Tej Pratap Yadav 
ದೇಶ

ಇತಿಹಾಸದ ಪುಟ ಸೇರುತ್ತಾ ಆರ್​ಜೆಡಿ..? ಲಾಲು ಭೇಟಿಯ ಬಳಿಕ ಅಚ್ಚರಿಯ ಘೋಷಣೆ ಮಾಡಿದ ತೇಜ್ ಪ್ರತಾಪ್ | Tej Pratap Yadav

ಪಟನಾ: ಜನಶಕ್ತಿ ಜನತಾದಳ (ಜೆಜೆಡಿ) ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್ ಬುಧವಾರ ಪಾಟ್ನಾದ ತಮ್ಮ ನಿವಾಸದಲ್ಲಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ದಹಿ-ಚುಡಾ ಪಾರ್ಟಿಯನ್ನು ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಅವರ ತಂದೆ, ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್​ ಆಗಮಿಸಿದ್ದು ಅನೇಕರಲ್ಲಿ ಅಚ್ಚರಿ ತಂದಿತ್ತು.
ಔತಣಕೂಟದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತೇಜ್​, ತಮ್ಮ ತಂದೆ ಲಾಲು ಪ್ರಸಾದ್ ಯಾದವ್, ಬಿಹಾರ ರಾಜ್ಯಪಾಲರು ಮತ್ತು ಉಪ ಮುಖ್ಯಮಂತ್ರಿ ಸೇರಿದಂತೆ ಹಲವಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.
ಈ ವೇಳೆ ತಮ್ಮ ನೂತನ ಪಕ್ಷ ಜೆಜೆಡಿಯನ್ನು, ಆರ್‌ಜೆಡಿಯೊಂದಿಗೆ ವಿಲೀನಗೊಳಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಆರ್‌ಜೆಡಿಯನ್ನೇ ತಮ್ಮ ಪಕ್ಷದೊಂದಿಗೆ ವಿಲೀನಗೊಳ್ಳಿಸಲಾಗುತ್ತದೆ ಎಂದರು. ತೇಜು ಭಯ್ಯಾ ಅವರ ಹಬ್ಬ ಸೂಪರ್ ಡೂಪರ್ ಹಿಟ್ ಆಗದಿದ್ದರೆ ಹೇಗೆ..?, ದಹಿ-ಚೂಡಾದ ಅದ್ಧೂರಿ ಹಬ್ಬವನ್ನು ಆಯೋಜಿಸಲಾಗಿತ್ತು. ನಮ್ಮ ಪೋಷಕರು ನಮಗೆ ದೇವರು, ಆದ್ದರಿಂದ ನಾವು ಅವರ ಆಶೀರ್ವಾದವನ್ನು ಪಡೆಯುತ್ತಲೇ ಇರುತ್ತೇವೆ, ಮುಂದೆ ಎಲ್ಲರೂ ಬರುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್‌ಎಲ್‌ಜೆಪಿ ಮುಖ್ಯಸ್ಥ ಪಶುಪತಿ ಕುಮಾರ್ ಪರಾಸ್, ಕುಟುಂಬ ಭೇಟಿಯ ಬಳಿಕ ಹೊಸ ಸಮೀಕರಣ ರೂಪುಗೊಂಡಂತೆ ಲಾಲು ಕುಟುಂಬ ಮತ್ತೆ ಒಂದಾಗುತ್ತದೆ ಎಂದರು. ಜನವರಿ 14 ಬಂದಿದೆ, ಅಲ್ಲಿದ್ದ ಎಲ್ಲಾ ಗ್ರಹಗಳು ಮುಗಿದಿವೆ. ಇಂದಿನಿಂದ ಹೊಸ ಸಮೀಕರಣ ರೂಪುಗೊಳ್ಳಲಿದೆ. ಕುಟುಂಬದಲ್ಲಿ ಚದುರಿಹೋಗಿದ್ದವರು ಒಟ್ಟಿಗೆ ಸೇರುತ್ತಾರೆ. ಬಿಹಾರದ ರಾಜಕೀಯದಲ್ಲಿ ಹೊಸ ತಿರುವು ಬರಲಿದೆ ಎಂದು ಹೇಳಿದರು.

ಯಾದವಿ ಕಲಹ ಅಂತ್ಯವಾಯ್ತಾ..?

