ರಸ್ತೆ ರಂಪ 
ದೇಶ

ರಸ್ತೆ ರಂಪ

ವಿಶ್ವಾಸ್​ ಎನ್​ ಜೋಳದಾಳು
ಹರ್ಷವರ್ಧನ್​ ಬ್ಯಾಡನೂರು
ಥೋ... ಏನ್ರೀ ಜೀವನಾ... ಲೋನ್ ಇಎಂಐ ಕಟ್ಟಬೇಕು, ಮನೆ ಓನರ್ ಮುಂದಿನ ತಿಂಗಳಿಂದ ಬಾಡಿಗೆ ಜಾಸ್ತಿ ಮಾಡ್ತೀನಿ ಅಂದಿದಾರೆ, ಮಕ್ಕಳ ಸ್ಕೂಲ್ ಫೀಸ್ ಹೊರೆ, ಹೆಂಡತಿ ಈ ಸಲ ಆನಿವರ್ಸರಿಗೆ ನೆಕ್ಲೇಸೇ ಬೇಕು ಅಂತಿದಾಳೆ, ಸಂಬಳ ಬೇರೆ ಹೈಕ್ ಆಗ್ತಿಲ್ಲ... ಅಯ್ಯೋ ಈ ಬಿಸಿಲು ಬೇರೆ, ನೆತ್ತಿ ಸುಡ್ತಿದೆ, ಅದೇನು ರೋಡ್ ಅಂತ ಮಾಡಿದಾರೋ ಏನೋ, ಬರೀ ಹಂಪ್​ಗಳು, ಗುಂಡಿಗಳು, ಆಫೀಸಿಗೆ ಬೇರೆ ಲೇಟ್ ಆಗ್ತಿದೆ, ಅರ್ಧ ದಿನ ಸ್ಯಾಲರಿ ಕಟ್ ಆಗುತ್ತೆ...
ಹೀಗೆ ಯೋಚಿಸುತ್ತ ಟೆನ್ಶನ್ ಹೆಚ್ಚಾಗುತ್ತಿರುವಾಗಲೇ ಅಕ್ಕಪಕ್ಕದ ಯಾವುದೋ ವಾಹನಕ್ಕೆ ಇವರ ಗಾಡಿ ಟಚ್ ಆಗಿ, ಗಲಾಟೆ ಶುರು. ಗುದ್ದಿದವನು, ಗುದ್ದಿಸಿಕೊಂಡವನು ಇಬ್ಬರೂ ದೈನಂದಿನ ಒತ್ತಡಗಳಿಂದ ಬೇಸತ್ತವರು. ಜಗಳಕ್ಕೆ ಬಿದ್ದು, ಪರಿಸ್ಥಿತಿ ಕೈ ಮೀರುತ್ತದೆ. ಬೈದಾಟ, ಬಡಿದಾಟದ ಮೂಲಕ ಕೋಪ ಹೊರಹಾಕುತ್ತಾರೆ. ಈ ಗಲಾಟೆಯನ್ನು ಯಾರ್ಯಾರೋ ವಿಡಿಯೋ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚುತ್ತಾರೆ. ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತದೆ. ಒಂದ್ಕಡೆ ಕೇಸು, ಇನ್ನೊಂದ್ಕಡೆ ವೆಹಿಕಲ್ ಸೀಜ್! ಇವು ಇತ್ತೀಚೆಗೆ ಪ್ರತಿದಿನವೂ ರಸ್ತೆಗಳಲ್ಲಿ ಕಂಡುಬರುತ್ತಿರುವ ಘಟನೆಗಳು. ಇದಕ್ಕೆ ಕಾರಣಗಳು ಒಂದೆರಡಲ್ಲ.
ಪ್ರೆಷರ್ ಕುಕ್ಕರ್ ಆದ ನಗರಗಳು: ನಗರವಾಸಿಗಳದು ವೇಗದ ಜೀವನ. ಯಾವಾಗಲೂ ಅರ್ಜೆಂಟ್​ನಲ್ಲಿರುತ್ತಾರೆ. ಸಮಾಧಾನಕ್ಕಿಂತ ಸ್ವಪ್ರತಿಷ್ಠೆ ಹೆಚ್ಚು. ಬೇರೆಯವರಿಂದ ಸ್ವಲ್ಪ ತೊಂದರೆಯಾದರೂ ಸಹಿಸುವುದಿಲ್ಲ. ಆದರೆ, ತಮ್ಮಿಂದ ಬೇರೆಯವರಿಗೆ ತೊಂದರೆಯಾದರೆ, ಅದು ಲೆಕ್ಕಕ್ಕಿಲ್ಲ! ಸದಾ ಗಜಿಬಿಜಿಯಲ್ಲೇ ಓಡಾಡುತ್ತಿರುತ್ತಾರೆ. ಮನೆ-ಕಚೇರಿಯಲ್ಲಿ ಕೋಪ ವ್ಯಕ್ತಪಡಿಸಲು ಆಗಲ್ಲ, ಹಾಗಾಗಿ ರಸ್ತೆ ಮೇಲೆ ತಾಳ್ಮೆಯ ಕಟ್ಟೆ ಒಡೆಯುತ್ತದೆ. ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ನೋಯ್ಡಾ ಹೀಗೆ ಬಹುತೇಕ ಮಹಾನಗರಗಳಲ್ಲಿ ರೋಡ್ ರೇಜ್ ಪ್ರಕರಣಗಳು ಈಗ ತೀರಾ ಸಾಮಾನ್ಯವಾಗಿಬಿಟ್ಟಿವೆ.

