ಗುರುಗ್ರಾಮ್ ಹಿಟ್-ಅಂಡ್-ರನ್ ಪ್ರಕರಣ: ಮಹಿಳಾ ಬೈಕ್ ಸವಾರಳ ಅಪಘಾತದ ದೃಶ್ಯ 
ದೇಶ

ಗುರುಗ್ರಾಮ್‌ನಲ್ಲಿ ‘ರೋಡ್ ರೇಜ್’ ರೌದ್ರಾವತಾರ: ಬೈಕ್‌ಗೆ ಕಾರು ಡಿಕ್ಕಿ, ರಸ್ತೆಗೆ ಉರುಳಿದ ಯುವತಿ; ವಿಡಿಯೋ ವೈರಲ್! Road Rage Viral Video

ಗುರುಗ್ರಾಮ್​: ರಸ್ತೆಯಲ್ಲಿ ಸಂಚರಿಸುವಾಗ ನಮ್ಮ ಪ್ರಾಣಕ್ಕೆ ನಾವೇ ಗ್ಯಾರೆಂಟಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ರಸ್ತೆಗಳಲ್ಲಿ ಪುಂಡರ ಅಟ್ಟಹಾಸ ಮಿತಿಮೀರುತ್ತಿದೆ. ಅದರಲ್ಲೂ ಬೈಕ್‌ನಲ್ಲಿ ಸಾಗುವ ಮಹಿಳೆಯರ ಮೇಲೆ ರೋಡ್ ರೇಜ್ (Road Rage Viral Video) ಹಾಗೂ ದುಷ್ಕರ್ಮಿಗಳ ಕಣ್ಣು ಬೀಳುತ್ತಿರುವುದು ಸಾಮಾನ್ಯ ಸಂಗತಿ ಎಂಬಂತಾಗಿದೆ. 
ಈಗ ಅಂತಹದ್ದೇ ಒಂದು ಘಟನೆ ಗುರುಗ್ರಾಮ್‌ನಲ್ಲಿ ವರದಿಯಾಗಿದೆ.  ಖ್ಯಾತ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ನಡೆದಿರುವ ಭೀಕರ ಹಿಟ್-ಅಂಡ್-ರನ್ ಘಟನೆಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ಇದನ್ನು ನೋಡಿರುವ ಜನ ಬೆಚ್ಚಿಬಿದ್ದಿದ್ದಾರೆ.

ಹೆಲ್ಮೆಟ್ ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ದೃಶ್ಯ!

ಸಿಯಾ ಎನ್ನಲಾದ ಮಹಿಳಾ ಬೈಕ್ ಸವಾರಿಯೊಬ್ಬರು ತಮ್ಮ ಸ್ನೇಹಿತರೊಂದಿಗೆ ಬೈಕ್ ರೈಡ್ ತೆರಳಿದ್ದರು. ಎಲ್ಲವೂ ಸರಿಯಾಗಿಯೇ ಇತ್ತು, ಆದರೆ ಅಲ್ಲಿಗೆ ಬಂದ ಒಂದು ಬಿಳಿ ಬಣ್ಣದ ಸೆಡಾನ್ ಕಾರು ಅವರ ನಿದ್ರೆ ಕೆಡಿಸಿತು. ಕಾರಿನಲ್ಲಿದ್ದವರು ರಸ್ತೆಯಲ್ಲಿ ವ್ಹೀಲ್ ರೈಡ್ ಮಾಡುವಂತೆ ಅಥವಾ ಅತಿವೇಗವಾಗಿ ಕಿರುಕುಳ ನೀಡುತ್ತಾ ಸಿಯಾ ಅವರನ್ನು ಹಿಂಬಾಲಿಸಲು ಶುರು ಮಾಡಿದರು.
ಸಿಯಾ ತಮ್ಮ ಹೆಲ್ಮೆಟ್‌ನಲ್ಲಿ ಅಳವಡಿಸಿದ್ದ ಆಕ್ಷನ್ ಕ್ಯಾಮೆರಾದಲ್ಲಿ ಇಡೀ ದೃಶ್ಯ ದಾಖಲಾಗಿದೆ. ವಾಯ್ಸ್-ಓವರ್‌ನಲ್ಲಿ ಅವರು ವಿವರಿಸಿರುವಂತೆ, ಆ ಕಾರಿನ ಚಾಲಕನ ಹುಚ್ಚಾಟ ಹಾಗೂ ಆಕ್ರಮಣಕಾರಿ ಡ್ರೈವಿಂಗ್ ಕಂಡು ಅವರಿಗೆ ಮೊದಲೇ ಅನುಮಾನ ಬಂದಿತ್ತು. ಹೀಗಾಗಿ ಅವರು ತಮ್ಮ ಬೈಕ್‌ಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ತಿಳಿಸಿದ್ದರು. ಆದರೆ ಆ ಕಾರಿನಲ್ಲಿದ್ದವರು ಮಾತ್ರ ತಮ್ಮ ವಿಕೃತಿ ಮೆರೆಯಲು ಮುಂದಾದರು.
ಎಣ್ಣೆ ಅಮಲಿನಲ್ಲಿ ಕಾರು ಚಲಾಯಿಸಿದ ಚಾಲಕ!
ವರದಿಗಳ ಪ್ರಕಾರ ಹಾಗೂ ಸಿಯಾ ಅವರ ಆರೋಪದಂತೆ, ಆ ಕಾರಿನಲ್ಲಿದ್ದವರು ಮದ್ಯಪಾನ ಮಾಡಿದ್ದರು. ಕಾರು ಚಾಲಕನಲ್ಲದೆ ಒಳಗೆ ಇಷ್ಟು ಜನ ಇದ್ದಾರೆ ಎಂಬ ನಿಖರ ಮಾಹಿತಿ ಇಲ್ಲದಿದ್ದರೂ, ಅವರ ವರ್ತನೆ ಮಾತ್ರ ಕುಡಿದ ಅಮಲಿನಲ್ಲಿದ್ದವರಂತೆ ಇತ್ತು. ಕಾರನ್ನು ಪಕ್ಕಕ್ಕೆ ನಿಲ್ಲಿಸುವಂತೆ ಬೆದರಿಕೆ ಹಾಕಿದ ಆ ಖದೀಮರು, ಸಿಯಾ ಅವರ ಬೈಕ್ ಅನ್ನು ಅಡ್ಡಗಟ್ಟಲು ವಿಫಲ ಪ್ರಯತ್ನ ನಡೆಸಿದರು.
ಚಾಲಕನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಸಿಯಾ ತಮ್ಮ ಬೈಕ್ ಅನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋದರು. ಇವರ ರಕ್ಷಣೆಗೆ ಬಂದ ಮತ್ತೊಬ್ಬ ಸಹ ಸವಾರ ತಮ್ಮ ಬೈಕನ್ನು ಈ ಕಾರಿನ ಹಿಂಬದಿಯಲ್ಲಿಟ್ಟು ರಕ್ಷಣೆ ನೀಡಲು ಪ್ರಯತ್ನಿಸಿದರು. ಆದರೆ, ಬಿಳಿ ಕಾರಿನ ಚಾಲಕ ಒಂದೇ ಸಮನೆ ಕಾರಿನ ವೇಗವನ್ನು ಹೆಚ್ಚಿಸಿ ಬೈಕ್‌ಗೆ ಸೈಡಿನಿಂದ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ. 