ಈ ಔತಣಕೂಟ ಲಾಲು ಯಾದವ್ ಕುಟುಂಬದಲ್ಲಿನ ಪುನರ್ಮಿಲನಕ್ಕೆ ಸಾಕ್ಷಿ ಎಂದು ಅನೇಕರು ವಿಶ್ಲೇಷಿಸಿದ್ದು, ಎಲ್ಲರೂ ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಸಂದೇಶವನ್ನು ದೇಶಕ್ಕೆ ಸಾರಿದೆ.

ತೇಜ್​ ಪ್ರತಾಪ್​ ಉಚ್ಛಾಟನೆಯಾಗಿದ್ದೇಕೆ..?

ತೇಜ್ ಪ್ರತಾಪ್ ಒಬ್ಬ ಮಹಿಳೆಯೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡ ಬಳಿಕ ಈ ವಿವಾದ ಹುಟ್ಟುಕೊಂಡಿದ್ದು, ಇದೇ ಕಾರಣದಿಂದ ತೇಜ್​ರನ್ನು ಮನೆಯಿಂದ ಆಚೆ ಹಾಕಿದರು.
ತೇಜ್​ ಪ್ರತಾಪ್​ರ ವರ್ತನೆಯಿಂದ ಅವಮಾನಕ್ಕೀಡಾದ ಕುಟುಂಬ ಇದು ಚುನಾವಣೆಯಲ್ಲಿ ಹಿನ್ನಡೆಯಾಗಬಹುದೆಂದು ಬೇಜವಾಬ್ದಾರಿಯುತ ವರ್ತನೆ ಎಂಬ ಕಾರಣ ನೀಡಿ ಲಾಲೂ ತಮ್ಮ ಹಿರಿಯ ಮಗನನ್ನು ಆರು ವರ್ಷಗಳ ಕಾಲ ಆರ್‌ಜೆಡಿಯಿಂದ ಹೊರಹಾಕಿದರು ಮತ್ತು ಸಾರ್ವಜನಿಕವಾಗಿ ಅವರೊಂದಿಗಿನ ಸಂಬಂಧವನ್ನು ಕಡಿದುಕೊಂಡರು.
ಈ ಎಲ್ಲಾ ಬೆಳವಣಿಗೆಯ ಬಳಿಕ ತೇಜ್ ಪ್ರತಾಪ್ ತಮ್ಮದೇ ಆದ ಹೊಸ ಪಕ್ಷವನ್ನು ಸ್ಥಾಪಿಸಿ, 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು, ಆದರೆ ಇದರಿಂದ ಯಾವುದೇ ರೀತಿಯ ಲಾಭವಾಗಲಿಲ್ಲ.

ಜನವರಿ 13 ರಂದು ಆಹ್ವಾನ ನೀಡಿದ್ದ ತೇಜ್ ಪ್ರತಾಪ್

ತೇಜ್ ಪ್ರತಾಪ್ ನಿನ್ನೆ ( ಜ 13) ಮಕರ ಸಂಕ್ರಾಂತಿ ಹಬ್ಬಕ್ಕೆ ಆಹ್ವಾನ ನೀಡಿದ್ದರು. ಈ ವಿಷಯವಾಗಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅವರು, 10 ಸರ್ಕ್ಯುಲರ್ ರಸ್ತೆಯಲ್ಲಿರುವ ನನ್ನ ಹೆತ್ತವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದೆ ಮತ್ತು ಜನವರಿ 14 ರಂದು ನಿಗದಿಯಾಗಿರುವ ಐತಿಹಾಸಿಕ ದಹಿ-ಚುರಾ ಭೋಜ್ ಗೆ ವೈಯಕ್ತಿಕವಾಗಿ ಆಹ್ವಾನಿಸಿದ್ದೆ ಎಂದು ಬರೆದುಕೊಂಡಿದ್ದಾರೆ.
ತಮ್ಮ ಸಹೋದರ, ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿ, ತಮ್ಮ ಸೊಸೆ ಕಾತ್ಯಾಯನಿಯೊಂದಿಗೆ ಸಮಯ ಕಳೆದಿದ್ದನ್ನು ಸಹ ಉಲ್ಲೇಖಿಸಿದ್ದಾರೆ. ಲಾಲು ಪ್ರಸಾದ್ ಯಾದವ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ, ತಂದೆ ಮತ್ತು ಮಗನ ನಡುವಿನ ಸಂಬಂಧಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿವೆಯೇ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ(ಏಜೆನ್ಸೀಸ್​).