Senior advocate Balwant Singh Walia
- ಕುರುಕ್ಷೇತ್ರದ ಥಾನೇಸರ್ ನಗರದಲ್ಲಿ ನಾಲ್ವರು ದುಷ್ಕರ್ಮಿಗಳಿಂದ ದರೋಡೆ.
- ಹಿರಿಯ ವಕೀಲ ಬಲವಂತ್ ಸಿಂಗ್ ವಾಲಿಯಾ ಹಾಗೂ ಅವರ ಪತ್ನಿಗೆ ಬೆದರಿಕೆ ಹಾಕಿ ದರೋಡೆ.
- ಅಂದಾಜು ರೂ. 3.15 ಕೋಟಿ ಮೌಲ್ಯದ ನಗದು, ಚಿನ್ನ-ಬೆಳ್ಳಿ ಆಭರಣಗಳು ಹಾಗೂ ಲೈಸೆನ್ಸ್‌ಡ್ ರಿವಾಲ್ವರ್ ಲೂಟಿ.
ಕುರುಕ್ಷೇತ್ರ: ಹರಿಯಾಣದ ಕುರುಕ್ಷೇತ್ರದಲ್ಲಿ ನಾಲ್ವರು ದರೋಡೆಕೋರರು ಹಿರಿಯ ವಕೀಲರೊಬ್ಬರ ಮನೆಗೆ ನುಗ್ಗಿ, ತಲೆ ಮೇಲೆ ಗನ್ ಇಟ್ಟು 3.15 ಕೋಟಿ ರೂಪಾಯಿ ಮೌಲ್ಯದ ನಗದು, ಚಿನ್ನ ಹಾಗೂ ಬೆಳ್ಳಿಯ ಆಭರಣಗಳು, ಲೈಸೆನ್ಸ್‌ಡ್ ರಿವಾಲ್ವರ್ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಹಿರಿಯ ವಕೀಲ ಬಲವಂತ್ ಸಿಂಗ್ ವಾಲಿಯಾ ಎಂಬುವವರೇ ಸಂತ್ರಸ್ತರಾಗಿದ್ದು, ಈ ಹಿಂದೆಯೂ ಇದೇ ನಾಲ್ವರು ದರೋಡೆಕೋರರು ಮನೆಗೆ ನುಗ್ಗಿ 50 ಲಕ್ಷ ರೂ. ಕಳವು ಮಾಡಿದ್ದರೂ ಎನ್ನುವುದು ಬೆಳಕಿಗೆ ಬಂದಿದೆ.
ಆ.6ರಂದು ನಡೆದಿದ್ದೇನು?
ಆಗಸ್ಟ್.6ರ ಸಂಜೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಹಿರಿಯ ವಕೀಲ ಬಲವಂತ್ ಸಿಂಗ್ ವಾಲಿಯಾ ಅವರು ರಾತ್ರಿ ತಮ್ಮ ಸಾಕು ನಾಯಿಯನ್ನು ಹೊರಗೆ ಕರೆದುಕೊಂಡು ಹೋಗಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ವಾಪಸ್ ಬಂದಾಗ ಮನೆ ಅಸ್ತವ್ಯಸ್ತಗೊಂಡಿರುವುದನ್ನು ಕಂಡರು. ಅವರ ಪತ್ನಿಯು ಕೈಕಾಲುಗಳು ಹಗ್ಗದಿಂದ ಕಟ್ಟಿ ಒಂದೆಡೆ ಕೂರಿಸಲಾಗಿತ್ತು. ಬಾಯಿಗೆ ಪಟ್ಟಿ ಕಟ್ಟಲಾಗಿತ್ತು. ಈ ವೇಳೆ ಬಂದ ಬಲವಂತ್ ಸಿಂಗ್ ವಾಲಿಯಾ ಅವರಿಗೂ ಬೆದರಿಕೆ ಹಾಕಿ ಹಣೆ ಮೇಲೆ ಗನ್ ಇಟ್ಟು ಬೆದರಿಕೆ ಹಾಕಿದ್ದಾರೆ ಎಂದು
ಥಾನೇಸರ್ ಸಿಟಿ ಪೊಲೀಸ್ ಠಾಣೆಯಲ್ಲಿ
ದಂಪತಿ ಕೊಟ್ಟ ದೂರಿನಲ್ಲಿ ಉಲ್ಲೇಖಿಸಲಾಗಿದೆ
ಬೆದರಿಕೆ ಹಾಕಿ ಸೇಫ್ ಲಾಕರ್ ಓಪನ್ ಮಾಡಿಸಿದ ಖದೀಮರು
