Rohit Pawar meets Rahul | ರಾಹುಲ್ ಗಾಂಧಿಗೆ ದಾಖಲೆ ನೀಡಿದ ರೋಹಿತ್ ಪವಾರ್! 
ದೇಶ

ಇಷ್ಟು ದೊಡ್ಡ ಘಟನೆಯಾದ್ರೂ ಎಫ್‌ಐಆರ್ ಯಾಕಿಲ್ಲ..? ಅಜಿತ್ ದಾದಾ ನಿಧನದ ಬಗ್ಗೆ ರಾಹುಲ್ ಗಾಂಧಿಗೂ ಅನುಮಾನ! | Rohit Pawar meets Rahul

ನವದೆಹಲಿ: ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿಗೆ ಸಂಬಂಧಪಟ್ಟ ವಿಷಯ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಬಾರಾಮತಿ ವಿಮಾನ ಅಪಘಾತದ ಹಿಂದೆ ಸಂಚು ಅಡಗಿದೆ ಎಂಬ ಗಂಭೀರ ಶಂಕೆಯನ್ನು ವ್ಯಕ್ತಪಡಿಸಿರುವ ಎನ್‌ಸಿಪಿ (ಶರದ್ ಪವಾರ್) ಬಣದ ಶಾಸಕ ಮತ್ತು ಸಂಬಂಧಿ ರೋಹಿತ್ ಪವಾರ್, ಗುರುವಾರ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ (Rohit Pawar meets Rahul) ಮಹತ್ವದ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಇದುವರೆಗೆ ಎಫ್‌ಐಆರ್ ದಾಖಲಾಗಿಲ್ಲವೇಕೆ? ಎಂದು ರಾಹುಲ್ ಗಾಂಧಿ ಕಿಡಿ

ಶಾಸಕ ರೋಹಿತ್ ಪವಾರ್ ಭೇಟಿಯ ಬಳಿಕ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರಕರಣವು ಅತ್ಯಂತ ಸಂಶಯಾಸ್ಪದವಾಗಿದೆ ಎಂದಿದ್ದಾರೆ. ಘಟನೆಯ ಗಾಂಭೀರ್ಯತೆ ಈ ಮಟ್ಟಿಗಿದ್ದರು ಇದುವರೆಗೆ ಯಾವುದೇ ಎಫ್‌ಐಆರ್ (FIR) ದಾಖಲಾಗಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಕಾನೂನಿನ ಮೂಲಭೂತ ಪ್ರಕ್ರಿಯೆಗಳನ್ನೇ ಇಲ್ಲಿ ಪಾಲಿಸಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯ ಅಗತ್ಯವಿದೆ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ಅಪಘಾತದ ಸುತ್ತ ಅನುಮಾನದ ಹುತ್ತ
ಜನವರಿ 28ರಂದು ಮುಂಜಾನೆ ಮುಂಬೈನಿಂದ ಹೊರಟಿದ್ದ ಸಣ್ಣ ಚಾರ್ಟರ್ಡ್ ವಿಮಾನವು ಬಾರಾಮತಿ ವಿಮಾನ ನಿಲ್ದಾಣದ ಬಳಿ ಇಳಿಯುವ ವೇಳೆ ಪತನಗೊಂಡಿತ್ತು. ಈ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದರು. ಘಟನೆಯು ಕೇವಲ ತಾಂತ್ರಿಕ ದೋಷದಿಂದ ಸಂಭವಿಸಿದ್ದಲ್ಲ ಎಂಬುದು ರೋಹಿತ್ ಪವಾರ್ ವಾದ.
ಈ ಕುರಿತು ವಿವಿಧ ಮೂಲಗಳಿಂದ ತಾವು ಸಂಗ್ರಹಿಸಿರುವ ಸಾಕ್ಷ್ಯಾಧಾರಗಳನ್ನೊಳಗೊಂಡ ವರದಿಯನ್ನು ರಾಹುಲ್ ಗಾಂಧಿಗೆ ನೀಡಿರುವ ರೋಹಿತ್, ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುವಂತೆ ವಿನಂತಿಸಿದ್ದಾರೆ ಎನ್ನಲಾಗಿದೆ(ಏಜೆನ್ಸೀಸ್​).