ಅವಮಾನದ ಹೊಸರೂಪ

ಈಗೀಗಂತೂ ಹಾರ್ನ್ ಮಾಡುವುದೆಂದರೆ ಮುಂದಿರುವ ವಾಹನದ ಸವಾರನಿಗೆ ಸವಾಲೊಡ್ಡಿದಂತೆ. ಪ್ರಚೋದನೆ ಮಾಡಿದಂತೆ. ಅವರು ಅದನ್ನು ಅವಮಾನ ಎಂಬರ್ಥದಲ್ಲಿ ತೆಗೆದುಕೊಳ್ಳುತ್ತಾರೆ. ಸತತವಾಗಿ ಹಾರ್ನ್ ಮಾಡಿದರಂತೂ ವೈಯಕ್ತಿಕವಾಗಿ ನಿಂದನೆ ಮಾಡಿದ್ದಕ್ಕೆ ಸಮ! ಇದು ಜಗಳಕ್ಕೆ ಪ್ರೇರಣೆ ನೀಡುತ್ತದೆ. ಹಾರ್ನ್ ಮಾಡಿದ್ದು ತಾವೇ ಎಂಬುದು ಬೇರೆಯವರಿಗೆ ಗೊತ್ತಾಗುವುದಿಲ್ಲ ಎಂದುಕೊಳ್ಳುವವರೂ ಇದ್ದಾರೆ. ಯಾರಾದರೂ ಗುರುತು ಹಿಡಿದು ಪ್ರಶ್ನಿಸಿಬಿಟ್ಟರೆ, ಹಾರ್ನ್ ಮಾಡಿದವರು ವ್ಯಗ್ರರಾಗುತ್ತಾರೆ, ಜಗಳಕ್ಕೆ ಇಳಿಯುತ್ತಾರೆ.

ಜಾಣತನದ ಚಾಲನೆ ಮುಖ್ಯ

ಸಾಧ್ಯವಾದಷ್ಟೂ ಜವಾಬ್ದಾರಿಯುತವಾಗಿ ವಾಹನ ಚಾಲನೆ ಮಾಡಿ. ವಾಹನಕ್ಕೆ ಡ್ಯಾಶ್ ಕ್ಯಾಮೆರಾ ಅಳವಡಿಸಿಕೊಳ್ಳುವುದು ಉತ್ತಮ. ಇದು ಅಪಘಾತದ ಸಮಯದಲ್ಲಿ ಸಾಕ್ಷಿಯಾಗಿ ಕೆಲಸ ಮಾಡುತ್ತದೆ. ಭಾಷೆ, ಲಿಂಗ ಅಥವಾ ಉದ್ಯೋಗದ ‘ಟ್ರಂಪ್​ಕಾರ್ಡ್’ ಬಳಸಿ ತಪ್ಪನ್ನು ಸಮರ್ಥಿಸಿಕೊಳ್ಳಬೇಡಿ.