ಇದೇ ವರ್ಷ ಮಾರ್ಚ್ 20 ರಂದು ವಕೀಲರ ಮನೆಯಲ್ಲಿಯೇ 50 ಲಕ್ಷ ರೂ. ದರೋಡೆಯಾಗಿತ್ತು. ಈ ಬಗ್ಗೆ ಮಾತನಾಡಿದನಾಲ್ವರು ದರೋಡೆ ಕೋರರು ಆ ಹಣ ಕಳುವಾಗಲು ನಾವೇ ಕಾರಣ ಎಂದಿದ್ದಾರಂತೆ. ಹಿಂದಿನ ಬಾರಿ ಡಿಜಿಟಲ್ ಸೇಫ್‌ಗಳನ್ನು ತೆರೆಯಲು ವಿಫಲರಾಗಿದ್ದೆವು ಎಂದು ಹೇಳಿದ ದುಷ್ಕರ್ಮಿಗಳು, ಈ ಬಾರಿ ವಾಲಿಯಾ ಅವರನ್ನು ಲಾಕರ್ ತೆರೆಯುವಂತೆ ಒತ್ತಾಯಿಸಿ, ನಿರಾಕರಿಸಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರಾಣಭಯದಿಂದ ವಕೀಲರು ಬೆಲೆಬಾಳುವ ವಸ್ತುಗಳ ಕೀಗಳನ್ನು ಒದಗಿಸಿ ಎರಡು ಡಿಜಿಟಲ್ ಲಾಕರ್‌ಗಳನ್ನು ತೆರೆದಿದ್ದಾರೆ.
ಎಷ್ಟು ಕಳುವಾಗಿದೆ?
ಆರೋಪಿಗಳು 17 ರಿಂದ 20 ಲಕ್ಷ ರೂ. ನಗದು, 1.5 ರಿಂದ 2 ಕೆಜಿ ಚಿನ್ನದ ಆಭರಣಗಳು, ಸುಮಾರು 4 ಕೆಜಿ ಬೆಳ್ಳಿಯ ಆಭರಣಗಳು, ಪಾತ್ರೆಗಳು ಮತ್ತು ವಿಗ್ರಹಗಳು, ಲೈಸೆನ್ಸ್‌ಡ್ ರಿವಾಲ್ವರ್, ಕಾಟ್ರೇಜ್‌ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ. ಸ್ಥಳದಿಂದ ಪರಾರಿಯಾಗುವ ಮುನ್ನ ನಾಲ್ಕು ಸಿಸಿಟಿವಿ ಕ್ಯಾಮೆರಾಗಳನ್ನು ಹಾಳುಮಾಡಿ, ಸಾಕ್ಷ್ಯ ನಾಶ ಪಡಿಸಲು ಡಿವಿಆರ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ, ಹೆಚ್ಚುವರಿಯಾಗಿ 80 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವ ದರೋಡೆಕೋರರು, ವಾಪಸ್ ಬರುವುದಾಗಿ ಮತ್ತು ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದಂಪತಿ ಪೋಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರಿಂದ ತನಿಖೆ ಅರಂಭ
ಕೂಗಾಟ ಕೇಳಿ ನೆರೆಹರೆಯದವರು ಸ್ಥಳಕ್ಕೆ ಧಾವಿಸಿ ವೃದ್ಧ ದಂಪತಿಯನ್ನು ಬಿಡುಗಡೆಗೊಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು, ವಿಧಿವಿಜ್ಞಾನ ತಂಡಗಳು ಮತ್ತು ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಥಾನೇಸರ್ ಸಿಟಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹರಿಯಾಣದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಥಾನೇಸರ್ ಶಾಸಕ ಅಶೋಕ್ ಅರೋರಾ ಮಾತನಾಡಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).