ದೆಹಲಿ: ಪ್ರಿಯಾಂಕಾ ಗಾಂಧಿ ಭಾರತದ ಪ್ರಧಾನಿಯಾಗಿ ನೋಡಲು ಅನೇಕರು ಬಯಸಿದ್ದು, ಈ ದೇಶದಲ್ಲಿ ನೆಲದ ಮೇಲೆ ಅಗತ್ಯವಿರುವದನ್ನು ಬದಲಾಯಿಸುವಲ್ಲಿ ಉಜ್ವಲ ಭವಿಷ್ಯವಿದೆ ಎನ್ನುವುದು ನನ್ನ ನಂಬಿಕೆ ಎಂದು ಅವರ ಪತಿ ರಾಬರ್ಟ್ ವಾದ್ರಾ ಹೇಳಿದ್ದಾರೆ.
ಪ್ರಿಯಾಂಕಾಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ, ಈ ವಿಷಯ ಬಂದಾಗ ಎಲ್ಲರ ಒಪ್ಪಿಗೆ ಮುಖ್ಯವಾಗುತ್ತದೆ, ಜನರು ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ, ಸಮಯ ಬಂದಾಗ ಇದರ ಬಗ್ಗೆ ಚರ್ಚಿಸೋಣ ಎಂದು ಹೇಳಿದರು.
ಇಮ್ರಾನ್ ಮಸೂದ್ ಹೇಳಿಕೆಗೆ ರಾಬರ್ಟ್ ವಾದ್ರಾ ಪ್ರತಿಕ್ರಿಯೆ
ಪ್ರಿಯಾಂಕಾ ಗಾಂಧಿ, ಅವರ ಅಜ್ಜಿ ಇಂದಿರಾ ಗಾಂಧಿಯವರಂತೆ ಬಲಿಷ್ಠ ಪ್ರಧಾನಿಯಾಗುತ್ತಾರೆ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಹೇಳಿರುವ ವರದಿಗಳಿಗೆ ವಾದ್ರಾ ಪ್ರತಿಕ್ರಿಯೆ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರು ಕಿರುಕುಳ ಎದುರಿಸುತ್ತಿರುವ ಪರಿಸ್ಥಿತಿಯ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಸೂದ್ ಮಾತನಾಡುತ್ತಾ, ಪ್ರಿಯಾಂಕಾ ಗಾಂಧಿ ಉತ್ತಮ ಪ್ರಧಾನಿಯಾಗುತ್ತಾರೆ ಮತ್ತು ಇಂದಿರಾ ಗಾಂಧಿ ರೀತಿಯಲ್ಲಿ ಆಡಳಿತ ನಡೆಸುತ್ತಾರೆ ಎಂದು ಹೇಳಿದರು.
ತನ್ನ ಅಜ್ಜಿಯಿಂದ ತುಂಬಾ ಕಲಿತಿದ್ದಾಳೆ
ಪ್ರಿಯಾಂಕ ತಮ್ಮ ಅಜ್ಜಿ (ಇಂದಿರಾ ಗಾಂಧಿ), ಅವರ ತಂದೆ (ರಾಜೀವ್ ಗಾಂಧಿ), ತಾಯಿ ಸೋನಿಯಾ ಮತ್ತು ಸಹೋದರ (ರಾಹುಲ್ ಗಾಂಧಿ) ಅವರಿಂದ ಕೂಡ ಬಹಳಷ್ಟು ಕಲಿತಿದ್ದಾರೆ, ಅವರು ಮಾತನಾಡುವಾಗ, ತಮ್ಮ ಹೃದಯದಿಂದ ಮಾತನಾಡುತ್ತಾರೆ. ಕೇಳಬೇಕಾದ ವಿಷಯಗಳ ಬಗ್ಗೆ ಮಾತ್ರ ಬೆಳಕು ಚೆಲ್ಲುತ್ತಾರೆ, ಅವುಗಳ ಬಗ್ಗೆಯೇ ಚರ್ಚಿಸುತ್ತಾರೆ ಎಂದು ರಾಬರ್ಟ್ ವಾದ್ರಾ ಪಿಟಿಐಗೆ ತಿಳಿಸಿದರು. ಚುನಾವಣೆಯಲ್ಲಿ ಸರಣಿ ಸೋಲುಗಳಿಂದ ಬಳಲಿರುವ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ನೀಡಲು ಪ್ರಿಯಾಂಕಾ ಗಾಂಧಿ ಅನಿವಾರ್ಯ, ಅವರೇ ಪಕ್ಷದ ನಾಯಕತ್ವವಹಿಸಿಕೊಳ್ಳಬೇಕೆಂಬುದು ಅನೇಕ ಹಿರಿಯ ನಾಯಕರ ಅಭಿಪ್ರಾಯ.
ಕಾಂಗ್ರೆಸ್ಗೆ ರಾಹುಲ್ ಮೇಲೆ ನಂಬಿಕೆ ಇಲ್ಲ ಬಿಜೆಪಿ ವ್ಯಂಗ್ಯ
ಮಸೂದ್ ಮಾತಿಗೆ ಪ್ರತಿಕ್ರಿಯಿಸಿದ ಬಿಜೆಪಿ, ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ವ್ಯಂಗ್ಯವಾಡಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಶಹಜಾದ್ ಪೂನವಾಲ್ಲಾ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು ರಾಹುಲ್ ಗಾಂಧಿಯ ಮೇಲೆ ಇನ್ನು ಮುಂದೆ ನಂಬಿಕೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿಯವರ ಮೇಲೆ ವಿಶ್ವಾಸವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಲು ಕಾಂಗ್ರೆಸ್ ನಾಯಕರು ಈಗ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ಅವರ ಪತಿ ರಾಬರ್ಟ್ ವಾದ್ರಾ ಈ ಕ್ರಮವನ್ನು ಬೆಂಬಲಿಸುತ್ತಿದ್ದಾರೆ ಎಂದು ಪೂನವಾಲ್ಲಾ ತಿಳಿಸಿದ್ದಾರೆ. ಅಲ್ಲದೆ, ಇದು ರಾಹುಲ್ ಗಾಂಧಿ ಸಾರ್ವಜನಿಕ ಬೆಂಬಲವನ್ನು ಮಾತ್ರವಲ್ಲದೆ ಅವರ ಪಕ್ಷದೊಳಗಿನ ಬೆಂಬಲವನ್ನೂ ಕಳೆದುಕೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ಶಹಜಾದ್ ಪೂನವಾಲ್ಲಾ ತಿಳಿಸಿದ್ದಾರೆ(ಏಜೆನ್ಸೀಸ್).