ಹೆಚ್ಚು ಶಬ್ದ, ಹೆಚ್ಚು ಜಗಳ

ಅನಗತ್ಯವಾಗಿ ಹಾರ್ನ್ ಮಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಸಮಸ್ಯೆ ಕೇವಲ ಶಬ್ದದ್ದಲ್ಲ. ಅದು ಅನಗತ್ಯವಾಗಿ ಇತರ ಚಾಲಕರ ಗಮನ ಸೆಳೆಯುತ್ತದೆ. ಪ್ರೆಶರ್ ಹಾರ್ನ್​ಗಳ ಶಬ್ದವಂತೂ ಪಕ್ಕದಲ್ಲಿರುವವರನ್ನು ಬೆಚ್ಚಿಬೀಳಿಸುವಂತಿರುತ್ತದೆ. ಕೆಲವರು ಮಿಸೋಫೋನಿಯಾ ಅಥವಾ ಹೈಪರ್ ಅಕ್ಯೂಸಿಸ್ ಎಂಬ ಆರೋಗ್ಯಸ್ಥಿತಿಯಿಂದ ಬಳಲುತ್ತಿರುತ್ತಾರೆ. ಅಂಥವರಿಗೆ ಸಣ್ಣ ಶಬ್ದವೂ ತೀವ್ರ ಕಿರಿಕಿರಿ ಉಂಟುಮಾಡುತ್ತದೆ. ಕೋಪಕ್ಕೆ ಕಾರಣವಾಗುತ್ತದೆ. ರೋಡ್​ರೇಜ್ ನಡೆಯಬಾರದು ಎಂದಿದ್ದರೆ, ಸಾಧ್ಯವಾದಷ್ಟೂ ಹಾರ್ನ್ ಬಳಕೆ ಕಡಿಮೆ ಮಾಡಬೇಕು.

ತಪ್ಪು ಮಾಡಿದರೆ ಒಪ್ಪಿಕೊಳ್ಳಿ

ಹಾಗಾದರೆ ರೋಡ್​ರೇಜ್​ಗೆ ಪರಿಹಾರವೇ ಇಲ್ಲವೇ? ಖಂಡಿತಾ ಇದೆ. ಸೌಜನ್ಯದ ನಡವಳಿಕೆಯೇ ಅದಕ್ಕೆ ಮೊದಲ ಮದ್ದು. ಆಕಸ್ಮಿಕವಾಗಿ ಬೇರೆ ವಾಹನಕ್ಕೆ ನಿಮ್ಮ ವಾಹನ ತಗುಲಿದರೆ, ಗಾಬರಿಯಾಗಬೇಡಿ ಅಥವಾ ಜಗಳಕ್ಕಿಳಿಯಬೇಡಿ. ಸಮಾಧಾನದಿಂದ ಪರಿಸ್ಥಿತಿಯನ್ನು ವಿವರಿಸಿ. ಎದುರಾಳಿ ವ್ಯಕ್ತಿ ಬೆದರಿಕೆ ಹಾಕಿದರೆ ಅಥವಾ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಯೇ ಇಲ್ಲದಿದ್ದರೆ, ಉಪಾಯವಾಗಿ ಅಲ್ಲಿಂದ ದೂರ ಸರಿಯಿರಿ. ಟ್ರಾಫಿಕ್ ಪೊಲೀಸ್ ಅಥವಾ 112ಗೆ ಕರೆ ಮಾಡಿ ಸಹಾಯ ಪಡೆಯಿರಿ. ಈಗಿನ ಸಿಸಿಟಿವಿ ಯುಗದಲ್ಲಿ ಪ್ರತಿಯೊಬ್ಬರ ಪ್ರತಿಯೊಂದು ನಡೆಯೂ ದಾಖಲಾಗುತ್ತಿರುತ್ತದೆ ಎಂಬುದನ್ನು ಮರೆಯಬೇಡಿ.

ಸಮಯಕ್ಕೆ ಮೊದಲೇ ಹೊರಡಿ

ಗಡಿಬಿಡಿಯಲ್ಲಿ ವಾಹನ ಚಲಾಯಿಸುವುದು ಆತಂಕ ಮತ್ತು ಕೋಪಕ್ಕೆ ಕಾರಣವಾಗುತ್ತದೆ. ಎಲ್ಲಿಗೇ ಹೋಗುವುದಿದ್ದರೂ 10 ನಿಮಿಷ ಮೊದಲೇ ಹೊರಟರೆ ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಬೇರೆ ವಾಹನಕ್ಕೆ ಟಚ್ ಆಗುವ, ಜಗಳಕ್ಕೆ ದಾರಿ ಮಾಡಿಕೊಡುವ ಪ್ರಸಂಗಗಳು ಗಣನೀಯವಾಗಿ ಕಡಿಮೆಯಾಗುತ್ತವೆ.

