನಡೆದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ರೋಹಿತ್ ಪವಾರ್, ಎನ್‌ಸಿಪಿ ಬಣಗಳು ಒಂದಾಗಬೇಕೆಂದು ಎನ್ನುವುದು ಅಜಿತ್ ಪವಾರ್ ಬಯಕೆಯಾಗಿತ್ತು, ಅವರ ಆಸೆಯಂತೆ ವಿಲೀನದ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ತಿಳಿಸಿದರು.
ಎಲ್ಲರೂ ಒಂದೇ ಕುಟುಂಬವಾಗಿ ಒಟ್ಟಿಗೆ ಸೇರಬೇಕೆಂದು ಅಜಿತ್ ದಾದಾ ಪ್ರಾಮಾಣಿಕವಾಗಿ ಹಾರೈಸಿದರು, ಅದೇ ರೀತಿಯಲ್ಲಿ ಇಂದು ಎಲ್ಲರೂ ಒಟ್ಟಿಗೆ ಬಂದಿದ್ದಾರೆ. ದಾದಾ ಪ್ರಯತ್ನಗಳನ್ನು ಮಾಡಿದ್ದರು. ನಾವು ಅದನ್ನು ಮುಂದುವರಿಸುತ್ತೇವೆ ಎಂದು ರೋಹಿತ್ ಹೇಳಿದರು.
ವಿಲೀನ ಏಕೆ ಆಗಬೇಕಿತ್ತು..? ಅಜಿತ್ ದಾದಾ ನಿಜವಾದ ಉದ್ದೇಶವೇನು..? ಅದು ರಾಜಕೀಯ ಆಯಾಮವನ್ನು ಹೊಂದಿತ್ತೋ ಅಥವಾ ಭಾವನಾತ್ಮಕ ಆಯಾಮವನ್ನು ಹೊಂದಿತ್ತೋ? ಎನ್ನುವುದನ್ನು ಫೆಬ್ರವರಿ 12 ರಂದು ವಿವರಿಸುವುದಾಗಿ ಶರದ್ ಪವಾರ್ ಮೊಮ್ಮಗನೂ ಆಗಿರುವ ಶಾಸಕ ರೋಹಿತ್ ತಿಳಿಸಿದ್ದಾರೆ.
ಎಲ್ಲರಿಗೂ ಪ್ರಶ್ನೆಗಳು ಮತ್ತು ಅನುಮಾನಗಳಿವೆ.
ಅಪಘಾತದ ಬಗ್ಗೆ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಪ್ರಶ್ನೆಗಳು ಮತ್ತು ಅನುಮಾನಗಳಿವೆ. ಫೆಬ್ರವರಿ 10 ರಂದು ಮುಂಬೈನಲ್ಲಿ ನಾನು ಪ್ರಸ್ತುತಿ ನೀಡುತ್ತೇನೆ. ಅಪಘಾತ ಏಕೆ ಸಂಭವಿಸಿತು ಮತ್ತು ಹೇಗೆ ಸಂಭವಿಸಿರಬಹುದು ಎನ್ನುವ ವಿಷಯಗಳ ಬಗ್ಗೆ ಚರ್ಚಿಸುವುದಾಗಿ ರೋಹಿತ್ ಪವಾರ್ ಹೇಳಿದ್ದಾರೆ.
ಅಜಿತ್ ಪವಾರ್ ಪಕ್ಷದ ಕಾರ್ಯಕರ್ತರ ಒಳಿತನ್ನು ಬಯಸುತ್ತಿದ್ದರು
ಅಹಲ್ಯಾನಗರ ಜಿಲ್ಲೆಯ ಕರ್ಜತ್-ಜಮಖೇಡ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ರೋಹಿತ್ ಪವಾರ್, ಅಜಿತ್ ಪವಾರ್ ಯಾವಾಗಲೂ ಪಕ್ಷದ ಕಾರ್ಯಕರ್ತರ ಒಳಿತನ್ನು ಬಯಸುತ್ತಿದ್ದರು ಮತ್ತು ಅವರ ಸಿದ್ಧಾಂತವನ್ನು ಹಂಚಿಕೊಂಡವರು ಆಯ್ಕೆಯಾಗಬೇಕೆಂದು ಬಯಸುತ್ತಿದ್ದರು ಎಂದು ಹೇಳಿದರು.
ಘಟನೆಯ ಹಿನ್ನಲೆ
ಜಿಲ್ಲಾ ಪರಿಷತ್ ಚುನಾವಣೆಯ ಪ್ರಚಾರ ಸಭೆಗಳು ಬಾರಾಮತಿಯಲ್ಲಿ ನಡೆಯುತ್ತಿರುವ ಹಿನ್ನಲೆ ಅಜಿತ್ ಪವಾರ್ ಬುಧವಾರ (ಜ.28) ಬೆಳಿಗ್ಗೆ ಮುಂಬೈನಿಂದ ವಿಶೇಷ ವಿಮಾನದಲ್ಲಿ ಬಾರಾಮತಿಗೆ ತೆರಳುತ್ತಿದ್ದರು. ವಿಮಾನವು ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದಾಗ, ಹಠಾತ್ ತಾಂತ್ರಿಕ ದೋಷ ಸಂಭವಿಸಿದೆ. ಪೈಲಟ್ ನಿಯಂತ್ರಣ ಕಳೆದುಕೊಂಡು ವಿಮಾನ ಅಪಘಾತಕ್ಕೀಡಾಯಿತು.
ಪ್ರಾಥಮಿಕ ವರದಿಗಳ ಪ್ರಕಾರ, ಅಜಿತ್ ಪವಾರ್ ಸೇರಿದಂತೆ ಎಲ್ಲಾ ಆರು ಮಂದಿ ಪ್ರಯಾಣಿಕರು ಈ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮೂಲಗಳು ದೃಢಪಡಿಸಿವೆ(ಏಜೆನ್ಸೀಸ್).