ರಸ್ತೆಯಲ್ಲಿ ಉರುಳಿದ ಸಿಯಾ, ಕಿಡಿ ಚಿಮ್ಮಿದ ಬೈಕ್!

ಡಿಕ್ಕಿಯ ರಭಸ ಎಷ್ಟು ತೀವ್ರವಾಗಿತ್ತೆಂದರೆ, ಸಿಯಾ ಬೈಕ್‌ನಿಂದ ನೇರವಾಗಿ ರಸ್ತೆಯ ಮೇಲೆ ಬಿದ್ದರು. ಅವರ ಬೈಕ್ ರಸ್ತೆಯ ಮೇಲೆಯೇ ಜಾರಿಕೊಂಡು ಹೋಗುತ್ತಾ ಕಿಡಿಗಳನ್ನು ಚಿಮ್ಮಿಸಿತು. ಈ ರೋಚಕ ಹಾಗೂ ಎದೆ ನಡುಗಿಸುವ ದೃಶ್ಯಗಳು ಹೆಲ್ಮೆಟ್ ಕ್ಯಾಮೆರಾದಲ್ಲೂ ಸೆರೆಯಾಗಿವೆ. ಸ್ವಲ್ಪ ದೂರದಲ್ಲಿದ್ದ ಟ್ರಾಫಿಕ್ ಸಿಗ್ನಲ್ ಬಳಿ ಈ ಕಾರನ್ನು ತಡೆದು ನಿಲ್ಲಿಸಿ ಪ್ರಶ್ನಿಸಲು ಹೋದಾಗಲೂ ಆ ಚಾಲಕ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅತಿವೇಗವಾಗಿ ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಯ ತೀವ್ರತೆಗೆ ತೀವ್ರವಾಗಿ ಗಾಯಗೊಂಡಿರುವ ಸಿಯಾ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರಿಂದ ತನಿಖೆ ಆರಂಭ: ಕಠಿಣ ಶಿಕ್ಷೆಗೆ ಒತ್ತಾಯ

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಬೆಂಕಿ ತರ ಹಬ್ಬುತ್ತಿದ್ದಂತೆ ಎಚ್ಚೆತ್ತ ಗುರುಗ್ರಾಮ್ ಸಂಚಾರ ಪೊಲೀಸರು  ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವೈರಲ್ ಆಗಿರುವ ವಿಡಿಯೋ ತುಣುಕುಗಳೇ ಈ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿದ್ದು, ಆ ನಶೆಯ ಅಮಲಿನಲ್ಲಿದ್ದ ಕ್ರೂರಿಯನ್ನು ಪೊಲೀಸರು ಹುಡುಕುತ್ತಿದ್ದಾರೆ, (ಏಜನ್ಸೀಸ್​).