ಕ್ಷಮಿಸುವ ಗುಣವಿರಲಿ

ರಸ್ತೆಯಲ್ಲಿ ಯಾರಾ ದರೂ ತಪ್ಪು ಮಾಡಿದರೆ ಅದನ್ನು ವೈಯಕ್ತಿಕ ವಾಗಿ ತೆಗೆದುಕೊಳ್ಳಬೇಡಿ. ಒಮ್ಮೆಲೇ ಬೈದುಬಿಡಬೇಡಿ. ಅವರು ಅವಸರದಲ್ಲಿರಬಹುದು ಎಂದುಕೊಳ್ಳಿ. ಇಲ್ಲವೆ, ಅವರಿಗೆ ವಾಹನ ಚಲಾಯಿಸುವುದರಲ್ಲಿ ಅನುಭವ ಕಡಿಮೆ ಇರಬಹುದು ಎಂದು ಭಾವಿಸಿ ಸಮಾಧಾನದಿಂದ ಮುಂದೆ ಸಾಗಿ.

ಸನ್ನೆಗಳ ಮೂಲಕ ಸಂವಹನ

ನೀವು ತಿಳಿಯದೆ ತಪ್ಪು ಮಾಡಿದಾಗ ಒಂದು ಸಣ್ಣ ‘ಕ್ಷಮೆ ಯಾಚನೆ’ಯ ಸನ್ನೆ (ಕೈ ಬೀಸುವ ಮೂಲಕ) ಮಾಡುವುದು ಒಳ್ಳೆಯದು. ಸಂಭವಿಸಬಹುದಾದ ದೊಡ್ಡ ಜಗಳವನ್ನು ತಪ್ಪಿಸಲು, ಎದುರಿಗೆ ಇರುವವರನ್ನು ತಣ್ಣಗಾಗಿಸಲು ಇದು ಸಹಕಾರಿ.

ರ‍್ಯಾಶ್​ ಡ್ರೈವಿಂಗ್​ ಪ್ರಕರಣಗಳು

ರಾಜ್ಯ ವಾರ್ಷಿಕ ಪ್ರಕರಣಗಳು
ಕೇರಳ 1,30,000
ತಮಿಳುನಾಡು 54,000
ಮಧ್ಯಪ್ರದೇಶ 41,000
ಕರ್ನಾಟಕ 34,000
ಪ್ರತಿ ವರ್ಷ ದೇಶದಲ್ಲಿ ದಾಖಲಾಗುತ್ತಿರುವ ರ‍್ಯಾಶ್​ ಡ್ರೈವಿಂಗ್​, ರೋಡ್​ರೇಜ್ ಪ್ರಕರಣಗಳು

ಕೆಲವು ಟಿಪ್ಸ್...

- ಕೋಪ, ಹತಾಶೆ ಅಥವಾ ಒತ್ತಡದಲ್ಲಿದ್ದರೆ ವಾಹನ ಚಲಾಯಿಸದೇ ಇರುವುದು ಉತ್ತಮ.
- ಯಾರಾದರೂ ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿದ್ದರೆ, ಅಂಥವರಿಂದ ಅಂತರ ಕಾಪಾಡಿಕೊಳ್ಳಿ. ಸಾಧ್ಯವಾದರೆ ಅದರ ಫೋಟೋ ಕ್ಲಿಕ್ಕಿಸಿಕೊಂಡು ವಿವರಗಳೊಂದಿಗೆ ‘ಬಿಟಿಪಿ ಅಸ್ತ್ರಂ’ ಆಪ್​ಗೆ ಅಪ್​ಲೋಡ್ ಮಾಡಿ.
-ತಪ್ಪಿತಸ್ಥರ ವಿಡಿಯೋ ಮಾಡಿಕೊಂಡು ಎಕ್ಸ್ ಮತ್ತಿತರ ಜಾಲತಾಣಗಳ ಮೂಲಕ ಪೊಲೀಸರಿಗೆ ಮಾಹಿತಿ ನೀಡಿ. ಸಂಬಂಧಪಟ್ಟ ಅಧಿಕಾರಿಗಳನ್ನು ಟ್ಯಾಗ್ ಮಾಡಿ.
- ರಸ್ತೆಯಲ್ಲಿ ರಂಪಾಟವಾದ ಬಳಿಕ, ಆ ವ್ಯಕ್ತಿ ನಿಮ್ಮನ್ನು ಹಿಂಬಾಲಿಸುತ್ತಿದ್ದರೆ, ಸಮೀಪದ ಪೊಲೀಸ್ ಠಾಣೆಗೆ ಅಥವಾ ಹೆಚ್ಚು ಜನರಿರುವ ಜಾಗಕ್ಕೆ ಹೋಗಿ.
- ಔಟರ್ ರಿಂಗ್ ರೋಡ್​ಗಳಲ್ಲಿ ರಸ್ತೆ ರಂಪ ಸಂಭವಿಸಿದರೆ ಹೆಚ್ಚು ಹುಷಾರಾಗಿರಿ. ಏಕೆಂದರೆ ಅಲ್ಲಿ ಅಪಘಾತದ ನಾಟಕವಾಡಿ ಹಣ ಸುಲಿಗೆ ಮಾಡುವವರಿರುತ್ತಾರೆ.
- ನೀವು ಬೈಕ್ ಮೇಲಿದ್ದರೆ, ಎದುರಿಗಿರುವ ವ್ಯಕ್ತಿ ಅದೆಷ್ಟೇ ರೋಷಾವೇಷ ತೋರಿದರೂ, ಸಮಾಧಾನದಿಂದಿರಿ. 112ಗೆ ಕರೆ ಮಾಡಿ ದೂರು ನೀಡಿ. ಪೊಲೀಸ್ ವಾಹನಗಳು ಸಾಮಾನ್ಯವಾಗಿ 10-15 ನಿಮಿಷಗಳಲ್ಲಿ ಸ್ಥಳಕ್ಕೆ ಬರುತ್ತವೆ.

ರೌಡಿಶೀಟರ್ ಪಟ್ಟ

ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. 2022ರಿಂದ 2025ರವರೆಗೆ ಪೊಲೀಸರು 88 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇಬ್ಬರು ಮಹಿಳೆಯರು ಸೇರಿ 123 ಮಂದಿಯನ್ನು ಬಂಧಿಸಿ, ಕೇಸು ದಾಖಲಿಸಿದ್ದಾರೆ. ಅವರಲ್ಲಿ 17 ಮಂದಿಯನ್ನು ‘ಸಿ ರೌಡಿಶೀಟರ್ಸ್’ ಎಂದು ಪರಿಗಣಿಸಲಾಗಿದೆ. ರೋಡ್ ರೇಜ್ ಪ್ರಕರಣವೇ ಅವರ ಮೊದಲ ಕೇಸ್ ಆಗಿದ್ದರೂ, ಗಲಾಟೆ ಬಳಿಕ, ಹಿಂಬಾಲಿಸಿಕೊಂಡು ಬಂದು ಹಲ್ಲೆ ನಡೆಸಿರುವ ಕಾರಣ ರೌಡಿ ಶೀಟ್​ಗೆ ಸೇರಿಸಲಾಗಿದೆ ಎನ್ನುತ್ತಾರೆ ಪೊಲೀಸರು.

112ಗೆ ಕರೆ ಮಾಡಿ

ರೋಡ್​ರೇಜ್ ಸಂಭವಿಸುವ ಸಂದರ್ಭ ಇದ್ದರೆ ಕಾರಿನಿಂದ ಕೆಳಗಿಳಿಯಬೇಡಿ. ಕಿಟಕಿಗಳ ಗಾಜು ಏರಿಸಿ. ಬಾಗಿಲುಗಳನ್ನು ಲಾಕ್ ಮಾಡಿ. ಪರಿಸ್ಥಿತಿ ಕೈಮೀರುತ್ತಿದೆ ಎನಿಸಿದರೆ ತಕ್ಷಣ 112ಗೆ ಕರೆ ಮಾಡಿ ಅಥವಾ ಸಮೀಪದ ಪೊಲೀಸ್ ಸ್ಟೇಷನ್ ಕಡೆಗೆ ವಾಹನ ಚಲಾಯಿಸಿ. ನಿಮ್ಮ ಮೊಬೈಲ್ ಫೋನ್​ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡಿ, ಆದರೆ ಅದು ಎದುರಾಳಿಯನ್ನು ಮತ್ತಷ್ಟು ಕೆರಳಿಸದಂತೆ ಎಚ್ಚರವಹಿಸಿ.

ಕಣ್ಣಿಗೆ ಕಣ್ಣು ಕೊಟ್ಟು ನೋಡಬೇಡಿ

ಆಕ್ರಮಣಕಾರಿ ಚಾಲಕರೊಂದಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಜಗಳಕ್ಕೆ ಆಹ್ವಾನ ನೀಡಿದಂತೆ. ನಿಮ್ಮ ದೃಷ್ಟಿ ರಸ್ತೆಯ ಮೇಲೆ ನೆಟ್ಟಿರಲಿ. ಜಗಳಗಂಟರನ್ನು ಸುಮ್ಮನಿರಿಸಲು ಅದು ಅಷ್ಟರಮಟ್ಟಿಗೆ ಸಹಾಯ ಮಾಡುತ್ತದೆ.